Sunday, June 30, 2024
Homeರಾಜ್ಯರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ

ಬೆಂಗಳೂರು,ಜೂ.21- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇದುವರೆಗೂ 17 ಆರೋಪಿಗಳನ್ನು ಬಂಧಿಸಿರುವ ಪೊಲೀಸರು 28 ಸ್ಥಳಗಳಲ್ಲಿ ಮಹಜರು ನಡೆಸಿ ಬರೋಬ್ಬರಿ 130ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಸಂಗ್ರಹಿಸಿರುವುದು ತಿಳಿದುಬಂದಿದೆ.

ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತಂದ ಸ್ಥಳದಿಂದ ಕೊಲೆಯಾದ ಪಟ್ಟಣಗೆರೆಯ ಶೆಡ್‌ ಹಾಗು ಮೃತದೇಹ ಪತ್ತೆಯಾದ ಸುಮನಹಳ್ಳಿಯ ರಾಜಕಾಲುವೆ, ಪಾರ್ಟಿ ಮಾಡಿದ ಹೋಟೆಲ್‌, ಮೈಸೂರಿನಲ್ಲಿ ದರ್ಶನ್‌ ತಂಗಿದ್ದ ಹೋಟೆಲ್‌, ಫಾರ್ಮ್‌ ಹೌಸ್‌‍ ಹಾಗೂ ಕೊಲೆಯಾದ ದಿನ ಆರೋಪಿಗಳು ಧರಿಸಿದ್ದಂತಹ ಬಟ್ಟೆ, ಶೂ, ಚಪ್ಪಲಿ ಹಲ್ಲೆಗೆ ಬಳಸಿದ್ದಂತಹ ವಸ್ತುಗಳು, ಆರೋಪಿಗಳ ಮೊಬೈಲ್‌ಗಳು ಸೇರಿದಂತೆ 130ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ವಿಜಯನಗರ ಉಪವಿಭಾಗದ ಪೊಲೀಸರು ಸಂಗ್ರಹಿಸಿದ್ದಾರೆ.

ದರ್ಶನ್‌ ಸೇರಿದಂತೆ 17 ಆರೋಪಿಗಳ ನಿವಾಸಗಳಲ್ಲೂ ಹಾಗೂ ಪ್ರಕರಣ ಸಂಬಂಧ 11 ಪ್ರಮುಖ ಸ್ಥಳಗಳಲ್ಲಿಯೂ ಸ್ಥಳ ಮಹಜರು ಮಾಡಿ ಹಲವು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಒಟ್ಟಾರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇನ್ನು ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ.

ಕೇಂದ್ರಬಿಂದುವೇ ಪವಿತ್ರಾಗೌಡ:
ಈ ಪ್ರಕರಣದ ಕೇಂದ್ರಬಿಂದು ಪವಿತ್ರಗೌಡ ಎಂಬುದು ಪೊಲೀಸರ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿ ಮೊಬೈಲ್‌ಗೆ ಪವಿತ್ರಾ ಗೌಡ ತನ್ನ ಮೊಬೈಲ್‌ನಿಂದ ಮೆಸೇಜ್ ಕಳುಹಿಸಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದು, ಆಕೆಯ ಮೊಬೈಲ್‌ನಲ್ಲಿರುವ ಸಂದೇಶಗಳೇ ಈ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಲಿವೆ.

ರೇಣುಕಾಸ್ವಾಮಿಯನ್ನು ಅಪಹರಿಸಿಕೊಂಡು ನಗರಕ್ಕೆ ಕರೆತಂದು ಆತನಿಗೆ ಬುದ್ದಿ ಕಲಿಸಬೇಕೆಂದು ಪವಿತ್ರಗೌಡ ಪ್ರಚೋದನೆ ನೀಡಿ ಒತ್ತಡ ಹಾಕಿದ್ದರಿಂದಲೇ ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣವಾಗಿದೆ ಎಂಬುದು ಗೊತ್ತಾಗಿದೆ. ಹಾಗಾಗಿ ಈ ಪ್ರಕರಣದ ಪ್ರಮುಖ ಕೇಂದ್ರಬಿಂದು ಪವಿತ್ರ ಗೌಡ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ರೇಣುಕಾಸ್ವಾಮಿ ಮೊಬೈಲ್‌ ಇದುವರೆಗೂ ಪತ್ತೆಯಾಗಿಲ್ಲ. ಅವರ ಮೊಬೈಲ್‌ ಸಿಕ್ಕಿದರೆ ಇನ್ನಷ್ಟು ಮಾಹಿತಿಗಳು ಬಯಲಾಗಲಿದ್ದು, ದರ್ಶನ್‌ ಅಂಡ್‌ ಗ್ಯಾಂಗ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ವಿನಯ್‌ ಮೊಬೈಲ್‌ ಸಾಕ್ಷ:
ದರ್ಶನ್‌ ಆಪ್ತ ವಿನಯ್‌ ಮೊಬೈಲ್‌ನಲ್ಲಿ ಪ್ರಮುಖ ಸಾಕ್ಷ್ಯವಿದ್ದು ಇದು ದರ್ಶನ್‌ ಗ್ಯಾಂಗ್‌ಗೆ ಕಂಟಕವಾಗಲಿದೆ. ವಿನಯ್‌ ಮೊಬೈಲ್‌ಗೆ ಯಾರು ಅದನ್ನು ಕಳುಹಿಸಿದರೆಂಬ ಬಗ್ಗೆ ಪೊಲೀಸರು ಹೆಚ್ಚಿನ ವಿವರಗಳನ್ನು ಕಲೆ ಹಾಕುತ್ತಿದ್ದಾರೆ.

