Friday, November 22, 2024
Homeರಾಜ್ಯವಾಲ್ಮೀಕಿ ನಿಗಮ ಹಗರಣದಲ್ಲಿ ಇನ್ನೂ ಹಲವು ಸಚಿವರು ಶಾಮೀಲಾಗಿದ್ದಾರೆ : ವಿಜಯೇಂದ್ರ

ವಾಲ್ಮೀಕಿ ನಿಗಮ ಹಗರಣದಲ್ಲಿ ಇನ್ನೂ ಹಲವು ಸಚಿವರು ಶಾಮೀಲಾಗಿದ್ದಾರೆ : ವಿಜಯೇಂದ್ರ

ಬೆಂಗಳೂರು,ಜು.16- ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಶಾಸಕರು, ಮಾಜಿ ಮಂತ್ರಿಗಳು ಮಾತ್ರವಲ್ಲದೆ ಕೆಲವು ಸಚಿವರು ಭಾಗಿಯಾಗಿದ್ದಾರೆ. ಇವೆಲ್ಲವೂ ಬಹಿರಂಗವಾಗಿದ್ದು, ರಾಜ್ಯದ ಜನತೆ ಮುಂದೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಜೊತೆ ಮಾತನಾಡಿದ ಅವರು, ಹಗರಣದಲ್ಲಿ ಯಾರೂ ಕೂಡ ತನಿಖೆಯಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಯಾರೆಷ್ಟೇ ದೊಡ್ಡವರಾದರೂ ಸಿಬಿಐ ಮತ್ತು ಇ.ಡಿ ಮುಂದಕ್ಕೆ ಹೋಗಬೇಕಾಗುತ್ತದೆ. ಅವರದೇ ಆದ ರೀತಿಯಲ್ಲಿ ತನಿಖೆ ನಡೆಸುತ್ತಾರೆ ಎಂದರು.

ಒಂದೆಡೆ ಸಿಬಿಐ ತನಿಖೆ ನಡೆದಿದೆ. ಇನ್ನೊಂದೆಡೆ ಪ್ರತ್ಯೇಕವಾಗಿ ರಾಜ್ಯದಿಂದ ಎಸ್ಐಟಿ ತನಿಖೆ ನಡೆಸುತ್ತಿದೆ. ನಾಗೇಂದ್ರ ಅವರು ಈಗಾಗಲೇ ಇ.ಡಿ ಕಸ್ಟಡಿಯಲ್ಲಿದ್ದಾರೆ. ವಾಲ್ಮೀಕಿ ನಿಗಮದ ಅಧ್ಯಕ್ಷ, ಶಾಸಕ ದದ್ದಲ್ ಅವರು ನಿನ್ನೆ ಸದನಕ್ಕೆ ಹಾಜರಾಗಿದ್ದರು. ಯಾರು ಎಲ್ಲಿದ್ದಾರೆಂಬುದು ಮುಖ್ಯವಲ್ಲ. ಅದಕ್ಕಿಂತ ಹೆಚ್ಚಾಗಿ ನಾಗೇಂದ್ರರ ಜೊತೆಗೆ ದದ್ದಲ್ ಅವರ ಪಾತ್ರವೂ ಇದೆ ಎಂಬುದು ಬಹಿರಂಗವಾಗಿದೆ ಎಂದು ವಿವರಿಸಿದರು.

ಕಾವೇರಿ ನೀರು- ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳದಿರಿ. ಕಾವೇರಿ ನದಿ ನೀರಿನ ಸಂಬಂಧ ತಮಿಳುನಾಡಿನಲ್ಲಿ ಸರ್ವಪಕ್ಷ ಸಭೆ ಕರೆದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ತಮಿಳುನಾಡಿನಲ್ಲಿ ಏನು ಮಾಡುತ್ತಾರೆ ಎಂಬುದು ಮುಖ್ಯವಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿಗಳು ಕರೆದ ಸಭೆಯಲ್ಲಿ ನಮ್ಮ ಪಕ್ಷದ ನಿಲುವನ್ನು ಸ್ಪಷ್ಟವಾಗಿ ಮಂಡಿಸಿದ್ದೇವೆ.

ಯಾವುದೇ ಕಾರಣಕ್ಕೂ ರಾಜ್ಯದ, ಅದರಲ್ಲೂ ವಿಶೇಷವಾಗಿ ಮೈಸೂರು ಭಾಗದ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ರಾಜ್ಯ ಸರಕಾರ ನಡೆದುಕೊಳ್ಳಬಾರದು ಎಂದು ಆಗ್ರಹಿಸಿದ್ದಾಗಿ ತಿಳಿಸಿದರು. ಪ್ರತಿ ವರ್ಷವೂ ಕ್ಯಾತೆ ತೆಗೆಯುವ ತಮಿಳುನಾಡು ಸರಕಾರ ಪ್ರತಿ ಸಂದರ್ಭದಲ್ಲೂ, ಪ್ರತಿ ವರ್ಷವೂ ಕ್ಯಾತೆ ತೆಗೆಯುತ್ತಲೇ ಇರುತ್ತದೆ.

ಟ್ರಿಬ್ಯೂನಲ್ನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ವಾದ ಮಂಡಿಸಬೇಕು. ಇದಕ್ಕಾಗಿ ಸೂಕ್ತ ನ್ಯಾಯವಾದಿಗಳನ್ನು ನೇಮಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ. ಆ ನಿಟ್ಟಿನಲ್ಲಿ ಅವರು ಸಮರ್ಪಕ ನಿರ್ಧಾರ ಕೈಗೊಳ್ಳುವ ವಿಶ್ವಾಸ ನಮ್ಮಗೂ ಇದೆ ಎಂದು ಅವರು ಹೇಳಿದರು.

RELATED ARTICLES

Latest News