ಹಾಸನ, ಮೇ 30- ಸಂಸದ ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಆಗ್ರಹಿಸಿ ನಗರದಲ್ಲಿಂದು ಕರ್ನಾಟಕ ಜನಪರ ಚಳವಳಿಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಹಣಬಲ ಮತ್ತು ಅಧಿಕಾರದಿಂದ ಮಹಿಳೆಯರನ್ನು ಬಳಸಿಕೊಂಡು ಹಿಂಸಾಚಾರಕ್ಕೆ ಗುರಿಪಡಿಸಿ ಅದನ್ನು ಚಿತ್ರೀಕರಣ ಮಾಡಿಕೊಂಡಿರುವುದು ಖಂಡನೀಯ. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಮಹಿಳಾ ಹೋರಾಟಗಾರ್ತಿ ಸುಭಾಷಿಣಿ ಅಲಿ ಸೇರಿದಂತೆ ವಿವಿಧ ಮುಖಂಡರ ನೇತೃತ್ವದಲ್ಲಿ ಎನ್‌ಆರ್ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಚತುಷ್ಪಥ ರಸ್ತೆವರೆಗೂ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ವಿವಿಧ ಮಹಿಳಾ, ಕಾರ್ಮಿಕ, ರೈತ, ಯುವಜನ, ದಲಿತ ವಿದ್ಯಾರ್ಥಿಗಳ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದು, ಪ್ರಜ್ವಲ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದವು.
ಪ್ರಜ್ವಲ್ ವಿರುದ್ಧ ಈಗ ನಡೆದಿರುವ ತನಿಖೆಗಳು ಏನೂ ಇಲ್ಲ. ಇನ್ನೂ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು. ದೂರುದಾರ ಮಹಿಳೆಯರ ಗೌಪ್ಯತೆ ಕಾಪಾಡಿ ಅವರಿಗೆ ಆಪ್ತ ಸಮಾಲೋಚನೆ, ಕಾನೂನು ಸಲಹೆ, ರಕ್ಷಣೆ, ಪುನರ್ವಸತಿ ಮತ್ತು ಪರಿಹಾರ ಒದಗಿಸಬೇಕು. ನೊಂದ ಮಹಿಳೆಯರಿಗೆ ನ್ಯಾಯ ದೊರೆಯಬೇಕು ಎಂದು ಒತ್ತಾಯಿಸಿದರು.