ಬೆಂಗಳೂರು,ಮಾ.17- ಮಂಗಳೂರು ಪೊಲೀಸರು ಸತತ ಕಾರ್ಯಾಚರಣೆ ನಡೆಸಿ 75 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿರುವುದನ್ನು ವಿಧಾನಸಭೆಯಲ್ಲಿ ಪಕ್ಷ ಬೇಧ ಮರೆತು ಅಭಿನಂದನೆ ಸಲ್ಲಿಸಲಾಯಿತು.
ಇಂದು ಬೆಳಗ್ಗೆ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನ ಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅಧಿವೇಶನದ ಕಲಾಪ ಮುಗಿಸಿ ತಮ ಊರಿಗೆ ಪ್ರಯಾಣಿಸುವಾಗ ಹಿರಿಯೂರು ಬಳಿ ಅಪಘಾತವಾಗಿ ತಲೆ ಮತ್ತು ಬೆನ್ನು ಮೂಳೆಗೆ ಪೆಟ್ಟಾಗಿದೆ. ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ರಾತ್ರಿ ತಾವು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಕೊಂಡು ಬಂದಿದ್ದೇನೆ.
ಈಗ ಸುಧಾರಿಸಿದ್ದಾರೆ. ಸಂಪೂರ್ಣ ವಿಶ್ರಾಂತಿಯ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದರು.ಇದಕ್ಕೆ ಧ್ವನಿಗೂಡಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಉಪಾಧ್ಯಕ್ಷರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುವುದಾಗಿ ಹೇಳಿದರು.
ಇದೇ ವೇಳೆ ಮುಂದುವರೆದು ಮಾತನಾಡಿದ ಸಚಿವರು, ಮಂಗಳೂರು ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ 75 ಕೋಟಿ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶ ಮಾಡಿಕೊಂಡಿದ್ದಾರೆ. ಇದು ಅಭಿನಂದನಾರ್ಹ ಕಾರ್ಯಾಚರಣೆ ಎಂದು ಹೇಳಿದರು.
ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ, ಮಂಗಳೂರು ಪೊಲೀಸರು ದೆಹಲಿಯಿಂದಲೂ ಹಿಂಬಾಲಿಸಿ ಬೆಂಗಳೂರಿಗೆ ಬಂದು ಕಾರ್ಯಾಚರಣೆ ನಡೆಸುವ ಮೂಲಕ ಬೃಹತ್ ಪ್ರಮಾಣದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಇದು ಸುತ್ಯಾರ್ಹ ಕಾರ್ಯಾಚರಣೆ. ಪೊಲೀಸರು ಅಭಿನಂದನಾರ್ಹರು, ಗೃಹ ಸಚಿವರು ಪೊಲೀಸರಿಗೆ ಮತ್ತಷ್ಟು ಬೆಂಬಲ ನೀಡಿ, ಮಾದಕ ವಸ್ತುಗಳ ವಿರುದ್ಧದ ಕಾರ್ಯಚರಣೆಯನ್ನು ವ್ಯಾಪಕಗೊಳಿಸಲಿ ಎಂದು ಸಲಹೆ ನೀಡಿದರು.
ಚೆನ್ನರಾಯಪಟ್ಟಣ ಕ್ಷೇತ್ರ ಜೆಡಿಎಸ್‌ನ ಸಿ.ಎನ್.ಬಾಲಾಕೃಷ್ಣ, ಮಂಗಳೂರು ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಗೃಹ ಸಚಿವರು, ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಅದಕ್ಕೆ ಇಬ್ಬರನ್ನು ಅಭಿನಂಧಿಸುವುದಾಗಿ ಹೇಳಿದರು.
ಹೊನ್ನಾಳ್ಳಿ ಕ್ಷೇತ್ರದ ಕಾಂಗ್ರೆಸ್‌ನ ಡಿ.ಜಿ.ಶಾಂತನಗೌಡ, ಎರಡು ತಿಂಗಳ ಹಿಂದೆ ತಮ ನ್ಯಾಮತಿ ಕ್ಷೇತ್ರದ ಬ್ಯಾಂಕ್ ಒಂದರಲ್ಲಿ 28 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ದರೋಡೆಯಾಗಿತ್ತು. ಪೊಲೀಸರು ಮೊನ್ನೆ ಆರೋಪಿಗಳನ್ನು ಬಂಧಿಸಿದ್ದರು, ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಗುಂಡು ಹೊಡೆಯಲಾಗಿದೆ. ಪೊಲೀಸರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಬಂಗಾರಪೇಟೆಯ ಕಾಂಗ್ರೆಸ್‌ನ ಎಸ್.ಎನ್.ನಾರಾಯಣಸ್ವಾಮಿ, ಮಂಗಳೂರು ಪೊಲೀಸರು ಜೀವದ ಹಂಗು ತೊರೆದು ದೊಡ್ಡ ಜಾಲವನ್ನು ಬೇಧಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಪೊಲೀಸರಿಗೆ ಅಭಿನಂದಿಸುತ್ತೇನೆ ಎಂದರು.
