ಬೆಂಗಳೂರು, ಜು.3-ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮೆಚ್ಚಿಸಲು ಬೆಂಗಳೂರು ನಗರ ವಿಶ್ವವಿದ್ಯಾನಿಲಯಕ್ಕೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ನಾಮಕರಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರ ವಿಶ್ವಮಟ್ಟದಲ್ಲಿ ಬ್ರ್ಯಾಂಡ್ ಆಗಿದೆ. ಬೆಂಗಳೂರು ಹೆಸರನ್ನೇ ವಿಶ್ವವಿದ್ಯಾಲಯಕ್ಕೂ ಇಡಲಾಗಿತ್ತು. ಈಗ ಪರ್ಯಾಯಾವಾಗಿ ಮರುನಾಮಕರಣ ಮಾಡುವ ಅವಶ್ಯಕತೆ, ಜರೂರು ಏನಿತ್ತು? ಎಂದು ಪ್ರಶ್ನಿಸಿದೆ.
ರಾಜ್ಯದಲ್ಲಿ ಗುಲಾಮಿ ಕಾಂಗ್ರೆಸ್ ಸರ್ಕಾರದ ತೊಘಲಕ್ ಆಡಳಿತ ಹೇಗಿದೆ ನೋಡಿ ಕರ್ನಾಟಕದ ಮಹಾಜನತೆ ಎಂದಿರುವ ಜೆಡಿಎಸ್, ರಾಮನ ಹೆಸರಿನ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ವಿರೋಧವನ್ನು ಲೆಕ್ಕಿಸದೇ ಮರುನಾಮಕರಣ ಮಾಡಲಾಗಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಶ್ವವಿದ್ಯಾನಿಲಯ ಎಂದು ಹೆಸರಿಡಲು ಈಗ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ ಎಂದಿದೆ.
ಅಧಿಕಾರದ ಮದ, ದರ್ಪ, ದುರಹಂಕಾರದಲ್ಲಿ ಮೆರೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ಮೆಚ್ಚಿಸಲು ಬೆಂಗಳೂರಿನ ಘನತೆ, ಗೌರವಕ್ಕೆ ಹಾಗೂ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ವಿರೋಧದ ನಡುವೆಯೂ ಮಾಡುತ್ತಿರುವುದು ಅಕ್ಷಮ್ಯ. ಕನ್ನಡಿಗರಿಗೆ ಕಾಂಗ್ರೆಸ್ ಮಹಾದ್ರೋಹ ಎಸಗುತ್ತಿದೆ ಎಂದು ಆರೋಪಿಸಿದೆ.