ಬೆಂಗಳೂರು, ಆ.12-ಸಾಲ ತೀರಿಸಲು ಕೆಲಸ ನೀಡಿದ ಮಾಲೀಕರ ಮನೆಯಲ್ಲೇ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ವ್ಯವಸ್ಥಾಪಕನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿ, 89 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜಯನಗರದ 8ನೇ ಬ್ಲಾಕ್‌ನ ಸಂಗಂ ಸರ್ಕಲ್‌ನ ನಿವಾಸಿಯೊಬ್ಬರು ಬಿಸಿನೆಸ್ ನಡೆಸಲು ತಮ ಮನೆಯಲ್ಲೇ ಕಚೇರಿ ಮಾಡಿಕೊಂಡಿದ್ದು, ಆ ಕಚೇರಿಯಲ್ಲಿ ವ್ಯವಸ್ಥಾಪಕನಾಗಿ ಕತ್ರಿಗುಪ್ಪೆಯ ನಿವಾಸಿ ಕಾರ್ತಿಕ್ (40) ಎಂಬಾತ ಇಪ್ಪತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದನು. ಅವರ ಮನೆಯವರ ನಂಬಿಕೆಗಳಿಸಿದ್ದ ಕಾರ್ತಿಕ್, ಮಾಲೀಕರ ಬಳಿಯಿರುವ ಹಣ-ಆಭರಣಗಳ ಬಗ್ಗೆ ತಿಳಿದುಕೊಂಡಿದ್ದನು. ಅಂದಿನಿಂದ ಆಗಿಂದಾಗ್ಗೆ ಚಿನ್ನಾಭರಣ ಹಾಗೂ ಹಣ ಕಳ್ಳತನ ಮಾಡಿದ್ದಾನೆ. ಇದು ಮನೆಯವರ ಗಮನಕ್ಕೆ ಬಂದಿಲ್ಲ.
ಇತ್ತೀಚೆಗೆ ಹಣ-ಆಭರಣ ಕಳ್ಳತನವಾಗಿರುವ ಬಗ್ಗೆ ಮನೆಯವರು ಗಮನಿಸಿದ್ದಾರೆ. ಕಚೇರಿಯ ವ್ಯವಸ್ಥಾಪಕನ ಮೇಲೆಯೇ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ, ವ್ಯವಸ್ಥಾಪಕನನ್ನು ಕಚೇರಿಯಲ್ಲಿಯೇ ಏಳು ಸಾವಿರ ಹಣ ಹಾಗೂ ಕಬೋರ್ಡ್‌ನ ನಕಲಿ ಕೀ ಸಮೇತ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹಣ-ಆಭರಣ ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.
ಆರೋಪಿಯನ್ನು ಸುದೀರ್ಘವಾಗಿ ಪೊಲೀಸರು ವಿಚಾರಣೆಗೊಳಪಡಿಸಿದಾಗ, ಹಲವು ಚಟಗಳಿಗೆ ಹಣ ಹೊಂದಿಸುವ ಸಲುವಾಗಿ ಸ್ನೇಹಿತರ ಬಳಿ ಹೆಚ್ಚಿನ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಕೆಲಸ ನೀಡಿದ ಮಾಲೀಕರ ಮನೆಯ ಕಬೋರ್ಡ್ ಕೀಯನ್ನು ಅವರ ಗಮನಕ್ಕೆ ಬಾರದಂತೆ ತೆಗೆದುಕೊಂಡು ಹೋಗಿ ನಕಲಿ ಕೀ ಮಾಡಿಸಿಕೊಂಡು ಅವರಿಲ್ಲದ ಸಂದರ್ಭಗಳಲ್ಲಿ ಆಗಾಗ್ಗೆ ಕಬೋರ್ಡ್ ಬೀಗ ತೆಗೆದು ಚಿನ್ನಾಭರಣ ಹಾಗೂ ಹಣ ಕಳ್ಳತನ ಮಾಡಿದ್ದಾಗಿ ತಿಳಿಸಿದ್ದಾನೆ.
