Friday, November 22, 2024
Homeರಾಷ್ಟ್ರೀಯ | Nationalಮಹಾರಾಷ್ಟ್ರ - ಜಾರ್ಖಂಡ್ ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ

ಮಹಾರಾಷ್ಟ್ರ – ಜಾರ್ಖಂಡ್ ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ

Maharashtra-Jharkhand election results

ನವದೆಹಲಿ,ನ.22- ಎನ್ಡಿಎ ಹಾಗೂ ಇಂಡಿ ಮೈತ್ರಿಕೂಟಗಳ ನಡುವಿನ ಜಿದ್ದಾಜಿದ್ದಿ ಹೋರಾಟಕ್ಕೆ ಸಾಕ್ಷಿಯಾಗಿರುವ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಾಳೆ ನಡೆಯಲಿದೆ. ಮಹಾರಾಷ್ಟ್ರದ 288, ಜಾರ್ಖಂಡ್ನ 80 ಜೊತೆಗೆ ಉತ್ತರಪ್ರದೇಶ 8, ಉತ್ತರಖಂಡ 1, ಪಂಜಾಬ್ 4, ರಾಜಸ್ಥಾನ 7, ಅಸ್ಸಾಂ 5, ಸಿಕ್ಕಿಂ 2, ಮಧ್ಯಪ್ರದೇಶ 2, ಗುಜರಾತ್ 1, ಕರ್ನಾಟಕ 3 ಹಾಗೂ ಕೇರಳದ ವಯನಾಡು ಮತ್ತು ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶವೂ ನಾಳೆ ಪ್ರಕಟವಾಗಲಿದೆ.

ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಏಕಕಾಲಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಬಹುತೇಕ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ಬುಧವಾರ ಮುಕ್ತಾಯಗೊಂಡ ಮತದಾನದ ನಂತರ ವಿವಿಧ ಖಾಸಗಿ ಸಂಸ್ಥೆಗಳು ನಡೆಸುವ ಮತದಾನೋತ್ತರ ಸಮೀಕ್ಷೆಯಲ್ಲಿ ಮಹಾರಾಷ್ಟ್ರ ಹಾಗೂ ಜಾರ್ಖಂಡ್ನಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ.

ಮಹಾರಾಷ್ಟ್ರದಲ್ಲಿ ಬಹುತೇಕ ಸಮೀಕ್ಷೆಗಳು ಎನ್ಡಿಎಗೆ ಜೈ ಅಂದಿದ್ದರೆ, ಒಂದರೆಡು ಸಮೀಕ್ಷೆಗಳು ಮಹಾವಿಕಾಸ್ ಅಘಡಿಯೂ ಅಧಿಕಾರಕ್ಕೆ ಬರಬಹುದೆಂದು ಹೇಳಿವೆ. ಗುಡ್ಡಗಾಡು, ಆದಿವಾಸಿಗಳು ಹಾಗೂ ನಕ್ಸಲ್ ಪೀಡಿತ ರಾಜ್ಯವಾಗಿರುವ ಜಾರ್ಖಂಡ್ನಲ್ಲಿ ಎನ್ಡಿಎ ಹಾಗೂ ಇಂಡಿಯಾ ಮೈತ್ರಿಕೂಟ ನಡುವೆ ಬಿರುಸಿನ ಸ್ಪರ್ಧೆ ಇದೆ.

ಆಡಳಿತಾರೂಢ ಜೆಎಂಎಂ ಸರ್ಕಾರಕ್ಕೆ ವಿರೋಧಿ ಅಲೆಯಿದ್ದು, ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ಮತಗಟ್ಟೆ ಸಮೀಕ್ಷೆಗಳು ಹೇಳಿವೆ.ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಸವಾಲಾಗಿರುವ 8 ವಿಧಾನಸಭಾ ಕ್ಷೇತ್ರಗಳ ಫಲಿತಾಂಶವು ನಾಳೆ ಪ್ರಕಟವಾಗಲಿದೆ.

ಇಲ್ಲಿ ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ನಡುವೆ ಪ್ರಬಲ ಸ್ಪರ್ಧೆ ಇದೆ. ಅದೇ ರೀತಿ ಉತ್ತರಖಂಡ್ನ 1 ಮತ್ತು ಪಂಜಾಬ್ನ 4 ಸ್ಥಾನಗಳಿಗೆ ಮತದಾನ ನಡೆದಿದ್ದು, ನಾಳೆ ಫಲಿತಾಂಶ ಪ್ರಕಟವಾಗಲಿದೆ.

ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಕೇರಳದ ವಯನಾಡು ಮತ್ತು ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಬಹಿರಂಗವಾಗಲಿದೆ.

ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬ ಮೂರನೇ ಕುಡಿ ಪ್ರಿಯಾಂಕ ವಾದ್ರ ವಯನಾಡಿನಿಂದ ಸ್ಪರ್ಧಿಸಿದ್ದು, ಅವರ ರಾಜಕೀಯ ಭವಿಷ್ಯ ಏನಾಗಲಿದೆ ಎಂಬುದು ಫಲಿತಾಂಶದಿಂದ ಗೊತ್ತಾಗಲಿದೆ. ಒಟ್ಟಿನಲ್ಲಿ ನಾಳೆ ಪ್ರಕಟವಾಗಲಿರುವ ಫಲಿತಾಂಶ ಹಲವು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡಲಿದೆ.

RELATED ARTICLES

Latest News