Monday, September 8, 2025
Homeರಾಜ್ಯಕಷ್ಟ ತೋಡಿಕೊಳ್ಳಲು ಬಂದ ರೈತನಿಗೆ ಮಲ್ಲಿಕಾರ್ಜುನ ಖರ್ಗೆ ಅಪಮಾನ : ಹೆಚ್‌ಡಿಕೆ ಆರೋಪ

ಕಷ್ಟ ತೋಡಿಕೊಳ್ಳಲು ಬಂದ ರೈತನಿಗೆ ಮಲ್ಲಿಕಾರ್ಜುನ ಖರ್ಗೆ ಅಪಮಾನ : ಹೆಚ್‌ಡಿಕೆ ಆರೋಪ

Mallikarjun Kharge insults farmer who came to express his grief: HDK alleges

ಬೆಂಗಳೂರು, ಸೆ.8-ಕಷ್ಟದಲ್ಲಿರುವ ರೈತ ತನ್ನ ದುಃಖ ತೋಡಿಕೊಳ್ಳಲು ಬಂದಾಗ ಸಾಂತ್ವನ ಹೇಳುವ ಬದಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಪಮಾನ ಮಾಡಿದ್ದಾರೆ. ಈ ನಡವಳಿಕೆ ಕಾಂಗ್ರೆಸ್‌‍ ಪಕ್ಷದ ಪರಂಪರಾಗತ ದರ್ಪ, ಅಹಂಗೆ ಸಾಕ್ಷಿ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಸಂಬಂಧ ತಮ X ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ರೈತರ ಬಗ್ಗೆ ನಿಮ ನಡವಳಿಕೆ ಕಂಡು ಬಹಳ ಬೇಸರವಾಯಿತು. ನಿಮಂತಹ ಹಿರಿಯರಿಂದ ಇಂಥ ವರ್ತನೆಯನ್ನು ನಾನು ಖಂಡಿತ ನಿರೀಕ್ಷೆ ಮಾಡಿರಲಿಲ್ಲ. ಕಷ್ಟದಲ್ಲಿರುವ ರೈತ ನಿಮಂಥವರ ಬಳಿ ಬಂದು ದುಃಖ ತೋಡಿಕೊಳ್ಳದೆ ಇನ್ನು ಯಾರ ಬಳಿ ಹೋಗಿ ಹೇಳಿಕೊಳ್ಳಬೇಕು? ಎಂದು ಪ್ರಶ್ನಿಸಿದ್ದಾರೆ.

ನೀವು ರಾಜ್ಯಸಭೆಯ ಪ್ರತಿಪಕ್ಷದ ನಾಯಕರು ಹಾಗೂ ಅಖಿಲ ಭಾರತ ಕಾಂಗ್ರೆಸ್‌‍ ಸಮಿತಿ ಅಧ್ಯಕ್ಷರು. ಇದೆಲ್ಲವನ್ನೂ ತಾವು ಮರೆತು ಮಾತನಾಡಿದ್ದೀರಿ. ಇದು ತಮಗೆ ಭೂಷಣವಲ್ಲ. ದುಃಖ ಹೇಳಿಕೊಳ್ಳಲು ಬಂದ ರೈತನ ಮೇಲೆ ಈ ಪರಿಯ ದರ್ಪ ಅಗತ್ಯವಿರಲಿಲ್ಲ.

ನೀವೂ ತೊಗರಿ ರೈತರೇ ಆಗಿರಬಹುದು. ಆದರೆ 40 ಎಕರೆಯಲ್ಲಿ ಬೆಳೆಯುವ ತಮಗೂ, ಒಂದು ಅಥವಾ ಎರಡು ಎಕರೆಯಲ್ಲಿ ಬೆಳೆಯುವ ಆ ಬಡರೈತನಿಗೂ ಹೋಲಿಕೆಯೇ? ನಷ್ಟವನ್ನು ಭರಿಸುವ ಶಕ್ತಿ ನಿಮಗಿರುತ್ತದೆ, ರೈತನಿಗೆ ಆ ಶಕ್ತಿ ಇರಬೇಕಲ್ಲವೇ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನದು 4 ಎಕ್ರೆ ಹಾಳಾಗಿದೆ. ನನ್ನದು 40 ಎಕ್ರೆ ಹಾಳಾಗಿದೆ. ಪ್ರಚಾರಕ್ಕಾಗಿ ತೊಗರಿ ತೆಗೆದುಕೊಂಡು ಬಂದ್ದಿದ್ದೀಯ? ತೊಗರಿ ಅಷ್ಟೆ ಅಲ್ಲ; ಉದ್ದು, ಹೆಸರು ಕೂಡ ಹಾಳಾಗಿರುವುದು ನನಗೆ ಗೊತ್ತಿದೆ. ಆರು ಹಡೆದವಳ ಮುಂದೆ ಮೂರು ಹಡೆದವಳು ಹೇಳಿದಂತಾಯಿತು. ಹೀಗೆಂದರೇನು ಖರ್ಗೆಯವರೇ? ಹಿರಿಯರು ತಾವೇ ಹೇಳಬೇಕು. ರೈತನನ್ನು ಅಪಮಾನಿಸಿದ್ದೀರಿ. ಜತೆಗೆ, ತಾಯಿಯನ್ನು ಅಪಮಾನಿಸಿದ್ದೀರಿ. ಇದು ಸರಿಯಲ್ಲ. ಕೊನೇಪಕ್ಷ ಆ ವ್ಯಕ್ತಿಗೆ ಸಾಂತ್ವನ ಹೇಳಿ, ಆತನ ಕಣ್ಣೀರು ಒರೆಸಬಹುದಿತ್ತು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Latest News