ಕಳ್ಳತನ ಮಾಡಿದ ಚಿನ್ನಾಭರಣಗಳನ್ನುತ್ಯಾಗರಾಜನಗರದಲ್ಲಿರುವ ಜ್ಯುವೆಲ್ಲರಿ ಅಂಗಡಿ ಮತ್ತು ಮಣಪ್ಪುರಂ ಫೈನಾನ್‌್ಸ ಕಂಪನಿಯಲ್ಲಿ ಮಾರಾಟ ಮಾಡಿರುವುದಾಗಿ ಹಾಗೂಮಾರಾಟ ಮಾಡಿ ಬಂದ ಹಣದಿಂದ ಬೆಳ್ಳಿ ವಸ್ತುಗಳನ್ನು ಖರೀದಿಸಿದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.ಆರೋಪಿ ನೀಡಿದ ಮಾಹಿತಿಯಂತೆ ಜ್ಯುವೆಲ್ಲರಿ ಅಂಗಡಿಯಿಂದ 1ಕೆಜಿ 40ಗ್ರಾಂ ಚಿನ್ನಾಭರಣ ಹಾಗೂ ಆರೋಪಿಯ ಮನೆಯಲ್ಲಿಟ್ಟಿದ್ದ ಒಂದು ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 89 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ. ಈ ಕಾರ್ಯಾಚರಣೆಯನ್ನು ಇನ್ಸ್ ಪೆಕ್ಟರ್ ದೀಪಕ್ ಹಾಗೂ ಸಿಬ್ಬಂದಿ ತಂಡ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಉತ್ತರವಿಭಾಗ ಪೊಲೀಸರ ವಿಶೇಷ ಕಾರ್ಯಾಚರಣೆ : 61 ಲಕ್ಷ ರೂ. ಮೌಲ್ಯದ ಗಾಂಜಾ,ಚರಸ್ ಜಪ್ತಿ
ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ಉತ್ತರವಿಭಾಗದ ಪೊಲೀಸರು ಬಂಧಿಸಿ 69 ಸಾವಿರ ನಗದು ಸೇರಿದಂತೆ 61 ಲಕ್ಷ ರೂ. ಮೌಲ್ಯದ ಎಂಡಿಎಂಎ, ಗಾಂಜಾ ಹಾಗೂ ಚರಸ್ ವಶಪಡಿಸಿಕೊಂಡಿದ್ದಾರೆ.
ಉತ್ತರವಿಭಾಗದ ಜೆಸಿ ನಗರ , ಹೆಬ್ಬಾಳ, ಆರ್‌ಟಿನಗರ ಮತ್ತು ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ಒಂದು ವಾರದ ಅವಧಿಯಲ್ಲಿ ವಿಶೇಷ ಕಾರ್ಯಚರಣೆ ನಡೆಸಿದ್ದರು.
ಆರ್‌ಟಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುಲ್ತಾನ್ ಪಾಳ್ಯದಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ಸಮೀಪ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು 3ಕೆಜಿ 330 ಗ್ರಾಂ ಗಾಂಜಾ, 278 ಗ್ರಾಂ ಎಂಡಿಎಂಎ, ಕೃತ್ಯಕ್ಕೆ ಬಳಸಿದ 1 ದ್ವಿಚಕ್ರ ವಾಹನವನ್ನು ಹಾಗೂ 3 ಮೊಬೈಲ್ ಫೋನ್ ಹಾಗೂ 69,100 ರೂ ವಶಪಡಿಸಿಕೊಂಡಿದ್ದಾರೆ.
ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯ ರೈಲ್ವೆ ಟ್ರ್ಯಾಕ್ ಸಮೀಪದ ಖಾಲಿ ಜಾಗದಲ್ಲಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು 1 ಕೆಜಿ 287 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ 1 ದ್ವಿಚಕ್ರವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜೆಸಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಂಆರ್‌ಎಸ್ ಪಾಳ್ಯದ ಇಂದಿರಾ ಕ್ಯಾಂಟೀನ್ ಬಳಿ ಒಬ್ಬಾತನನ್ನು ವಶಕ್ಕೆ ಪಡೆದು 600 ಗ್ರಾಂ ಗಾಂಜಾ ಹಾಗೂ 1200 ರೂ. ಹಣ ವಶಪಡಿಸಿಕೊಂಡಿದ್ದಾರೆ.ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್‌ಎಂಟಿ ಕ್ವಾಟ್ರಸ್ ಬಳಿ ಮೂವರನ್ನು ವಶಕ್ಕೆ ಪಡೆದು 991 ಗ್ರಾಂ ಗಾಂಜಾ ಹಾಗೂ 75 ಗ್ರಾಂ ಚರಸ್ ವಶಪಡಿಸಿಕೊಳ್ಳಲಾಗಿದೆ.
