ಬೆಂಗಳೂರು,ಜೂ.21-ಕಾರು ಬಾಡಿಗೆ ಪಡೆದು ನಂತರ ಅದಕ್ಕೆ ಅಳವಡಿಸಿದ್ದ ಜಿಪಿಎಸ್ ತೆಗೆದು ನಕಲಿ ದಾಖಲೆ ಸೃಷ್ಟಿಸಿ ನಂತರ ಮಾರಾಟ ಮತ್ತು ಗಿರವಿ ಇಡುತ್ತಿದ್ದ ವಂಚಕನೊಬ್ಬನನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿ 90 ಲಕ್ಷ ವೌಲ್ಯದ 9 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾರುತಿ ಶಿ್ಟ್ ಕಾರಿನ ಮಾಲೀಕನಿಂದ ಒಂದು ತಿಂಗಳ ಮಟ್ಟಿಗೆ ಬಾಡಿಗೆಗೆಂದು ಕಾರು ಬಾಡಿಗೆಗೆ ಪಡೆದ ಈ ವಂಚಕ ನಂತರ ಮಾಲೀಕರ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದನು.
ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಂಚಕನ ಬಗ್ಗೆ ಹಲವು ಮಾಹಿತಿಗಳನ್ನು ಸಂಗ್ರಹಿಸಿ ಶಿವಮೊಗ್ಗದಲ್ಲಿ ಆತನನ್ನು ಬಂಽಸಿ ವಿಚಾರಣೆಗೆ ಒಳಪಡಿಸಿದಾಗ ಕಾರುಗಳನ್ನು ಕಳವು ಮಾಡುತ್ತಿದ್ದುದು ಗೊತ್ತಾಗಿದೆ.
ಆರೋಪಿಯು ಕಳ್ಳತನ ಮಾಡಿದ ಕಾರುಗಳ ನಕಲಿ ದಾಖಲೆ ಸೃಷ್ಟಿಸಿ ಅವುಗಳ ಪೈಕಿ 3 ಕಾರುಗಳನ್ನು ಅಡಮಾನವಿಟ್ಟಿದ್ದು, ಆರು ಕಾರುಗಳನ್ನು ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಆರೋಪಿಯು ಕಾರು ಮಾಲೀಕರಿಗೆ ಹಾಗೂ ಕಾರು ಖರೀದಿದಾರರಿಗೆ ಮೋಸ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದ್ದು, ಒಟ್ಟು 9 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.