ನೆಲಮಂಗಲ,ಡಿ.22- ಕುಡಿದ ಮತ್ತಿನಲ್ಲಿ ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡಿದನೆಂದು ಸ್ನೇಹಿತನ ತಲೆಯನ್ನು ಗೋಡೆಗೆ ಜಜ್ಜಿ, ಸಿಗರೇಟ್‌ನಿಂದ ಕುಂಡಿಯನ್ನು ಸುಟ್ಟು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರದೀಪ(41) ಕೊಲೆಯಾದ ವ್ಯಕ್ತಿ. ಚೇತನ್ ಕೊಲೆ ಆರೋಪಿ, ಇಬ್ಬರು ಸ್ನೇಹಿತರು.
ಘಟನೆ ವಿವರ: ಬೆಂಗಳೂರು ಉತ್ತರ ತಾಲ್ಲೂಕಿನ ಬೋವಿ ತಿಮನಪಾಳ್ಯದ ನಿವಾಸಿ ಮೃತ ಪ್ರದೀಪ್ ಮದುವೆಯಾಗಿ ಪತ್ನಿಯನ್ನು ತೊರೆದಿದ್ದ ಎನ್ನಲಾಗಿದೆ.
ಕಳೆದ ಎರಡು ತಿಂಗಳಿನಿಂದ ಚೇತನ್ ತನ್ನ ಮನೆಯಲ್ಲೇ ಪ್ರದೀಪ್‌ನನ್ನು ಇರಿಸಿಕೊಂಡಿದ್ದ. ಮದ್ಯವ್ಯಸನಿಯಾಗಿದ್ದ ಪ್ರದೀಪ್ ಕುಡಿದ ಸಂದರ್ಭದಲ್ಲಿ ಮನೆಯೊಳಗೆ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದನಂತೆ.
ಕಳೆದ ಬುಧವಾರ ರಾತ್ರಿ ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದು ಜಗಳ ವಿಕೋಪಕ್ಕೆ ತಿರುಗಿ ಸಿಟ್ಟುಗೆದ್ದ ಚೇತನ್, ಪ್ರದೀಪ್‌ನ ತಲೆಯನ್ನು ಹಿಡಿದುಕೊಂಡು ಗೋಡೆಗೆ ಜಜ್ಜಿ ನಂತರ ಸಿಗರೇಟ್‌ನಿಂದ ಅವನ ಕುಂಡಿಯನ್ನು ಸುಟ್ಟು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ.
ಸಲಿಂಗ ಕಾಮಕಕ್ಕಾಗಿ ಆರೋಪಿ ಚೇತನ್ ತನ್ನ ಸ್ನೇಹಿತನನ್ನೇ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿ, ಆ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದಾರೆ.
ಡಿ.19ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.ನಂತರ ಪರಾರಿಯಾಗಿದ್ದ ಆರೋಪಿಯನ್ನು ಪತ್ತೆಹಚ್ಚಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.