ನವದೆಹಲಿ,ಏ.14- ಭಾರತೀಯ ಜನತಾ ಪಕ್ಷದ ಲೋಕಸಭಾ ಚುನಾವಣಾ ಪ್ರಣಾಳಿಕೆ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಳೆದ 10 ವರ್ಷಗಳಲ್ಲಿ ನೀವು ಬಡವರಿಗಾಗಿ ಏನನ್ನೂ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದರು, ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‍ಪಿ) ಹೆಚ್ಚಿಸುವುದಾಗಿ ಮತ್ತು ಕಾನೂನುಬದ್ಧ ಗ್ಯಾರಂಟಿ ನೀಡುವುದಾಗಿ ಘೋಷಿಸಿದ್ದರು. ಇವೆಲ್ಲವನ್ನೂ ನೀಡುವಂತೆ ದೇಶಾದ್ಯಂತ ರೈತರು ಒತ್ತಾಯಿಸುತ್ತಿದ್ದಾರೆ. ಈ ವರ್ಷಾರಂಭದಲ್ಲಿ ರೈತರು ಕೇಂದ್ರ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಯನ್ನೂ ನಡೆಸಿದ್ದರು.
ಯುವಕರು ಉದ್ಯೋಗವನ್ನು ಹುಡುಕುತ್ತಿದ್ದಾರೆ. ಹಣದುಬ್ಬರ ಹೆಚ್ಚುತ್ತಿದೆ…ಅವರು ಈ ಸಮಸ್ಯೆಗಳ ಬಗ್ಗೆ ಚಿಂತಿಸುತ್ತಿಲ್ಲ. ಅವರು ತಮ್ಮ ಅಧಿಕಾರಾವಧಿಯಲ್ಲಿ ದೇಶದ ಎಲ್ಲ ಜನರಿಗೆ ಅನುಕೂಲವಾಗುವಂತಹ ಯಾವುದೇ ಕೆಲಸವನ್ನು ಮಾಡಲಿಲ್ಲ . ಇದು ಜನರಿಗೆ ನೀಡಲು ಏನೂ ಇಲ್ಲ ಎಂದು ಸಾಬೀತುಪಡಿಸುತ್ತದೆ ಎಂದು ಖರ್ಗೆ ಮಾಧ್ಯಮಗಳಿಗೆ ತಿಳಿಸಿದರು.