ಭೋಪಾಲ್,ಫೆ.13- ಅಕ್ರಮ ಸಂಬಂಧ ಶಂಕೆಯಲ್ಲಿ ಪಾಪಿ ಪತಿಯೊಬ್ಬ ತನ್ನ ಪತ್ನಿಯ ಎರಡು ಕಣ್ಣುಗುಡ್ಡೆಗಳನ್ನು ಕಿತ್ತು ಹಾಕಿ ಆಕೆಯ ಖಾಸಗಿ ಅಂಗಗಳಿಗೂ ಗಾಯ ಮಾಡಿ ಪರಾರಿಯಾಗಿರುವ ಘಟನೆ ಮಧ್ಯ ಪ್ರದೇಶದ ಶಿವಪುರಿಯಲ್ಲಿ ನಡೆದಿದೆ.
ಪತ್ನಿ ಯಾರೊಂದಿಗೋ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಅನುಮಾನ ಪಟ್ಟ ಪತಿ ಕೋಪದಲ್ಲಿ ಚಾಕುವಿನಿಂದ ಆಕೆಯ ಕಣ್ಣುಗುಡ್ಡೆಗಳನ್ನೇ ಕಿತ್ತು ಹಾಕಿದ್ದಲ್ಲದೆ, ಆಕೆಯ ಖಾಸಗಿ ಭಾಗಗಳು ಸೇರಿದಂತೆ ಹಲವು ಕಡೆ ಗಾಯಗಳನ್ನು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಭೋಪಾಲನ್‌ನ ಪೋಪ್ರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಛೋಟು ಖಾನ್ ಎಂದು ಗುರುತಿಸಲಾಗಿದೆ.
ಆತ ತನ್ನ ಪತ್ನಿಯ ಮೊಬೈಲ್ ಫೋನ್ ಕೇಳಿದ್ದ, ಆದರೆ ಆಕೆ ನೀಡಲು ನಿರಾಕರಿಸಿದಾಗ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ 24 ವರ್ಷದ ಬಲಿಪಶುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ದಂಪತಿ ಮದುವೆಯಾಗಿ ಮೂರು ವರ್ಷಗಳು ಕಳೆದಿದ್ದವು, ಆಗಾಗ ಅವರ ಮಧ್ಯೆ ವೈಮನಸ್ಸು ಮೂಡುತ್ತಿತ್ತು. ಪತ್ನಿಯ ಮೇಲೆ ಹಲ್ಲೆ ಮಾಡಿದ ನಂತರ, ಆ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ನೆರೆಹೊರೆಯವರು ಸಂತ್ರಸ್ತೆಯ ಕುಟುಂಬಕ್ಕೆ ಮಾಹಿತಿ ನೀಡಿದ ನಂತರವೇ, ರಕ್ತಸಿಕ್ತವಾಗಿ ಬಿದ್ದಿದ್ದ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಪರಾಧದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಪೊಲೀಸ್ ಅಧಿಕಾರಿಗಳು ಪ್ರಸ್ತುತ ಸಂತ್ರಸ್ತೆ ಮತ್ತು ಆಕೆಯ ಕುಟುಂಬದಿಂದ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಏತನ್ಮಧ್ಯೆ, ಪರಾರಿಯಾಗಿರುವವ ಪತಿಯನ್ನು ಪತ್ತೆಹಚ್ಚಲು ಶೋಧ ಕಾರ್ಯ ಆರಂಭಿಸಲಾಗಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.