ಮಂಡ್ಯ,ಜು.29- ನನಗೆ ಕನಕಪುರ ಎಷ್ಟು ಮುಖ್ಯವೋ, ಮಂಡ್ಯದ ಏಳು ಕ್ಷೇತ್ರಗಳು ಅಷ್ಟೇ ಮುಖ್ಯ. ಮದ್ದೂರಿನ ಶಾಸಕ ಉದಯ್ ಅವರ ಬೆನ್ನಿಗೆ ಇಡೀ ಸರ್ಕಾರ ನಿಂತಿದೆ. ಕ್ಷೇತ್ರದ ಜನರ ಋಣ ತೀರಿಸಲು 1146 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆೞೞ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.ಮದ್ದೂರಿನಲ್ಲಿ ಸೋಮವಾರ ನಡೆದ ಮೊತ್ತದ ವಿವಿಧ ಇಲಾಖೆಗಳ ಹಲವು ಯೋಜನೆಗಳ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
ನಾವು ಇಂದು ನಿಮಿಂದ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ. ಈ ಕ್ಷೇತ್ರದಲ್ಲಿ ನಮ ಅಭ್ಯರ್ಥಿ ಉದಯ್ ಅವರನ್ನು ಗೆಲ್ಲಿಸಿ ಜಿಲ್ಲೆಯ 7 ಸ್ಥಾನಗಳ ಪೈಕಿ 6ರಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದೀರಿ. ಆಮೂಲಕ ರಾಜ್ಯದಲ್ಲಿ 136 ಸಂಖ್ಯಾಬಲದ ಬಲಿಷ್ಠ ಸರ್ಕಾರ ರಚನೆಗೆ ಸಹಕಾರ ನೀಡಿರುವ ನಿಮ ಋಣ ತೀರಿಸಲು ನಾವಿಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದರು.
ನೀರಾವರಿ ಇಲಾಖೆಯ ಕಚೇರಿಯನ್ನು ನಾನು ಆರಂಭಿಸುತ್ತಿದ್ದೇನೆ. ಮಳವಳ್ಳಿವರೆಗೂ ನೀರು ಹರಿಸಿ, ಮದ್ದೂರಿನ ಕಾಲುವೆಗಳ ಅಭಿವೃದ್ಧಿ ದೃಷ್ಟಿಯಿಂದ ಸುಮಾರು 500 ಕೋಟಿಗೂ ಹೆಚ್ಚು ಮೊತ್ತದ ಹಣವನ್ನು ನೀಡಿದ್ದೇವೆ. ಚೆಲುವರಾಯಸ್ವಾಮಿ ಅವರು ಕೂಡ ಸಾಕ್ಷಿಗುಡ್ಡೆ ಬಿಟ್ಟು ಹೋಗಲು, ರೈತರ ಮಕ್ಕಳಿಗಾಗಿ ಕೃಷಿ ವಿವಿ ತರಲು ಮುಂದಾಗಿದ್ದಾರೆ. ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ವಿವಿಧ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಜಿಲ್ಲೆಯಲ್ಲಿ ಅತಿಹೆಚ್ಚು ಶಾಸಕರು ಗೆದ್ದಾಗ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ ಎಂದರು.
ಜನರ ಬದುಕಿಗಾಗಿ 1 ಲಕ್ಷ ಕೋಟಿ ಅನುದಾನ:
ಮಹಿಳೆಯರು ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ, ಮನೆಗಳಿಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಬರುತ್ತಿದೆ. ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ಹಣ, 10 ಕೆ.ಜಿ ಅಕ್ಕಿ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಇಡೀ ದೇಶದಲ್ಲಿ ಯಾವುದೇ ಸರ್ಕಾರ ಈ ರೀತಿ ಯೋಜನೆ ನೀಡಿಲ್ಲ ಎಂದು ಸರ್ಕಾರದ ಕಾರ್ಯವನ್ನು ಬಣ್ಣಿಸಿದರು.ಱಱಸಿಎಂ ಸಿದ್ದರಾಮಯ್ಯ ಅವರು 4.08 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ, ನಮ ಸರ್ಕಾರ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲು ವರ್ಷಕ್ಕೆ 19 ಸಾವಿರ ಕೋಟಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ 25 ಸಾವಿರ ಕೋಟಿಯಷ್ಟು ಹಣವನ್ನು ಜನರಿಗೆ ನೀಡುತ್ತಿದ್ದೇವೆ. 10,900 ಕೋಟಿಯಷ್ಟು ಹಣವನ್ನು ಪಿಂಚಣಿಗಾಗಿ ನೀಡುತ್ತಿದ್ದೇವೆ. ಆಮೂಲಕ ಬಜೆಟ್ಟಿನ 1 ಲಕ್ಷ ಕೋಟಿಯಷ್ಟು ಹಣವನ್ನು ಜನರಿಗಾಗಿ ನೀಡುತ್ತಿದ್ದೇವೆ. ಎಂದು ವಿವರಿಸಿದರು.
