ಬೆಂಗಳೂರು, ಸೆ.11- ಪ್ರಚೋದನಕಾರಿ ಭಾಷಣ ಮಾಡುವುದು, ಹಿಂಸೆಗೆ ಪ್ರೇರೇಪಿಸುವುದು ಬಿಜೆಪಿಯವರ ಪದ್ಧತಿ ಹಾಗೂ ಸಂಸ್ಕೃತಿ ಎಂದು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ನಡವಳಿಕೆ ಜನರ ಮುಂದೆ ಬಯಲಾಗಿದೆ ಎಂದು ತಿರುಗೇಟು ನೀಡಿದರು.ಸ್ಥಳೀಯ ಸಂಸ್ಥೆಗಳಲ್ಲಿ ಮತಪತ್ರ ಹಾಗೂ ಮತಯಂತ್ರ ಬಳಕೆಗೆ ಅವಕಾಶ ಕಲ್ಪಿಸಿ ಬಿಜೆಪಿಯ ಸರ್ಕಾರದ ಅವಧಿಯಲ್ಲೇ ಕಾನೂನು ರೂಪಿಸಲಾಗಿದೆ. ಅದರಂತೆ ನಮ ಸರ್ಕಾರ ಮತಪತ್ರಗಳನ್ನು ಬಳಸಿ, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ನಿರ್ಧರಿಸಿದೆ ಎಂದರು.
ಬಿಜೆಪಿಯವರು ಮಾಡಿರುವ ಕಾನೂನು ತಿದ್ದುಪಡಿ ಚುನಾವಣಾ ಆಯೋಗಕ್ಕೆ ಅನ್ವಯಿಸುತ್ತದೆ. ಇತ್ತೀಚೆಗೆ ಗ್ರೇಟರ್ ಬೆಂಗಳೂರು ಕಾಯ್ದೆ ರೂಪಿಸುವಾಗ ತಾವು ಬಿಜೆಪಿ ಸರ್ಕಾರದ ಕಾನೂನು ತಿದ್ದುಪಡಿಯನ್ನು ಅನುಸರಿಸಿದ್ದೇವೆ ಎಂದು ಹೇಳಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಬಗ್ಗೆ ತಮಗೆ ಮಾಹಿತಿಯಿಲ್ಲ. ವಿಷಯ ತಿಳಿದುಕೊಂಡ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು. ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೆಂಟ್ ಮೇರಿಸ್ ಹೆಸರಿಡಬೇಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಸ್ತಾವನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, ಮೆಟ್ರೋ ನಿಲ್ದಾಣಗಳಿಗೆ ಹೆಸರಿಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಈ ವಿಚಾರವಾಗಿ ನಾವು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ನಾಯಕರು. ಯಾರೆಲ್ಲಾ ಹುದ್ದೆ ಹಾಗೂ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಅವರು ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಕಾರ್ಯಕರ್ತರಾಗಿ, ಪಕ್ಷದ ಪದಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡವರು ಅದಕ್ಕಾಗಿ ಸಮಯ ಮೀಸಲಿಡಬೇಕು. ಈ ಹುದ್ದೆಗಳು ಹೇಳಿಕೊಳ್ಳುವುದಕ್ಕೆ ಪಡೆಯುವಂತಹದ್ದಲ್ಲ. ಇದು ಪಕ್ಷ ಸಂಘಟನೆಗೆ ಹಾಗೂ ಪಕ್ಷದ ಆಚಾರ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡಲು ನೀಡಲಾಗುವುದು ಎಂದು ತಿಳಿಸಿದರು.