ಬೆಳಗಾವಿ, ಡಿ.27- ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅತ್ಯಂತ ಪ್ರಾಮಾಣಿಕ ರಾಜಕಾರಣಿ, 10 ವರ್ಷ ಪ್ರಧಾನಿಯಾಗಿದ್ದ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷಗಳಾಗಿತ್ತು. ಅವರ ಬದುಕನ್ನು ಪವಾಡದ ರೀತಿ ನೋಡಬಹುದಾಗಿದೆ. ಇವತ್ತಿನ ಪಾಕಿಸ್ತಾನದ ಕುಗ್ರಾಮವೊಂದರಲ್ಲಿ ಜನಿಸಿದ್ದ ಅವರು,
ಅಲ್ಲಿಂದ ದೇಶ ಹಾಗೂ ಜಗತ್ತಿನಲ್ಲೇ ಖ್ಯಾತ, ಶ್ರೇಷ್ಠ ಅರ್ಥ ಶಾಸ್ತ್ರಜ್ಞರಾಗಿ ಬೆಳೆದರು ಎಂದರು.
ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಐದು ವರ್ಷಗಳ ಕಾಲ ದೇಶದ ಆರ್ಥಿಕ ಸಲಹೆಗಾರರಾಗಿದ್ದರು. ಉದಾರೀಕರಣ ಹಾಗೂ ಖಾಸಗೀಕರಣದ ಮೂಲ ಭಾರತದ ಆರ್ಥಿಕತೆಯನ್ನು ಜಾಗತಿಕತೆಗೆ ಮುಕ್ತವಾಗಿಸಿದರು. ಆ ನಿರ್ಧಾರಗಳಿಂದ ದೇಶದ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಯಿತು ಎಂದು ವಿಶ್ಲೇಷಿಸಿದರು.
ಅದರ ನಂತರ 2004ರಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿದಾಗ ಸೋನಿಯಾ ಗಾಂಧಿ ಪ್ರಧಾನಿಯಾಗಲು ನಿರಾಕರಿಸಿದರು. ಆ ವೇಳೆ ಮನಮೋಹನ್ ಸಿಂಗ್ರನ್ನು ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಲಾಗುತ್ತದೆ. 10 ವರ್ಷಗಳ ಕಾಲ ದೇಶದ ಅಧಿಕಾರದ ಚುಕ್ಕಾಣಿ ಹಿಡಿದು ಪ್ರಧಾನಿಯಾಗಿ ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತಲು ಯತ್ನಿಸಿದ್ದರು ಎಂದರು.
ದೇಶ ಕಂಡ ಪ್ರಾಮಾಣಿಕರಲ್ಲಿ ಮನಮೋಹನ್ ಸಿಂಗ್ ಕೂಡ ಒಬ್ಬರು. ರಾಜಕಾರಣದಲ್ಲಿ ಪ್ರಾಮಾಣಿಕತೆ ಕಾಣುವುದು ಕಷ್ಟ. ಇವರು ಹತ್ತು ವರ್ಷವೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರು. ದೇಶದ ಆರ್ಥಿಕತೆ ಮೇಲೆ ದೊಡ್ಡ ಪ್ರಭಾವ ಬಿಟ್ಟು ಹೋಗಿದ್ದಾರೆ.
ಅವರ ಬದುಕು ಮತ್ತು ಆರ್ಥಿಕವಾಗಿ ಕೈಗೊಂಡ ನಿರ್ಣಯಗಳು ನಮೆಲ್ಲರಿಗೂ ಪ್ರೇರಣೆ ಮತ್ತು ಸ್ಪೂರ್ತಿಯಾಗಿದೆ. ಪ್ರಧಾನಿಯಾಗಿದ್ದೇನೆ ಎಂಬ ಕಾರಣಕ್ಕೆ ಎಂದೂ ಅಧಿಕಾರದ ಮದದಿಂದ ನಡೆದುಕೊಂಡಿರಲಿಲ್ಲ. ಅತ್ಯಂತ ಸರಳ, ಸಂಭಾವಿತ ರಾಜಕಾರಣಿ. ಅತ್ಯಂತ ಗೌರನ್ವಿತ ವ್ಯಕ್ತಿ ಎಂದು ಕೊಂಡಾಡಿದರು.
ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದವರು ಮನಮೋಹನ್ ಸಿಂಗ್. ದೇಶದಲ್ಲಿ ಬಡತನ ಇದೆ, ಎಲ್ಲರಿಗೂ ಮೂರು ರೂಪಾಯಿಗೆ ಅಕ್ಕಿ ಸಿಗಬೇಕು ಎಂಬ ಉದ್ದೇಶದಿಂದ ಕಾಯ್ದೆ ಜಾರಿಗೆ ತಂದರು. ಅದಕ್ಕೂ ಮುನ್ನಾ ತಾವು ಒಂದು ರೂಪಾಯಿಗೆ ಅಕ್ಕಿ ನೀಡುವ ಕಾರ್ಯಕ್ರಮ ಜಾರಿ ಮಾಡಿದ್ದು, ಆಹಾರ ಭದ್ರತೆ ಅನುಷ್ಠಾನಕ್ಕೆ ಬಂದ ಮೇಲೆ ಒಂದು ದರವನ್ನು ತೆಗೆದು ಉಚಿತವಾಗಿ ಅಕ್ಕಿ ನೀಡುವ ನಿರ್ಧಾರ ಮಾಡಿದ್ದೇವು. ಒಂದು ಕುಟುಂಬಕ್ಕೆ ಐದು ಕೆಜಿಯಿಂದ ಏಳು ಕೆಜಿಗೆ ಹೆಚ್ಚಿಸಲಾಯಿತು ಎಂದು ವಿವರಿಸಿದರು.
ಇಂದು ಪ್ರಧಾನಿ ನರೇಂದ್ರ ಮೋದಿಯವರು ಐದು ಕೆಜಿ ಅಕ್ಕಿ ನೀಡಲು ಕಾರಣಕರ್ತರು ಮನಮೋಹನ್ ಸಿಂಗ್ ಎಂದು ಹೇಳಿದರು.ತಾವು ರಾಜ್ಯದಲ್ಲಿ ಅನ್ನಭಾಗ್ಯವನ್ನು ಮುಂದುವರೆಸಲು ಮನಮೋಹನ್ಸಿಂಗ್ ಕಾರಣ. ಅವರ ಅಧಿಕಾರವಧಿಯಲ್ಲಿ ಬಡವರನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದರು.
ನನ್ನ ಮತ್ತು ಮನಮೋಹನ್ಸಿಂಗ್ ಅವರ ಒಡೆನಾಟ ಉತ್ತಮವಾಗಿತ್ತು. ಎರಡು ಮೂರು ಬಾರಿ ಅವರನ್ನು ಭೇಟಿಯಾಗಿದ್ದೆ. ಪ್ರಧಾನಿಯಾಗಿದ್ಧಾಗ ನಾನು ಇಲ್ಲಿ ಮುಖ್ಯಮಂತ್ರಿಯಾಗಿದ್ದೆ. ಅವರು ಮಾಜಿಯಾಗಿದ್ದಾಗ ಬೆಂಗಳೂರಿಗೆ ಕರೆಸಲಾಗಿತ್ತು. ಆ ವೇಳೆ ರಾಜ್ಯದ ಆರ್ಥಿಕತೆ ಬಗ್ಗೆ ಭಾಷಣ ಮಾಡಿದ್ದ ಅವರ 2013ರಿಂದ 2018ರವರೆಗೆ ರಾಜ್ಯದ ಆರ್ಥಿಕತೆ ಚೆನ್ನಾಗಿದೆ.
ಇಲ್ಲಿನ ಕಾರ್ಯಕ್ರಮಗಳು ಜನಪರವಾಗಿವೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದರು ಎಂದರು.
ರಾಜಕೀಯದಲ್ಲಿ ಗೌರವದಿಂದ ಬದುಕಿದ್ದ ವ್ಯಕ್ತಿ ಇಂದು ನಮನ್ನು ಅಗಲಿದ್ದಾರೆ. ಅವರ ಸಾವಿನಿಂದ ದೇಶಕ್ಕೆ ದೊಡ್ಡ ನಷ್ಟವಾಗಿದೆ. ಅವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಹಾಗೂ ಹಿತೈಶಿಗಳಿಗೆ ದೊರೆಯಲಿ ಎಂದು ಹೇಳಿದರು.