ನೀವು ಅಧಿಕಾರದಲ್ಲಿದ್ದಾಗ ಇಂತಹ ಯಾವುದಾದರೂ ಒಂದು ಯೋಜನೆಯನ್ನು ಜಾರಿಗೆ ತಂದಿದ್ದೀರಾ ಎಂದು ನೀವೆಲ್ಲರೂ ಬಿಜೆಪಿಯವರನ್ನು ಕೇಳಬೇಕು. ಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡಿದ್ದಾರಾ? ಮಾಡಿಲ್ಲ. ಹೀಗಾಗಿ ಅವರು ನಮ ಬಗ್ಗೆ ಮಾತನಾಡಲು ನೈತಿಕತೆ ಕಳೆದುಕೊಂಡಿದ್ದಾರೆ. ಸಾಧನೆ ಎಂಬುದು ಸುಮನೆ ಬರುವುದಿಲ್ಲ. ಅದು ಕಾಲ ಬುಡದಲ್ಲಿ ಇರುವುದಿಲ್ಲ, ಶ್ರಮದ ಪರ್ವತದ ತುದಿಯಲ್ಲಿ ಸಾಧನೆ ಇರುತ್ತದೆ. ನಮ ಕಾಂಗ್ರೆಸ್ ಸರ್ಕಾರ ಅನೇಕ ಕಾರ್ಯಕ್ರಮದ ಮೂಲಕ ಜನರ ಬದುಕು ಬದಲಿಸುತ್ತಿದೆ ಎಂದು ಹೇಳಿದರು.ಪಕ್ಷದ ಕಚೇರಿಗಾಗಿ ಸ್ವಂತ ಆಸ್ತಿ ಬಿಟ್ಟುಕೊಟ್ಟ ಉದಯ್ ಅವರಿಗೆ ಅಭಿನಂದನೆ ನಾವು ಯೋಗಿ ಎಂದು ಕರೆಸಿಕೊಳ್ಳುವುದಕ್ಕಿಂತ ಉಪಯೋಗಿ ಎಂದು ಕರೆಸಿಕೊಳ್ಳುವುದು ಬಹಳ ಮುಖ್ಯ ಎಂದರು.
ಉಳಿ ಪೆಟ್ಟು ಬೀಳದೇ ಕಲ್ಲು ಶಿಲೆಯಾಗುವುದಿಲ್ಲ, ನೇಗಿಲು ಉಳುಮೆ ಮಾಡದೇ ಹೊಲ ಮಟ್ಟವಾಗುವುದಿಲ್ಲ. ಅದೇ ರೀತಿ ಉದಯ್ ಅವರು ನಿಮ ಬದುಕು ಹಸನಾಗಿಸಲು ಶ್ರಮಿಸುತ್ತಿದ್ದಾರೆ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಅದೇ ರೀತಿ ಮನುಷ್ಯನಿಗೆ ನಂಬಿಕೆ ಮುಖ್ಯ. ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಅಚ್ಛೇದಿನ ಬರುತ್ತದೆ ಎಂದಿದ್ದರು.
ಅವರು ಹೇಳಿದ್ದ ಅಚ್ಛೇದಿನ, ಖಾತೆಗೆ 15 ಲಕ್ಷದ ವಿಚಾರ ಏನಾಯ್ತು ಎಂದು ನೀವೆಲ್ಲರೂ ಬಿಜೆಪಿ ಹಾಗೂ ಕುಮಾರಸ್ವಾಮಿ ಅವರನ್ನು ಕೇಳಬೇಕು ಎಂದರು.
