Monday, August 25, 2025
Homeರಾಜ್ಯಧರ್ಮಸ್ಥಳದ ಪ್ರಕರಣ : ತಮಿಳುನಾಡಿನಲ್ಲಿ ಮುಸುಕುಧಾರಿ ಪತ್ನಿಯ ವಿಚಾರಣೆ

ಧರ್ಮಸ್ಥಳದ ಪ್ರಕರಣ : ತಮಿಳುನಾಡಿನಲ್ಲಿ ಮುಸುಕುಧಾರಿ ಪತ್ನಿಯ ವಿಚಾರಣೆ

Masked Man wife questioned in Tamil Nadu

ಬೆಂಗಳೂರು, ಆ.25- ಧರ್ಮಸ್ಥಳದ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಅಧಿಕಾರಿಗಳು ತಮಿಳುನಾಡಿನ ಚಿಕ್ಕರಸಂಪಾಳ್ಯ ಗ್ರಾಮಕ್ಕೆ ತೆರಳಿ ಮಾಸ್ಕ್‌ಮ್ಯಾನ್‌ ಚಿನ್ನಯ್ಯನ ಪತ್ನಿ ಮಲ್ಲಿಗೆ ಅವರನ್ನು ವಿಚಾರಣೆ ನಡೆಸಿದ್ದಾರೆ.ನಿನ್ನೆ ಸತ್ಯಮಂಗಲ ಪೊಲೀಸ್‌‍ ಠಾಣೆಗೆ ಭೇಟಿ ನೀಡಿದ 5 ಮಂದಿ ಎಸ್‌‍ಐಟಿ ಅಧಿಕಾರಿಗಳ ತಂಡ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಚಿನ್ನಯ್ಯನ ಮನೆಗೆ ಭೇಟಿ
ನೀಡಿ ಮಾಹಿತಿ ಕಲೆಹಾಕಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ನೀಡಿರುವ ಮಲ್ಲಿಗೆ ಅವರು, ತಮ ಪತಿ ಕೆಲಸಕ್ಕೆ ಹೋಗುತ್ತೇನೆ ಎಂದು ಎರಡು ತಿಂಗಳ ಹಿಂದೆ ತೆರಳಿದ್ದರು. ಧರ್ಮಸ್ಥಳದ ವಿರುದ್ಧದ ಪ್ರಕರಣದಲ್ಲಿ ಅವರು ಹೇಳಿಕೆ ನೀಡಿರುವುದು ನನಗೆ ಟಿವಿಗಳ ಮೂಲಕ ಗೊತ್ತಾಯಿತು. ಈ ನಡುವೆ ತಮಗೆ ಫೋನ್‌ ಮಾಡಿದ್ದ ಚಿನ್ನಯ್ಯ ನಾನು ವಕೀಲರ ಜೊತೆ ಇದ್ದೇನೆ, ಭಯ ಬೇಡ, ಬೇಗ ವಾಪಾಸ್‌‍ ಬರುತ್ತೇನೆ ಎಂದು ಹೇಳಿದರು.

ಟಿವಿಯಲ್ಲಿ ಬರುತ್ತಿರುವ ವಿಚಾರಗಳ ಬಗ್ಗೆ ಪ್ರಶ್ನಿಸಿದಾಗ ವಾಪಸ್‌‍ ಬಂದ ನಂತರ ಎಲ್ಲಾ ಹೇಳುತ್ತೇನೆ. ಸದ್ಯಕ್ಕೆ ನಾನು ಚೆನ್ನಾಗಿದ್ದೇನೆ. ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದರು. 17 ವರ್ಷಗಳ ಹಿಂದೆ ಮದುವೆಯಾಗಿದ್ದ ನಾವು ಆರಂಭದಲ್ಲಿ ಧರ್ಮಸ್ಥಳದಲ್ಲೇ ವಾಸವಿದ್ದೆವು. ಅಲ್ಲಿ ನಾನು ಪೌರಕಾರ್ಮಿಕಳಾಗಿ ಕೆಲಸಮಾಡುತ್ತಿದ್ದೆ. ಅವರು ಧರ್ಮಸ್ಥಳದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದರು. 10 ವರ್ಷಗಳ ಹಿಂದೆ ಸತ್ಯಮಂಗಲದ ಬಳಿ ಬಂದು ನೆಲೆಸಿದ್ದು, ಗಾರ್ಮೆಂಟ್‌್ಸ ಹಾಗೂ ಮಿಲ್‌ಗಳಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ನನ್ನ ಪತಿ ಧರ್ಮಸ್ಥಳದ ಪರಮ ಭಕ್ತ. ಈ ರೀತಿ ಯಾಕೆ ಮಾಡಿದ್ದಾರೋ ಗೊತ್ತಿಲ್ಲ. ಆತ ಒಳ್ಳೆಯವರು. ದುರಾಸೆಯ ಮನುಷ್ಯ ಅಲ್ಲ. ನನಗೆ ಯಾವತ್ತೂ ಕಿರುಕುಳ ಕೊಟ್ಟಿಲ್ಲ, ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರಿಗೆ ಧರ್ಮಸ್ಥಳದ ಮಂಜುನಾಥನೇ ದಾರಿ ತೋರಿಸುತ್ತಾನೆ. ಅವರಿಗೆ ಯಾವ ಅಪಾಯವಾಗದೆ ಮರಳಿ ಬರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.