ಡೇಟಾ ರಿಟ್ರೀವ್:
ಎಲ್ಲಾ ಆರೋಪಿಗಳ ಮೊಬೈಲ್‌ಗಳ ಡೇಟಾ ರಿಟ್ರೀವ್‌ ಸಂಗ್ರಹಿಸಲು ತನಿಖಾ ತಂಡ ಮುಂದಾಗಿದ್ದು, ಇದರಿಂದ ಮಹತ್ವದ ಸಾಕ್ಷ್ಯ ದೊರೆಯುವ ಸಾಧ್ಯತೆ ಇದೆ. ರಿಟ್ರೀವ್‌ನಿಂದ ಸಂಗ್ರಹಿಸುವ ಸಾಕಷ್ಟ್ಯಗಳು ದರ್ಶನ್‌ ಅಂಡ್‌ ಗ್ಯಾಂಗ್‌ಗೆ ಮುಳುವಾಗಲಿದೆ. ಸೈಬರ್‌ ತಜ್ಞರ ನೆರವಿನಿಂದ ಡೇಟ ರಿಟ್ರೀವ್‌ ಮಾಡಲಾಗುತ್ತಿದೆ. ಈ ಪ್ರಕರಣದಲ್ಲಿ ಆರೋಪಿಗಳು ವಿಚಾರಣೆ ವೇಳೆ ಸುಳ್ಳು ಹೇಳಿದ್ರೂ ಎಲ್ಲಾ ಆರೋಪಿಗಳಲ್ಲಿರುವ ಸಾಕ್ಷ್ಯಗಳನ್ನು ಸುಳ್ಳು ಎಂದು ಹೇಳಕ್ಕಾಗುವುದಿಲ್ಲ.

ಮೂವರು ವಶಕ್ಕೆ :
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದ ಮೂವರು ಪ್ರಕರಣ ಹೊರಬರುತ್ತಿದ್ದಂತೆ ನಾಪತ್ತೆಯಾಗಿದ್ದಾರೆ. ನಿನ್ನೆ ಈ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆ ವಿಡಿಯೋ ಡಿಲಿಟ್‌ ಮಾಡಿರುವುದು ತಿಳಿದುಬಂದಿದೆ.

ಹಲ್ಲೆ ದೃಶ್ಯದ ವಿಡಿಯೋವನ್ನು ಬೇರೆ ಯಾರಿಗಾದರೂ ಫಾವರ್ಡ್‌ ಮಾಡಲಾಗಿದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗಿದೆ. ಸದ್ಯ ಪೊಲೀಸರು ಈ ಮೂವರ ಮೊಬೈಲ್‌ಗಳ ಡೇಟಾ ರಿಟ್ರೀವ್‌ ಪ್ರಕ್ರಿಯೆ ನಡೆಸುತ್ತಿದ್ದಾರೆ.

ಕಾಣದ ಕೈಗಳು ಶಾಮೀಲು:
ಈ ಪ್ರಕರಣದ ಸಾಕ್ಷ್ಯ ನಾಶಕ್ಕೆ ಕಾಣದ ಕೈಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಸಾಕ್ಷ್ಯ ನಾಶಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿರಿರೋರು ಯಾರು? ಬಂಧಿತರಾಗಿರುವ 17 ಆರೋಪಿಗಳನ್ನು ಹೊರತುಪಡಿಸಿ ತೆರೆಮರೆಯಲ್ಲಿ ಸಹಕರಿಸಿದವರ ಬಗ್ಗೆ ಪೊಲೀಸ್‌‍ ಕಸ್ಟಡಿಯಲ್ಲಿರುವ ನಾಲ್ವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.

RELATED ARTICLES

Latest News