ಜೆಡಿಎಸ್ ನಾಯಕರು ಸುಮನೆ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ:
ಎಂಎಲ್ ಸಿಗಳಾದ ದಿನೇಶ್ ಗೂಳಿಗೌಡ, ಮಧುಮಾದೇಗೌಡ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಜೆಡಿಎಸ್ ನಾಯಕರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ನೀವು ನಿಮ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಈಗೇನಿದ್ದರೂ ಕಾಂಗ್ರೆಸ್ ಕಾಲ. ಶಿವಪುರ ಸೌಧದಲ್ಲಿ ಹೇಗೆ ರಾಷ್ಟ್ರಧ್ವಜ ಹಾರುತ್ತಿದೆಯೋ ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಧ್ವಜ ನಿರಂತರವಾಗಿ ಹಾರಾಡಲಿದೆ. ನೀವು ನಿಮ ಬದುಕನ್ನು ಗಮನದಲ್ಲಿಟ್ಟುಕೊಂಡು ಆಲೋಚಿಸಿ ಎಂದು ಹೇಳಿದರು.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ ಬದುಕಿಗೆ ಶಕ್ತಿ ತುಂಬುತ್ತಿದೆ. ಉದಯ್ ಅವರ ಜೊತೆ ಇಡೀ ಸರ್ಕಾರ ಇದೆ. ಕ್ಷೇತ್ರದ ಎಲ್ಲಾ ಜನರು ಪಕ್ಷಾತೀತವಾಗಿ ಉದಯ್ ಅವರಿಗೆ ಬೆಂಬಲಿಸಿ ಎಂದು ಕರೆ ನೀಡಿದರು.
ಮದ್ದೂರಿಗೆ ದೊಡ್ಡ ಇತಿಹಾಸವಿದೆ:
ಮದ್ದೂರಿಗೆ ದೊಡ್ಡ ಇತಿಹಾಸವಿದೆ. ಬ್ರಿಟೀಷರ ಆಳ್ವಿಕೆ ಸಮಯದಲ್ಲಿ ಎಸ್.ಎಂ ಕೃಷ್ಣ ಅವರ ತಂದೆ ಮಲ್ಲಯ್ಯ ಅವರು ಮೈಸೂರು ಆಳ್ವಿಕೆಯಲ್ಲಿ ಜನಪ್ರತಿನಿಧಿಯಾಗಿ ಆಳ್ವಿಕೆ ಮಾಡಿದ್ದರು. ಇದು ದೇಶದ ಸ್ವಾತಂತ್ರ್ಯ ಹೋರಾಟದ ನೆಲ. ಕೆಂಗಲ್ ಹನುಮತಯ್ಯ ಅವರ ಕಾಲದಲ್ಲಿ ಪ್ರಜಾಸೌಧವನ್ನು ಕಟ್ಟಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದ ನೆಲ ಇದು. ಈ ಜಿಲ್ಲೆಯಿಂದ ಅನೇಕ ನಾಯಕರು ಬೆಳೆದು ಬಂದಿದ್ದಾರೆ. ಈ ಭೂಮಿಯಲ್ಲಿ ನಾನು ಎಸ್.ಎಂ ಕೃಷ್ಣ ಅವರನ್ನು ನೆನೆಯುತ್ತೇನೆ ಎಂದರು.
ಕೃಷ್ಣಾ ಅವರು ಕೆಪಿಸಿಸಿ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ನಮ ರಾಜ್ಯ ಜಿಲ್ಲೆ ಹಾಗೂ ತಾಲ್ಲೂಕಿಗೆ ಮೆರಗು ನೀಡಿದ್ದಾರೆ. ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ. ಜಿಲ್ಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ವಿಶ್ವೇಶ್ವರಯ್ಯ, ಸಾಹುಕಾರ್ ಚನ್ನಯ್ಯ, ಮಲ್ಲಯ್ಯ ಅವರ ಕೊಡುಗೆ ಇದೆ. ಮಾದೇಗೌಡರು, ನಾಗೇಗೌಡರು, ಮಂಚೇಗೌಡರು ಸೇರಿದಂತೆ ಅನೇಕ ಈ ಹಿರಿಯರು ಜಿಲ್ಲೆ ಅಭಿವೃದ್ಧಿ ಮಾಡಿದ್ದಾರೆ. ಶಿಂಶಾ ನದಿ ಪಕ್ಕದಲ್ಲಿರುವ ಈ ಮದ್ದೂರಿನಲ್ಲಿ ಟಿಪ್ಪು ಸುಲ್ತಾನ್ ಅವರ ಕಾಲದಲ್ಲಿ ಮದ್ದುಗಳನ್ನು ತಯಾರು ಮಾಡುತ್ತಿದ್ದರು. ಕೃಷ್ಣ ಆವರು ಕೈಗಾರಿಕಾ ಸಚಿವರಾಗಿದ್ದಾಗ ಈ ಭಾಗದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸಿ ಇಲ್ಲಿನ ಜನರಿಗೆ ಉದ್ಯೋಗ ನೀಡಿದ್ದರುೞೞ ಎಂದು ಸರಿಸಿದರು