ಕೊರೊನಾ ಲಸಿಕೆ ಸುರಕ್ಷತೆ ಪ್ರಶ್ನಿಸಿದ ಮಮತಾ

ಕೊಲ್ಕತ್ತಾ, ಜ.12- ಕೊರೊನಾ ಲಸಿಕೆಯ ಸಾಮಥ್ರ್ಯ ಹಾಗು ಸುರಕ್ಷತೆಯ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನೆ ಎತ್ತಿದ್ದಾರೆ. ಲಸಿಕೆ ಆಂದೋಲನದ ಬಗ್ಗೆ ಪ್ರಧಾನ ನರೇಂದ್ರ ಮೋದಿ ಅವರು ನಿನ್ನೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಸಮಾಲೋಚನಾ ಸಭೆ ನಡೆಸಿದರು. ಆ ವೇಳೆ ಮಾತನಾಡಿರುವ ಮಮತಾ ಬ್ಯಾನರ್ಜಿ ಅವರು, ಕೇಂದ್ರ ಸರ್ಕಾರ ಅಂಗೀಕಾರ ಮಾಡಿರುವ ಎರಡು ಲಸಿಕೆಗಳಲ್ಲಿ ರಾಜ್ಯ ಸರ್ಕಾರ ತಮಗೆ ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಂಡು ರಾಜ್ಯಗಳ ಮೇಲೆ ಹೇರುತ್ತಿದೆ. ರಾಜ್ಯಗಳು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಲ್ಲಿ ತಮಗೆ ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಬೇಕು ಎಂದು ಮಮತಾ ಪ್ರತಿಪಾದಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ಹಾಕುವುದಾಗಿ ಈಗಾಗಲೇ ಘೋಷಿಸಿರುವ ಮಮತಾ ಬ್ಯಾನರ್ಜಿ, ಎರಡು ಲಸಿಕೆಗಳಿಗೆ ಕೇಂದ್ರ ಸರ್ಕಾರ ಅಂಗೀಕಾರ ನೀಡಿದೆ. ಆದರೆ ತನಗೆ ಇಷ್ಟ ಬಂದಿದ್ದನ್ನು ಪೂರೈಕೆ ಮಾಡುತ್ತಿದೆ ಎಂದಿರುವುದಲ್ಲದೆ, ಲಸಿಕೆ ಸುರಕ್ಷತೆಯಲ್ಲೇನಾದರೂ ಲೋಪ ಇದೆಯೇ ಎಂದು ಪ್ರಶ್ನಿಸಿದ್ದಲ್ಲದೆ, ಲಸಿಕೆ ಆಯ್ಕೆ ಸ್ವಾತಂತ್ರ್ಯವನ್ನು ರಾಜ್ಯಗಳಿಗೆ ನೀಡಬೇಕು ಎಂದು ಹೇಳಿದ್ದಾರೆ.

ಇದಕ್ಕೆ ಉತ್ತರ ನೀಡಿರುವ ನೀತಿ ಆಯೋಗದ ಸದಸ್ಯ ಪ್ರೊ. ಡಾ.ವಿನೋದ್ ಕೆ.ಪೌಲ್ ಅವರು, ಎರಡು ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿವೆ. ಇದು ವೈಜ್ಞಾನಿಕವಾಗಿ ದೃಢಪಟ್ಟಿದೆ ಎಂದು ಹೇಳಿದ್ದಾರೆ.