ನಾವು ತಮಿಳುನಾಡಿನಲ್ಲಿದ್ದರೂ ಸಂಬಂಧಿಕರು ಮನೆಗೆ ಬಂದಾಗ ಎಲ್ಲರ ಜೊತೆ ಸೇರಿ ಇಲ್ಲಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದೆವು. ಅಲ್ಲಿನ ಮ್ಯಾನೇಜರ್‌ ಅವರಿಂದ ಚಿನ್ನಯ್ಯ ಚೀಟಿ ಪಡೆದು, ನೇರವಾಗಿ ದರ್ಶನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಹಲವಾರು ಬಾರಿ ದೇವಸ್ಥಾನಕ್ಕೆ ಹೋಗಿದ್ದೇವೆ ಎಂದಿರುವ ಮಲ್ಲಿಗೆ, ತಮಗೆ ಯಾವ ಷಡ್ಯಂತ್ರಗಳೂ ಗೊತ್ತಿಲ್ಲ, ಮಹೇಶ್‌ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣ್ಣನವರ್‌ ಸೇರಿದಂತೆ ಯಾರ ಪರಿಚಯವೂ ಇಲ್ಲ ಎಂದಿದ್ದಾರೆ.

ನಾವು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರವಾಗಿಲ್ಲ. ಈಗಲೂ ಮನೆಯಲ್ಲಿ ಹಿಂದೂ ದೇವರುಗಳ ಫೋಟೋಗಳಿಗೆ ಪೂಜೆ ಮಾಡುತ್ತೇವೆ. ಚಿನ್ನಯ್ಯ ಅವರ ಅಣ್ಣ ಚರ್ಚಿಗೆ ಹೋಗುತ್ತಿದ್ದರು. ಅವರಿಗೆ ಕಣ್ಣು ಕಾಣುವುದಿಲ್ಲ. ಅವರ ಮಕ್ಕಳು ಇಲ್ಲದ ಸಂದರ್ಭದಲ್ಲಿ ಅಣ್ಣನನ್ನು ಚರ್ಚಿನಿಂದ ಮನೆಗೆ ಕರೆ ತರಲು ಚಿನ್ನಯ್ಯ ಬೈಕ್‌ನಲ್ಲಿ ಹೋಗುತ್ತಿದ್ದರು. ಮನೆಯಲ್ಲಿ ಯೇಸುಕ್ರಿಸ್ತನ ಫೋಟೋ ಇರುವ ಕ್ಯಾಲೆಂಡರ್‌ ಇದೆ. ಅದನ್ನು ಯಾರೋ ಕೊಟ್ಟಿದ್ದರು. ಕ್ಯಾಲೆಂಡರ್‌ ಎಂಬ ಕಾರಣಕ್ಕಾಗಿ ಇಟ್ಟುಕೊಂಡಿದ್ದೇವೆ. ಇದರ ಹೊರತಾಗಿ ನಾವು ಮತಾಂತರವೂ ಆಗಿಲ್ಲ, ಚರ್ಚಿಗೂ ಹೋಗಿಲ್ಲ ಎಂದಿದ್ದಾರೆ.

ಚಿನ್ನಯ್ಯ ಅವರಿಗೆ ಮೊದಲನೇ ಪತ್ನಿ ಇರುವುದು ನನಗೆ ಗೊತ್ತಿರಲಿಲ್ಲ ಟಿವಿಯಲ್ಲಿ ಆಕೆ ಮಾತನಾಡಿರುವುದನ್ನು ಕೇಳಿದ ನಂತರ ವಿಷಯ ಗೊತ್ತಾಯಿತು ಎಂದಿದ್ದಾರೆ. ತಮಗೆ ಒಬ್ಬ ಮಗನಿದ್ದು, ಆತನನ್ನು ನನ್ನ ತಾಯಿ ಬಳಿ ಬಿಟ್ಟಿದ್ದೇವೆ. ಚಿನ್ನಯ್ಯ ನಮ ಕುಟುಂಬದ ಆಧಾರ. ಅವರು ಈ ಗೊಂದಲದಲ್ಲಿ ಏಕೆ ಸಿಲುಕಿದರೋ ಗೊತ್ತಿಲ್ಲ. ಎಸ್‌‍ಐಟಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ ಎಂದು ಆಕೆ ತಿಳಿಸಿದ್ದಾರೆ.

RELATED ARTICLES

Latest News