Wednesday, December 18, 2024
Homeರಾಜ್ಯಕಿಕ್‌ ಬ್ಯಾಕ್‌ ಪಡೆದು ಕಂಪೆನಿಗಳಿಗೆ ಟೆಂಡರ್‌: ಸರ್ಕಾರದ ಮೇಲೆ ಮೊತ್ತೊಂದು ಗಂಭೀರ ಆರೋಪ

ಕಿಕ್‌ ಬ್ಯಾಕ್‌ ಪಡೆದು ಕಂಪೆನಿಗಳಿಗೆ ಟೆಂಡರ್‌: ಸರ್ಕಾರದ ಮೇಲೆ ಮೊತ್ತೊಂದು ಗಂಭೀರ ಆರೋಪ

ಬೆಂಗಳೂರು,ಡಿ.7- ಸರಕಾರ ನಿಷೇಧಿತ ಕಂಪೆನಿಗಳಿಂದ ಕಿಕ್‌ ಬ್ಯಾಕ್‌ ಪಡೆದು ಬ್ಲ್ಯಾಕ್‌ ಲಿಸ್ಟ್‌ನಲ್ಲಿರುವ ಕಂಪೆನಿಗಳಿಗೆ ಟೆಂಡರ್‌ ಕೊಟ್ಟಿದ್ದರಿಂದಲೇ ದೊಡ್ಡ ಪ್ರಮಾಣದಲ್ಲಿ ಬಾಣಂತಿಯರ ಸಾವು ಸಂಭವಿಸುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್‌ ಗಂಭೀರ ಆರೋಪ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಳೆದ 8 ತಿಂಗಳುಗಳಿಂದ ಅಲ್ಲಲ್ಲಿ ನಿರಂತರವಾಗಿ ಬಾಣಂತಿಯರ ಸಾವಿನ ಪ್ರಕರಣಗಳು ದಾಖಲಾಗುತ್ತಿವೆ. ಈ ರಾಜ್ಯ ಸರಕಾರವು ಬಾಣಂತಿಯರ ಶವದ ಮೇಲೆ ಜನಕಲ್ಯಾಣ ಸಮಾವೇಶ ಮಾಡುತ್ತಿದೆ ಎಂದು ಟೀಕಿಸಿದರು.

ದೋಷಪೂರಿತ ಐವಿ ಫ್ಲೂಯಿಡ್‌ನಿಂದ ಬಾಣಂತಿಯರ ಸಾವಾಗಿದೆ; ರಾಜ್ಯ ಸರಕಾರ ಕಿಕ್‌ ಬ್ಯಾಕ್‌ ಪಡೆದುದೇ ಇಂಥ ಕಳಪೆ ಗುಣಮಟ್ಟದ ಐವಿ ಫ್ಲೂಯಿಡ್‌ ಪೂರೈಕೆಗೆ ನೇರ ಕಾರಣ ಎಂದು ಆರೋಪಿಸಿದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ಮಾಡಲು ರಾಜ್ಯಾಧ್ಯಕ್ಷರು ಕರೆ ಕೊಟ್ಟಿದ್ದರ ಫಲವಾಗಿ, ಬಳ್ಳಾರಿಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ವಿಧಾನಪರಿಷತ್‌ ಸದಸ್ಯ ಸತೀಶ್‌, ಮಾಜಿ ಶಾಸಕ ಸೋಮಶೇಖರ ರೆಡ್ಡಿ ಸೇರಿ ಬಿಜೆಪಿಯ ಎಲ್ಲ ಮುಖಂಡರು ಬೃಹತ್‌ ಪ್ರಮಾಣದ ಹೋರಾಟ ನಡೆಸುತ್ತಿದ್ದಾರೆ ಎಂದು ವಿವರಿಸಿದರು.

