ಬೆಂಗಳೂರು,ಜ.24- ಉದ್ದೇಶಿತ ಏಕೀಕೃತ ಘನತ್ಯಾಜ್ಯ ನಿರ್ವಹಣೆ ಪದ್ಧತಿ ಯೋಜನೆ ಜಾರಿಯಲ್ಲಿ ಪಾಲ್ಗೊಳ್ಳಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿರುವುದು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ತಿಳಿಸಿದ್ದಾರೆ.
ಸುಮಾರು 40 ಸಾವಿರ ಕೋಟಿ ರೂ.ಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 25 ವರ್ಷಗಳ ಅವಧಿಗೆ ಏಕೀಕೃತ ಘನತ್ಯಾಜ್ಯ ನಿರ್ವಹಣೆ ಪದ್ಧತಿ ಜಾರಿಗೆ ಸರ್ಕಾರ ನಿರ್ಧರಿಸಿ ಟೆಂಡರ್ ಆಹ್ವಾನಿಸಿತ್ತು. ಆದರೆ, ಯೋಜನೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಕುರಿತಂತೆ ನಾನು ಲೋಕಾಯುಕ್ತ, ಇಡಿ ಹಾಗೂ ರಾಜ್ಯಪಾಲರಿಗೆ ದೂರು ನೀಡಿದ್ದೇ ಹೀಗಾಗಿ ಟೆಂಡರ್ ಸಲ್ಲಿಸಲು ಕೊನೆಯ ದಿನ ಕಳೆದರೂ ಯಾವೊಬ್ಬ ಗುತ್ತಿಗೆದಾರರು ಅರ್ಜಿ ಸಲ್ಲಿಸಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಯೋಜನೆಯಿಂದ ಹತ್ತಾರು ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಲೂಟಿ ಹೊಡೆಯುವ ಸಂಚನ್ನು ರೂಪಿಸಲಾಗಿದ್ದ ಸಂಗತಿಯ ಬಗ್ಗೆ ದಾಖಲೆಗಳ ಸಹಿತ ಮಾನ್ಯ ಲೋಕಾಯುಕ್ತ ಪೋಲೀಸರಿಗೆ ಮತ್ತು ಜಾರಿ ನಿರ್ದೇಶನಾಲಯದಲ್ಲಿ ದೂರನ್ನು ಸಲ್ಲಿಸಲಾಗಿತ್ತು ಹಾಗೂ ಸಂವಿಧಾನದ 74ನೇ ತಿದ್ದುಪಡಿಯ ನಿಯಮಗಳನ್ನು ಗಾಳಿಗೆ ತೂರಿ ಸಂವಿಧಾನಬಾಹಿರ ನಿರ್ಣಯವನ್ನು ತೆಗೆದುಕೊಂಡಿದ್ದ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಸಚಿವ ಸಂಪುಟದ ಎಲ್ಲ 33 ಸಚಿವರ ವಿರುದ್ಧ ದೂರನ್ನು ದಾಖಲಿಸಲಾಗಿತ್ತಲ್ಲದೆ, ಘನತೆವೆತ್ತ ರಾಜ್ಯಪಾಲರಿಗೂ ಸಹ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು.
ಈ ಮೊದಲು ಸಿದ್ಧರಾಮಯ್ಯ ಸರ್ಕಾರ ಮತ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಕಂಪನಿ ನಿಯಮಿತದ ಅಧಿಕಾರಿಗಳು ಮತ್ತು ಬಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಒಂದಾಗಿ – ಮುಂಚಿತವಾಗಿಯೇ ನಿರ್ಧರಿಸಿದ್ದಂತೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿದ್ದ ರಾಮ್ಕಿ, ವೊಯಾಂಟ್ಸ್ ಮತ್ತಿತರ ಸಂಸ್ಥೆಗಳು, ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಾಗುತ್ತಿದ್ದಂತೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಿಂದೇಟು ಹಾಕಿವೆ.
ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ ಯೋಜನೆಗೆ ಟೆಂಡರ್ ಆಹ್ವಾನಿಸಿದ್ದರ ಬಗ್ಗೆ ಮತ್ತು ಸಿದ್ಧರಾಮಯ್ಯ ಸಚಿವ ಸಂಪುಟದ ಸಂವಿಧಾನ ಬಾಹಿರ ನಿರ್ಣಯದ ಬಗ್ಗೆ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನೂ ಸಹ ಸಲ್ಲಿಸಲಾಗಿದು ಜ. 21 ರಂದು ಈ ಸಂಬಂಧ ವಿಚಾರಣೆಯನ್ನು ಕೈಗೆತ್ತಿಕೊಂಡ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ರಾಜ್ಯ ಸರ್ಕಾರಕ್ಕೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳಿಗೆ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಕಂಪನಿ ನಿಯಮಿತದ ಮುಖ್ಯಸ್ಥರಾದ ಡಾ. ಹರೀಶ್ ಮತ್ತು ಬಸವರಾಜ್ ಕಬಾಡೆ ಅವರಿಗೆ ನೋಟೀಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಫೆ.4ಕ್ಕೆ ಮುಂದೂಡಿದೆ.
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ, ಜಾರಿ ನಿರ್ದೇಶನಾಲಯದಲ್ಲಿ ಮತ್ತು ಲೋಕಾಯುಕ್ತದಲ್ಲಿ ದೂರುಗಳು ದಾಖಲಾಗಿರುವ ಸಂಗತಿ ಮತ್ತು ಘನತೆವೆತ್ತ ರಾಜ್ಯಪಾಲರಿಗೆ ದೂರನ್ನು ಸಲ್ಲಿಸಿರುವ ಬಗ್ಗೆ ಮಾಹಿತಿ ದೊರೆತಿರುವುದರಿಂದ ಸದರಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪೂರ್ವ ನಿಗದಿತ ಗುತ್ತಿಗೆದಾರರು ಹಿಂದೇಟು ಹಾಕಿರುತ್ತಾರೆ ಎಂಬ ವಿಷಯವು ತಿಳಿದುಬಂದಿರುತ್ತದೆ. ಇದು ಸಿದ್ಧರಾಮಯ್ಯ ಸರ್ಕಾರಕ್ಕೆ ಅತಿ ದೊಡ್ಡ ಹಿನ್ನಡೆ ಹಾಗೂ ನನ್ನ ಹೋರಾಟಕ್ಕೆ ಸಂದ ಪ್ರಾಥಮಿಕ ಜಯ ಎಂದು ಭಾವಿಸುತ್ತೇನೆ ಎಂದು ರಮೇಶ್ ಮಾಹಿತಿ ನೀಡಿದ್ದಾರೆ.