ಬೆಂಗಳೂರು,ಸೆ.14- ಪಾನಿಪುರಿ ತಿನ್ನಲು ಹೋದ ಬಿಹಾರಿ ಮೂಲದ ಗಾರೆ ಕೆಲಸಗಾರನೋರ್ವನಿಗೆ ಸ್ಥಳೀಯನೊಬ್ಬ ಕೊಟ್ಟ ಒಂದೇ ಒಂದು ಪಂಚ್‌ಗೆ ಸಾವನ್ನಪ್ಪಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅರಕೆರೆ ಬಳಿ ನಡೆದಿದೆ.ಬಿಹಾರ ಮೂಲದ ಭೀಮಕುಮಾರ್ (25) ಮೃತಪಟ್ಟ ಗಾರೆ ಕೆಲಸಗಾರ.
ಕಳೆದ 7 ರಂದು ಭೀಮಕುಮಾರ್ ತನ್ನ ಸ್ನೇಹಿತರೊಂದಿಗೆ ಅರಕೆರೆಗೆ ತೆರಳಿ ಪಾನಿಪುರಿ ತಿನ್ನುತ್ತಿದ್ದಾಗ ಅಲ್ಲಿಗೆ ಬಂದ ಸ್ಥಳೀಯನೊಬ್ಬ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಭೀಮಕುಮಾರ್ ಕುತ್ತಿಗೆ ಭಾಗಕ್ಕೆ ಒಂದು ಪಂಚ್ ಕೊಟ್ಟಿದ್ದಾನೆ.
ಇದರಿಂದ ಪ್ರಜ್ಞೆ ತಪ್ಪಿ ಕುಸಿದುಬಿದ್ದ ಕೂಡಲೇ ಸ್ನೇಹಿತರು ಆರೈಕೆ ಮಾಡಿ ಆತ ವಾಸವಿದ್ದ ಮೈಕೋ ಲೇ ಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಳೇಕಲ್ಲಳ್ಳಿ ಬಳಿಯ ನಿರ್ಮಾಣ ಹಂತದ ಕಟ್ಟಡದ ಶೆಡ್‌ಗೆ ಕರೆದುಕೊಂಡು ಹೋಗಿದ್ದಾರೆ.
ಕೆಲ ಸಮಯದ ನಂತರ ನೋವು ಹೆಚ್ಚಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೆ. 9 ರಂದು ಆತ ಮೃತಪಟ್ಟಿದ್ದಾನೆ.ಈ ಸಂಬಂಧ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಪಂಚ್ ಕೊಟ್ಟ ಸ್ಥಳೀಯನ ಪತ್ತೆಗೆ ಬಲೆ ಬೀಸಿದ್ದಾರೆ.