ಸಚಿವ ಪರಮೇಶ್ವರ್, ಮಾದಕ ವ್ಯಸನದ ಬಗ್ಗೆ ನಮ ಸರ್ಕಾರ ಶೂನ್ಯ ಸಹಿಷ್ಣೆತೆಯಿಂದೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕೆ ಅನುಗುಣವಾಗಿ ಪೊಲೀಸರು ಮತ್ತಷ್ಟು ತೀವ್ರವಾಗಿ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಾರೆ ಎಂದರು.
ಶಿಕಾರಿಪುರದ ಬಿಜೆಪಿಯ ಬಿ.ವೈ.ವಿಜಯೇಂದ್ರ, ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಅಭಿನಂದನಾರ್ಹರು. ಡ್ರಗ್ಸ್ ಜಾಲ ತಾಲ್ಲೂಕು ಮಟ್ಟಕ್ಕೆ ಹಬ್ಬಿದೆ. ಜಪ್ತಿ ಮಾಡಲಾದ ಡ್ರಗ್‌್ಸ ಪೊಲೀಸರ ಮೂಲಕವೇ ಮಾರಾಟವಾಗುತ್ತಿದೆ ಎಂಬ ಆರೋಪಗಳಿವೆ. ವಶಪಡಿಸಿಕೊಳ್ಳಲಾದ ಮಾದಕ ವಸ್ತು ಯಾವ ರೀತಿ ವಿಲೇವಾರಿಯಾಗುತ್ತಿದೆ ಎಂಬುದನ್ನು ಸಚಿವರು ಗಮನಿಸಬೇಕು ಎಂದು ಸಲಹೆ ನೀಡಿದರು.
ದಾಸರಹಳ್ಳಿ ಬಿಜೆಪಿಯ ಮುನಿರಾಜು, ಬೆಂಗಳೂರಿನಲ್ಲಿ ಕಾಲೇಜುಗಳಲ್ಲಿ ಮಾದಕ ವಸ್ತುಗಳ ವಹಿವಾಟು ನಡೆಸಲು ವಿದೇಶಿ ವ್ಯಕ್ತಿಗಳ ಕೈವಾಡದಿಂದ ದೊಡ್ಡ ಮಾಫೀಯಾ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಈ ವೇಳೆ ಸಭಾಧ್ಯಕ್ಷರು ಮಧ್ಯ ಪ್ರವೇಶಿಸಿ, ಈ ವಿಚಾರ ಹೆಚ್ಚು ಚರ್ಚೆ ಬೇಡ, ಅರ್ಧ ಗಂಟೆ ಪ್ರತ್ಯೇಕ ಚರ್ಚೆ ಮಾಡಲು ಸಮಯ ನೀಡಲಾಗುವುದು. ಮಂಗಳೂರು ಪೊಲೀಸರು ತಳಮಟ್ಟದಿಂದ ಶುರು ಮಾಡಿ 15 ಗ್ರಾಂನಿಂದ ಆರಂಭಾಗಿ 6.5 ಕೆಜಿವರೆಗೂ ವಶ ಪಡಿಸಿಕೊಂಡಿದ್ದಾರೆ. ಈ ಕಳ್ಳ ಸಾಗಾಣಿಕೆ ವಿಮಾನ ನಿಲ್ದಾಣದಲ್ಲಿ ಒಳ ಸಂಚು ನಡೆಯುತ್ತಿರುವ ಅನುಮಾನಗಳಿವೆ ಎಂದರು.
ಬೆಂಗಳೂರಿನಿಂದ ದೆಹಲಿವರೆಗೂ ಜಾಲ ಇದೆ.
ಪೆಡ್ಲರ್‌ಗಳನ್ನು ಒಳಗೊಂಡು, ಮೂಲದಿಂದ ಉನ್ನತ ಮಟ್ಟದವರೆಗೂ ಎಲ್ಲವನ್ನೂ ಪತ್ತೆ ಮಾಡಬೇಕು. ಮಾದಕ ವಸ್ತುಗಳ ಜಾಲದಲ್ಲಿ ಇರುವವರಿಗೆ ಭಯ ಹುಟ್ಟುವಂತೆ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಈ ಜಾಲವನ್ನು ನಿಗ್ರಹಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.