ಒಟ್ಟಾರೆ ವಿಶೇಷ ಕಾರ್ಯಚರಣೆಯಲ್ಲಿ ಆರು ಮಂದಿಯನ್ನು ಬಂಧಿಸಿ 61 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಗಾಂಜಾವನ್ನು ಸರಬರಾಜು ಮಾಡುತ್ತಿದ್ದ ಇಬ್ಬರು ತಲೆ ಮರೆಸಿಕೊಂಡಿದ್ದು, ಅವರುಗಳ ಪತ್ತೆಕಾರ್ಯ ಮುಂದುವರೆದಿದ್ದು ತನಿಖೆ ಪ್ರಗತಿಯಲ್ಲಿದೆ.
ಮೊಬೈಲ್ ಸುಲಿಗೆ, ಆರೋಪಿ ಬಂಧನ : 20 ಲಕ್ಷ ರೂ. ಮೌಲ್ಯದ 80 ಮೊಬೈಲ್ ಫೋನ್‌ಗಳ ವಶ
ದ್ವಿಚಕ್ರವಾಹನಗಳಲ್ಲಿ ಸುತ್ತಾಡುತ್ತಾ ಸಾರ್ವಜನಿಕರ ಮೊಬೈಲ್‌ಗಳನ್ನು ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿ, 20 ಲಕ್ಷ ಬೆಲೆಯ 80 ಮೊಬೈಲ್‌ಫೋನ್‌ಗಳನ್ನು ವಶಪಡಿಸಿ ಕೊಂಡಿದ್ದಾರೆ.
ಹೂಡಿಯ ಪಿಜಿಯೊಂದರಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಹೋಂಡಾ ಶೋರೂಂ ಮುಂಭಾಗ ನಡೆದು ಹೋಗುತ್ತಿದ್ದಾಗ ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದರೋಡೆಕೋರರು ಅವರ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಮಾಹಿತಿಗಳನ್ನು ಕಲೆ ಹಾಕಿ ಹೂಡಿ ಬಸ್ ನಿಲ್ದಾಣದ ಬಳಿ ಮೊಬೈಲ್ ಸಮೇತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ನಗರದ ವಿವಿಧ ಕಡೆಗಳಲ್ಲಿ ತನ್ನ ಇಬ್ಬರು ಸಹಚರರೊಂದಿಗೆ ಸೇರಿ ಮೊಬೈಲ್ ಫೋನ್‌ಗಳನ್ನು ಸುಲಿಗೆ ಮಾಡಿರುವುದಾಗಿ ಹೇಳಿದ್ದಾನೆ.
ಆರೋಪಿಯನ್ನು ಠಾಣೆ ಕರದೋಯ್ದು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಸುಲಿಗೆ ಮಾಡಿದ ಮೊಬೈಲ್ ಫೋನ್‌ಗಳನ್ನು ಸ್ನೇಹಿತನ ಮುಖಾಂತರ ಮತ್ತಿಬ್ಬರಿಗೆ ಮಾರಾಟ ಮಾಡಿರುವುದಾಗಿ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನವನ್ನು ಹೆಬ್ಬಾಳದ ಸಹಕಾರ ನಗರದಲ್ಲಿರುವ ತಂಗಿಯ ಗಂಡನಿಗೆ ನೀಡಿರುವುದಾಗಿ ಹೇಳಿದ್ದಾನೆ.ತನಿಖೆಯನ್ನು ಮುಂದುವರೆಸಿದ ಪೊಲೀಸರು, ಸುಮಾರು 79 ವಿವಿಧ ಕಂಪನಿಯ ಮೊಬೈಲ್‌ಫೋನ್‌ಗಳನ್ನು ಹಾಗೂ ದ್ವಿಚಕ್ರವಾಹನವನ್ನು ವಶಪಡಿಸಿಕೊಂಡಿದ್ದು, ತಲೆ ಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ತನಿಖೆ ಮುಂದುವರೆಸಿದ್ದಾರೆ. ಈ ಕಾರ್ಯಾಚರಣೆಯನ್ನು ಇನ್ಸ್ ಪೆಕ್ಟರ್ ಪ್ರವೀಣ್ ಬಾಬು ಹಾಗೂ ಇತರೆ ಸಿಬ್ಬಂದಿ ತಂಡ ಕೈಗೊಂಡಿದ್ದು, ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.