ಮಾನ್ಯ ಸಚಿವರ ಬಳ್ಳಾರಿ ಭೇಟಿಯು ಮೊಸಳೆಕಣ್ಣೀರಿನ ಭೇಟಿ ಎಂದು ಟೀಕಿಸಿದ ಅವರು, ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಇಲ್ಲದ ಆರೋಗ್ಯ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಬಳ್ಳಾರಿಯ ಬಿಜೆಪಿ ಪ್ರತಿಭಟನೆ ಕೇವಲ ಕೆಲವು ಗಂಟೆಗಳದ್ದಲ್ಲ; ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಕೊಡುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ಸಚಿವರ ವಜಾ, ನ್ಯಾಯಾಂಗ ತನಿಖೆ, 25 ಲಕ್ಷ ಪರಿಹಾರಕ್ಕೆ ಆಗ್ರಹ ಸರಕಾರ ಸ್ಪಂದಿಸದೆ ಇದ್ದಲ್ಲಿ ಉಪವಾಸ ಸತ್ಯಾಗ್ರಹ ಮಾಡಬೇಕಾದೀತು; ಒಟ್ಟಿನಲ್ಲಿ ಬಿಜೆಪಿ ದೊಡ್ಡ ಪ್ರಮಾಣದ ಹೋರಾಟ ನಡೆಸಲಿದೆ ಎಂದು ಪ್ರಕಟಿಸಿದರು. ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ದಿನೇಶ್‌ ಗುಂಡೂರಾವ್‌ ಅವರನ್ನು ವಜಾಗೊಳಿಸಬೇಕು; ಮೃತರ ಕುಟುಂಬಕ್ಕೆ ಭಿಕ್ಷೆ ಥರ ಪರಿಹಾರ ಕೊಟ್ಟಿದ್ದೀರಿ, ಸರಕಾರದ ನಿರ್ಲಕ್ಷ್ಯದಿಂದ ಬಾಣಂತಿಯರ ಸಾವು ಸಂಭವಿಸಿದ್ದು, ಪ್ರತಿ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರ ಕೊಡಬೇಕೆಂದು ಪಿ. ರಾಜೀವ್‌ ಅವರು ಆಗ್ರಹಿಸಿದರು.

ನಿಷೇಧಿತ ಔಷಧಿ ಕಂಪೆನಿಗಳಿಂದ ಕಿಕ್‌ ಬ್ಯಾಕ್‌ ಪಡೆದವರು ಯಾರು? ಕಿಕ್‌ ಬ್ಯಾಕ್‌ ಎಷ್ಟು? ಸಾವಿಗೆ ಯಾರೆಲ್ಲ ಕಾರಣರು? ಎಂದು ಪ್ರಶ್ನಿಸಿದ ಅವರು, ಕೇವಲ ಡ್ರಗ್‌ ಕಂಟ್ರೋಲರ್‌ ಅಮಾನತಿನಿಂದ ನ್ಯಾಯ ಸಿಗುವುದಿಲ್ಲ ಎಂದು ನುಡಿದರು. ನ್ಯಾಯಾಂಗ ತನಿಖೆ ಮಾಡಿ ಎಂದು ಒತ್ತಾಯಿಸಿದರು. ಬಿಜೆಪಿ ಕಾನೂನು ಪ್ರಕೋಷ್ಠವು ಸರಕಾರ, ಸಚಿವರು, ಡ್ರಗ್‌ ಕಂಟ್ರೋಲರನ್ನು ಆರೋಪಿಗಳನ್ನಾಗಿ ಮಾಡಿ ಅಮಾಯಕ ಬಾಣಂತಿಯರ ಸಾವಿಗೆ ಇವರೇ ಕಾರಣರೆಂದು ದೂರು ದಾಖಲಿಸಲಿದೆ. ಕಾನೂನು ಹೋರಾಟವನ್ನೂ ಮಾಡುತ್ತೇವೆ. ನಾಳೆ ಅಥವಾ ನಾಡಿದ್ದು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಬಳ್ಳಾರಿಗೆ ಭೇಟಿ ನೀಡುತ್ತಾರೆ ಎಂದು ವಿವರ ನೀಡಿದರು.

ಸರಕಾರಕ್ಕೆ ಅಭಿವೃದ್ಧಿ ಮಾಡಲು ಯೋಗ್ಯತೆ ಇಲ್ಲ. ಜನಸಾಮಾನ್ಯರಿಗೆ ನ್ಯಾಯ ಕೊಡಲು, ಬಾಣಂತಿಯರ ಪ್ರಾಣ ರಕ್ಷಿಸಲು ನಿಮಗೆ ಯೋಗ್ಯತೆ ಇಲ್ಲ. ಕಿಕ್‌ ಬ್ಯಾಕ್‌, ಕಮೀಷನ್‌ಗೋಸ್ಕರ ಕೆಲಸ ಮಾಡುತ್ತೀರಿ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸರಕಾರವು ಏನೋ ಹೇಳಿಕೆ ಕೊಟ್ಟು ಗಮನ ಬೇರೆಡೆ ಸೆಳೆಯುವ ಕೆಲಸ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಗೋಷ್ಠಿಯಲ್ಲಿ ಬಿಟ್‌ ಕಾಯಿನ್‌ ಕಳಕೊಂಡವರು ಯಾರೆಂದು ತಿಳಿಸುವ, ಕಂಡುಹಿಡಿಯುವ ಯೋಗ್ಯತೆ ಈ ಸರಕಾರಕ್ಕೆ ಇಲ್ಲ ಎಂದು ಕಿಡಿಕಾರಿದರು. ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್‌, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಉಪಸ್ಥಿತರಿದ್ದರು.

RELATED ARTICLES

Latest News