Saturday, August 16, 2025
Homeಬೆಂಗಳೂರುಬೆಂಗಳೂರಿನ ನಗರ್ತ ಪೇಟೆಯ ವಾಣಿಜ್ಯ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಅವಘಢ, ಇಬ್ಬರ ಸಜೀವ ದಹನ

ಬೆಂಗಳೂರಿನ ನಗರ್ತ ಪೇಟೆಯ ವಾಣಿಜ್ಯ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಅವಘಢ, ಇಬ್ಬರ ಸಜೀವ ದಹನ

Major fire breaks out in a commercial building in Nagarpet, two burnt alive

ಬೆಂಗಳೂರು,ಆ.16– ನಗರದ ನಗರ್ತ ಪೇಟೆಯಲ್ಲಿರುವ ವಾಣಿಜ್ಯ ಕಟ್ಟಡವೊಂದರಲ್ಲಿ ಇಂದು ಮುಂಜಾನೆ ಭಾರೀ ಬೆಂಕಿ ಅವಘಢ ಸಂಭವಿಸಿದ್ದು, ಇಬ್ಬರು ಸುಟ್ಟು ಕರಕಲಾಗಿದ್ದಾರೆ. ಹಲಸೂರುಗೇಟ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿನ ನಾಲ್ಕು ಹಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ರಾಜಸ್ಥಾನ ಮೂಲದ ಮದನ್‌ಸಿಂಗ್‌ ಹಾಗೂ ಮತ್ತೊಬ್ಬರು ಸುಟ್ಟು ಕರಕಲಾಗಿದ್ದು, ಇವರ ಹೆಸರು, ವಿಳಾಸ ಸದ್ಯಕ್ಕೆ ತಿಳಿದುಬಂದಿಲ್ಲ.

ಮನೆಯೊಳಗೆ ಮದನ್‌ ಪತ್ನಿ ಹಾಗೂ ಇಬ್ಬರು ಮಕ್ಕಳು ಸಿಲುಕಿರುವ ಶಂಕೆಯಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರೆದಿದೆ. ಸಂದೀಪ್‌ ಮತ್ತು ಬಾಲಕೃಷ್ಣ ಎಂಬುವರ ಒಡೆತನದ 4 ಅಂತಸ್ತಿನ ಕಟ್ಟಡದಲ್ಲಿ ಇಂದು ಮುಂಜಾನೆ 3.30ರ ಸುಮಾರಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ನೆಲಮಹಡಿ ಸೇರಿದಂತೆ ಎರಡು ಮಹಡಿಯಲ್ಲಿ ಪ್ಲಾಸ್ಟಿಕ್‌ ಗೋದಾಮು ಇದೆ. ಮೊದಲ ಮಹಡಿಯಲ್ಲಿ ಮೂವರು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 3ನೇ ಮಹಡಿಯಲ್ಲಿ ಕುಟುಂಬವೊಂದು ವಾಸವಿದ್ದು, ಮುಂಜಾನೆ ಮನೆಯೊಳಗಿನಿಂದ ಮದನ್‌ ಸಿಂಗ್‌ ಹೊರಗೆ ಬಂದಾಗ ಬೆಂಕಿ ನೋಡಿ ತಕ್ಷಣ ಮನೆಗೆ ಬೀಗ ಹಾಕಿ ಹೊರಗೆ ಬರುವಷ್ಟರಲ್ಲಿ ಬೆಂಕಿಯ ಜ್ವಾಲೆಗೆ ಸಿಲುಕಿ ಸುಟ್ಟು ಕರಕಲಾಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ವಾಹನಗಳೊಂದಿಗೆ ಬಂದು ಸತತ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಆದರೆ ಇವರ ಗುರುತು ಸದ್ಯಕ್ಕೆ ಸಿಕ್ಕಿಲ್ಲ. ಸತತ ನಾಲ್ಕು ತಾಸಿಗೂ ಹೆಚ್ಚು ಕಾಲ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ತೊಡಗಿದರಾದರೂ ಬೆಂಕಿ ತಹಬದಿಗೆ ಬಂದಿಲ್ಲ.

4ನೇ ಮಹಡಿಯಲ್ಲಿ ಪ್ಲಾಸ್ಟಿಕ್‌ ಫ್ಲೋರ್‌ ಮ್ಯಾಟ್‌ ತಯಾರಿಸುವ ಘಟಕವಿದೆ. ಈ ಘಟಕದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು ಕಟ್ಟಡ ಪೂರ್ತಿ ಆವರಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಮನೆಯೊಳಗೆ ಮೂವರು ಸಿಲುಕಿದ್ದಾರೆಂಬ ಶಂಕಿಸಲಾಗಿದ್ದು, ಅವರಿಗಾಗಿ ಕಾರ್ಯಚರಣೆ ಮುಂದುವರೆದಿದೆ. ಹಲಸೂರುಗೇಟ್‌ ಠಾಣೆ ಪೊಲೀಸರು ಸಹ ಸ್ಥಳದಲ್ಲಿದ್ದು ಪರಿಶೀಲಿಸುತ್ತಿದ್ದಾರೆ. ಬಹುಶಃ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ನಿನ್ನೆ ಆಡುಗೋಡಿಯ ಚಿನ್ನಯ್ಯನಪಾಳ್ಯದ ಶ್ರೀರಾಮ ಕಾಲೋನಿಯ ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಬಾಲಕ ಮೃತಪಟ್ಟ ಘಟನೆ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ಇಂದು ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ.

RELATED ARTICLES

Latest News