ಬೆಂಗಳೂರು, ಅ.8- ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದ್ದ ಕರ್ನಾಟಕವನ್ನು, ಮಹಾರಾಷ್ಟ್ರ ಹಿಂದಿಕ್ಕುತ್ತಿದ್ದು 21 ಸಾವಿರ ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಬೃಹತ್ ಉದ್ಯಮವನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.
ಈಗಾಗಲೇ ಬೆಂಗಳೂರಿನ ಬಿಡದಿಯ ಬಳಿ ಬೃಹತ್ ಉತ್ಪಾದನಾ ಘಟಕವನ್ನು ಟಯೋಟ ಕಿರ್ಲೋಸ್ಕರ್ ಹೊಂದಿದೆ. ಇಲ್ಲಿ ವರ್ಷಕ್ಕೆ ಮೂರು ಲಕ್ಷದ ಇಪ್ಪತ್ತು ಸಾವಿರ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
1997ರಲ್ಲಿ 90 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಆರಂಭವಾದ ಮೊದಲ ಘಟಕದಲ್ಲಿ ವರ್ಷಕ್ಕೆ ಒಂದು ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆ. 2010ರಲ್ಲಿ ಆರಂಭಿಸಲಾದ ಎರಡನೇ ಘಟಕ ಎರಡು ಲಕ್ಷದ ಇಪ್ಪತ್ತು ಸಾವಿರ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಇಲ್ಲಿ ಇನ್ನೋವಾ, ಫಾರ್ಚುನರ್, ಕೊರೋಲಾ ಆಲ್ಟೀಸ್, ಟಯೋಟಾ ಯಾರೀಸ್, ಈಟಿಯೋಸ್ ಲೈವಾ, ಈಟಿಯೋಸ್ ಕ್ರಾಸ್, ಕಾಮ್ರಿ, ಹೈಬ್ರೀಡ್‌ನಂತಹ ಲಕ್ಸುರಿ ಮತ್ತು ಎಕನಾಮಿಕ್ ಕಾರುಗಳನ್ನು ಉತ್ಪಾದಿಸಲಾಗುತ್ತಿದೆ.
ಎರಡು ಘಟಕಗಳಿಂದ ಆರು ಸಾವಿರಕ್ಕೂ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗಿವೆ. ಈ ನಡುವೆ ಸಿಬ್ಬಂದಿಗಳ ಮುಷ್ಕರ ಹಾಗೂ ಜನಪ್ರತಿನಿಧಿಗಳ ಕಿರಿಕಿರಿ ಟಯೋಟ ಕಿರ್ಲೋಸ್ಕರ್ ಸಂಸ್ಥೆಯನ್ನು ಅಸಹನೆಗೀಡು ಮಾಡಿತ್ತು.
ಈ ಹಿನ್ನೆಲೆಯಲ್ಲಿ ಮೂರನೇ ಹಂತದ ಉತ್ಪಾದನಾ ಘಟಕವನ್ನು ಟಯೋಟ ಕಿರ್ಲೋಸ್ಕರ್ ಕರ್ನಾಟಕದ ಬದಲಿಗೆ ಮಹಾರಾಷ್ಟ್ರದಲ್ಲಿ ಸ್ಥಾಪಿಸಲು ನಿರ್ಧರಿಸಿದೆ. ನವಯುಗದ ಅತ್ಯಾಧುನಿಕ ಕಾರುಗಳು ಅದರಲ್ಲೂ, ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ಮೂರನೇ ಘಟಕದಲ್ಲಿ ಉತ್ಪಾದಿಸಲಾಗಿದೆ.
ಕರ್ನಾಟಕ ಸರ್ಕಾರ ತನ್ನನ್ನು ತಾನು ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಚಾಂಪಿಯನ್ ಎಂದು ಕರೆದುಕೊಳ್ಳುತ್ತದೆ. ಆದರೆ ಮೂರನೇ ಹಂತದ ಉತ್ಪಾದನಾ ಘಟಕವನ್ನು ಟಯೋಟದ ಮೂರನೇ ಘಟಕವನ್ನು ರಾಜ್ಯದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗದೆ ಮುಗ್ಗರಿಸಿದೆ.
ಜಪಾನ್ ಮೂಲದ ಟಯೋಟ ಸಂಸ್ಥೆಯ ಜೊತೆ ಮಹಾರಾಷ್ಟ್ರ ಸರ್ಕಾರ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. 21 ಸಾವಿರ ಕೋಟಿರೂ.ಗಳ ಮೂರನೇ ಹಂತದ ಉತ್ಪಾದನಾ ಘಟಕ ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರ ಹಾಗೂ ಟಯೋಟ ಸಂಸ್ಥೆಯ ಜೊತೆ ಇದೇ ಜು. 31ರಂದು ಪರಸ್ಪರ ಒಡಂಬಡಿಕೆಯಾಗಿತ್ತು.
ಮಹಾರಾಷ್ಟ್ರ ಸರ್ಕಾರ 827 ಎಕರೆ ಭೂಮಿಯನ್ನು ಈಗಾಗಲೇ ಟಯೋಟ ಸಂಸ್ಥೆಗೆ ಹಸ್ತಾಂತರಿಸಿದೆ. 2026ರ ಜನವರಿ ವೇಳೆಗೆ ಉತ್ಪಾದನೆ ಆರಂಭಿಸುವ ಗುರಿಹೊಂದಿರುವ ಟಯೋಟ ಕಿರ್ಲೋಸ್ಕರ್ ಮೂರನೇ ಘಟಕದಿಂದ 8 ಸಾವಿರ ನೇರ ಹಾಗೂ 18 ಸಾವಿರ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.
ಕರ್ನಾಟಕದ ಬಿಡದಿಯ ಘಟಕಕ್ಕಿಂತಲೂ ಮುಂಬೈ, ದೆಹಲಿ ಕೈಗಾರಿಕಾ ಕಾರಿಡಾರಿನಲ್ಲಿನ ಛತ್ರಪತಿ ಸಾಂಬಾಜಿ ನಗರ್‌ನಲ್ಲಿ ಆರಂಭಗೊಳ್ಳುವ ಹಸಿರು ಕ್ಷೇತ್ರ ಉತ್ಪಾದನಾ ಘಟಕವಾಗಲಿರುವ ಇಲ್ಲಿ ವರ್ಷಕ್ಕೆ 4 ಲಕ್ಷ ವಾಹನಗಳನ್ನು ಉತ್ಪಾದಿಸುವ ಗುರಿ ಇದೆ.
ವರ್ಷದಿಂದ ವರ್ಷಕ್ಕೆ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಾ ಆಟೋ ಮೊಬೈಲ್ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿರುವ ಟಯೋಟ ಕಿರ್ಲೋಸ್ಕರ್ ಸಂಸ್ಥೆತೆಯನ್ನು ಉಳಿಸಿಕೊಳ್ಳುವಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿರುವುದು ಚರ್ಚೆಗೆ ಗ್ರಾಸವಾಗಿದೆ.