ಬೆಂಗಳೂರು,ಮೇ19- ಟೆಸ್ಟ್ ಡ್ರೈವ್ಗೆ ಹೋಗಿ ಬರುವುದಾಗಿ ದ್ವಿಚಕ್ರ ವಾಹನ ಪಡೆದು ವಾಪಸ್ ಹಿಂದಿರುಗಿಸದೆ ಕಳವು ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಬಂಡೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲದ ಆರಿಶಿನಕುಂಟೆಯ ಆದರ್ಶನಗರದ ನಿವಾಸಿ ಪ್ರದೀಪ್ ಅಲಿಯಾಸ್ ಓಎಲ್‌ಎಕ್ಸ್ ಪ್ರದೀಪ್ (31) ಬಂಧಿತ ಆರೋಪಿ.
ರಿತಾಬಿನಾ ದಾಸ್ ಎಂಬುವರು ತಮ್ಮ ದ್ವಿಚಕ್ರ ವಾಹನವನ್ನು ಮಾರಾಟ ಮಾಡಲು ಓಎಲ್‌ಎಕ್ಸ್ ಆಪ್‌ನಲ್ಲಿ ಜಾಹಿರಾತು ನೀಡಿದ್ದರು. ಅದನ್ನು ಗಮನಿಸಿದ ಆರೋಪಿ ಪ್ರದೀಪ್ ಮೇ 1ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬಂದು ದ್ವಿಚಕ್ರ ವಾಹನ ಖರೀದಿಸುವುದಾಗಿ ತಿಳಿಸಿ ಟೆಸ್ಟ್ ಡ್ರೈವ್ ಹೋಗಿ ಬರುವುದಾಗಿ ನಂಬಿಸಿ ವಾಹನ ಪಡೆದುಕೊಂಡು ಪರಾರಿಯಾಗಿದ್ದನು.
ಈ ಬಗ್ಗೆ ರಿತಾಬಿನಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಆರೋಪಿ ಪ್ರದೀಪ್‌ನನ್ನು ಬಂಧಿಸಿ 90 ಸಾವಿರ ಬೆಲೆಯ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯುವಲ್ಲಿ ಇನ್‌ಸ್ಪೆಕ್ಟರ್ ಮಹೇಶ್ ಕನಕಗಿರಿ ಅವರು ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಾಗ, ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಸುಲಿಗೆ ಮತ್ತು ಕುಂಬಳಗೋಡು ಹಾಗೂ ಸುಬ್ರಹ್ಮಣ್ಯಪುರ, ಅಮೃತಹಳ್ಳಿ ಹಾಗೂ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಓಎಲ್‌ಎಕ್ಸ್ ಆಪ್‌ನಲ್ಲಿ ಜಾಹಿರಾತು ನೀಡಿದವರ ಬಳಿಯಿಂದ ಕಳವು ಮಾಡಿರುವ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಯಿಂದ 6.50 ಲಕ್ಷ ರೂ. ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.