Friday, November 22, 2024
Homeರಾಜ್ಯಗೌರಿ-ಗಣೇಶ ಹಬ್ಬಕ್ಕೆ ಖರೀದಿ ಭರಾಟೆ

ಗೌರಿ-ಗಣೇಶ ಹಬ್ಬಕ್ಕೆ ಖರೀದಿ ಭರಾಟೆ

Markets report soaring fruit, flower prices closer to festive weekend

ಬೆಂಗಳೂರು,ಸೆ.5- ಗೌರಿ-ಗಣೇಶ ಹಬ್ಬಕ್ಕೆ ರಾಜ್ಯದ ಜನತೆ ಸಜ್ಜಾಗುತ್ತಿದ್ದು, ಹಬ್ಬಕ್ಕೆ ಬೇಕಾಗುವ ಹೂ-ಹಣ್ಣು, ಪೂಜಾ ಸಾಮಗ್ರಿಗಳು, ಗೌರಿ-ಗಣೇಶ ಮೂರ್ತಿಗಳು ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.

ವರಮಹಾಲಕ್ಷ್ಮಿ ಹಬ್ಬದ ವೇಳೆ ಗಗನಕ್ಕೇರಿದ ಹೂ-ಹಣ್ಣಿನ ಬೆಲೆ ಇದೀಗ ಸ್ವಲ್ಪ ಇಳಿಕೆ ಕಂಡಿದೆ. ಆದರೆ ತರಕಾರಿ ಬೆಲೆ ಹೆಚ್ಚಾಗಿದ್ದು, ಗ್ರಾಹಕರಿಗೆ ಈ ಬಾರಿ ಬೆಲೆ ಏರಿಕೆಯ ಬಿಸಿ ಅಷ್ಟೇನೂ ತಟ್ಟಿಲ್ಲ.

ಬೆಂಗಳೂರಿನ ಕೆ.ಆರ್‌.ಮಾರುಕಟ್ಟೆ, ಯಶವಂತಪುರ, ದಾಸನಪುರ, ಸೀಗೆಹಳ್ಳಿ, ಮಲ್ಲೇಶ್ವರಂ ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಮಾರುಕಟ್ಟೆಗಳಲ್ಲಿ ಮುಂಜಾನೆಯೇ ಜನರು ಜಮಾಯಿಸಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂದವು.

ಕನಕಾಂಬರ ಈಗಲೂ ದುಬಾರಿ :
ವರಮಹಾಲಕ್ಷ್ಮಿ ಹಬ್ಬದಲ್ಲಿ ಹೆಚ್ಚಾಗಿದ್ದ ಹೂವಿನ ಬೆಲೆ ಇದೀಗ ತುಸು ಕಡಿಮೆಯಾಗಿದೆ. ಆದರೆ ಕನಕಾಂಬರ ಮಾತ್ರ ಅದರ ಹೆಸರಿಗೆ ತಕ್ಕಂತೆ ಅಂಬರದಲ್ಲಿದೆ. ಕೆಜಿಗೆ 2,500 ರೂ.ಗೆ ಮಾರಾಟವಾಗುತ್ತಿದೆ.

ಮಲ್ಲಿಗೆ ಪ್ರತಿ ಕೆಜಿಗೆ 300 ರಿಂದ 600, ಗುಲಾಬಿ 150 ರಿಂದ 200, ಸೇವಂತಿಗೆ 150 ರಿಂದ 200, ಸುಗಂಧರಾಜ 100 ರಿಂದ 200, ಮಾರಿಗೋಲ್ಡ್ 200 ರೂ.ಗಳಿಗೆ ಮಾರಾಟವಾಗುತ್ತಿದೆ.

ಗರಿಕೆ, ಬೇಲದಹಣ್ಣು, ಎಕ್ಕದ ಹೂವಿನ ಹಾರಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ಬಾಳೆಕಂದು, ಮಾವಿನಸೊಪ್ಪು ಮಾರಾಟ ಜೋರಾಗಿದೆ. ಜೋಡಿ ಬಾಳೆಕಂದಿಗೆ 60 ರೂ., ಮಾವಿನಸೊಪ್ಪಿನ ಕಟ್ಟಿಗೆ 20 ರೂ., ಗರಿಕೆ 30 ರೂ., ಬೆಲೆ ಇದೆ.

ಇನ್ನು ಥರೇವಾರಿ ಗೌರಿ-ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬಂದಿದ್ದು, ಗಾತ್ರಕ್ಕೆ ತಕ್ಕಂತೆ ಬೆಲೆ ನಿಗಧಿ ಮಾಡಿ ಮಾರಾಟ ಮಾಡಲಾಗುತ್ತಿದೆ.

ತರಕಾರಿ ಬೆಲೆಯಲ್ಲಿ ಏರಿಕೆ :
ಅಡುಗೆ ಮನೆಯ ಕೆಂಪು ಸುಂದರಿ ಹಾಗೂ ಲಾಟರಿ ಬೆಳೆ ಎಂದೇ ಹೆಸರಾಗಿರುವ ಟೊಮ್ಯಾಟೊ ಹೊರತುಪಡಿಸಿದರೆ ಎಲ್ಲಾ ತರಕಾರಿಗಳ ಬೆಲೆ ಹೆಚ್ಚಾಗಿಯೇ ಇದೆ.ಕ್ಯಾರೆಟ್‌ ಕೆ.ಜಿ.ಗೆ 80 ರೂ., ಕ್ಯಾಪ್ಸಿಕಂ 60 ರೂ., ಈರುಳ್ಳಿ 60, ಬೀನ್ಸ್ 60 ರೂ., ಟೊಮ್ಯಾಟೊ 15 ರೂ., ಆಲೂಗಡ್ಡೆ 40 ರೂ., ಬೀಟರೂಟ್‌ 50 ರೂ., ಹಸಿಬಟಾಣಿ 250 ರೂ., ಬೆಳ್ಳುಳ್ಳಿ 500 ರೂ., ಶುಂಠಿ 200 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ರಾಜ್ಯದ ವಿವಿಧೆಡೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಬೆಳೆಗಳು ನಾಶವಾಗಿದ್ದು, ತರಕಾರಿ ಬೆಲೆ ಏರಿಕೆಯಾಗಿದೆ. ಅದರಲ್ಲೂ ಸೊಪ್ಪಿಗೆ ಹಾನಿಯಾಗಿದ್ದು, ಕೆಲ ದಿನಗಳ ಹಿಂದೆ ಒಂದು ಕಟ್ಟಿಗೆ 20 ರೂ.ಗೆ ಮಾರಾಟವಾಗುತ್ತಿದ್ದ ಕೊತ್ತಂಬರಿ ಸೊಪ್ಪು ಏಕಾಏಕಿ 50 ರೂ.ಗೆ ಮಾಡಲಾಗುತ್ತಿದೆ.

ಅದೇನೇ ಬೆಲೆ ಹೆಚ್ಚಿರಲಿ, ಕಡಿಮೆಯಿರಲಿ, ನಮ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಬೇಕಲ್ಲ, ಹಬ್ಬಗಳನ್ನು ಮಾಡಲೇಬೇಕು ಎಂದು ನಗರದ ಜನತೆ ಖರೀದಿಯಲ್ಲಿ ತೊಡಗಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

RELATED ARTICLES

Latest News