ನವದೆಹಲಿ,ಮೇ 10– ಭಾರತದ ಏರ್‌ಬೇಸ್, ಎಸ್- 400 ಕ್ಷಿಪಣಿ ರಕ್ಷಣಾ ವ್ಯವಸ್ಥೆ (ಎಸ್-400 ಕ್ಷಿಪಣಿ) ಸುರಕ್ಷಿತವಾಗಿದ್ದು, ಯಾವುದೇ ಹಾನಿಯಾಗಿಲ್ಲ. ಪಾಕ್ ತನ್ನ ಗಡಿಯಲ್ಲಿ ಸೇನೆಯನ್ನು ನಿಯೋಜಿಸುತ್ತಿದೆ ಎಂದು ಭಾರತ ಸರ್ಕಾರ ತಿಳಿಸಿದೆ.
ಸುದರ್ಶನ ಚಕ್ರ ಎಂದು ಕರೆಯಲ್ಪಡುವ ಎಸ್-400 ಏರ್ ಡಿಫ್ಸೆ್ ಸಿಸ್ಟಂ ಕ್ಷಿಪಣಿಗೆ ಹಾನಿಯಾಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿಗಳು ಆಧಾರ ರಹಿತ, ಸುಳ್ಳು ಸುದ್ದಿ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾ ನಿರ್ಮಿತ ಎಸ್-400 ಸಿಸ್ಟಮ್ ವಿಶ್ವದಲ್ಲೇ ಅತ್ಯಂತ ಅಡ್ವಾನ್ಸ್ ಡ್ ಸಿಸ್ಟಮ್‌ಗಳಲ್ಲಿ ಒಂದಾಗಿದ್ದು, 600 ಕಿಲೋ ಮೀಟರ್ ದೂರದವರೆಗಿನ ಗುರಿಗಳನ್ನು ಪತ್ತೆಹಚ್ಚುವ ಮತ್ತು 400 ಕಿಲೋಮೀಟರ್‌ಗಳವರೆಗಿನ ಗುರಿಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ.
ಗುರುವಾರ ರಾತ್ರಿ ಪಾಕಿಸ್ತಾನ ಆವಂತಿಪೋರಾ, ಶ್ರೀನಗರ, ಜಮು, ಪಠಾಣ್‌ಕೋಟ್, ಅಮೃತಸರ, ಲುಧಿಯಾನ ಮತ್ತು ಭುಜ್‌ನಲ್ಲಿರುವ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲು ಮುಂದಾಗಿತ್ತು. ಆದರೆ ಈ ಎಲ್ಲ ಕ್ಷಿಪಣಿಗಳನ್ನು ಎಸ್-400 ಏರ್ ಡಿಫ್ಸೆ್ ಸಿಸ್ಟಂ ಕ್ಷಣ ಮಾತ್ರದಲ್ಲೇ ಹೊಡೆದುರುಳಿಸಿತ್ತು.
ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಬೆಳಗ್ಗಿನವರೆಗೆ ನಡೆದ ಘಟನೆಯನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಪಿಐಬಿ ದೇಶದ ಜನರಲ್ಲಿ ಕ್ಷಿಪಣಿ, ಡ್ರೋನ್ ಸೇರಿ ವೈಮಾನಿಕ ದಾಳಿಗಳ ಕುರಿತು ನಿಖರವಾದ ಮಾಹಿತಿಗಳಿಗಾಗಿ ಭಾರತ ಸರ್ಕಾರದ ಅಧಿಕೃತ ಖಾತೆಗಳನ್ನು ಮಾತ್ರ ಅವಲಂಬಿಸಿ ಎಂದು ಹೇಳಿದೆ. ಜತೆಗೆ ಪರಿಶೀಲಿಸದೇ ಯಾವುದೇ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ ಮತ್ತು ಅಂತಹ ನಕಲಿ ಸುದ್ದಿಗಳನ್ನು ನಂಬಬೇಡಿ ಎಂದು ತಿಳಿಸಿದೆ.
ಯಾವುದೇ ತಪ್ಪು ಮಾಹಿತಿ ಕಂಡುಬಂದರೆ, ಅದರಲ್ಲೂ ಸಶಸ್ತ್ರ ಪಡೆ ಕುರಿತಾದ ಅಥವಾ ಸದ್ಯದ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕುರಿತಂತೆ ಸುಳ್ಳು ಮಾಹಿತಿ ಗಮನಕ್ಕೆ ಬಂದರೆ ವಾಟ್‌್ಸಆ್ಯಪ್ ಸಂಖ್ಯೆ,(+91 8799711259)ಗೆ ಇ-ಮೇಲ್ ಮೂಲಕ ಮಾಹಿತಿ ಹಂಚಿಕೊಳ್ಳಲು ಕೋರಲಾಗಿದೆ. ಭಾರತದ ವಾಯುನೆಲೆಗೆ ಯಾವುದೇ ಹಾನಿಯಾಗಿಲ್ಲ ಎನ್ನುವುದಕ್ಕೆ ಸುದ್ದಿಗೋಷ್ಠಿಯಲ್ಲಿ ಸದ್ಯ ಚಿತ್ರಗಳನ್ನು ತೋರಿಸಲಾಯಿತು. ಪಾಕಿಸ್ತಾನದ ಸೇನೆಯು ತನ್ನ ಪಡೆಗಳನ್ನು ಗಡಿ ಭಾಗಕ್ಕೆ ರವಾನಿಸಲು ಮುಂದಾಗಿದೆ.
ಪಾಕಿಸ್ತಾನವು ಉಧಂಪುರ, ಪಠಾಣ್‌ಕೋಟ್ ಮತ್ತು ಭಟಿಂಡಾದಲ್ಲಿನ ಭಾರತೀಯ ವಾಯುನೆಲೆಗಳು ಮತ್ತು ಇತರ 23 ಭಾರತೀಯ ನಗರಗಳ ಮೇಲೆ ದಾಳಿ ಮಾಡಿತ್ತು. ಕ್ಷಿಪಣಿ ಡ್ರೋನ್ ದಾಳಿಗಳನ್ನು ನಾವು ತಟಸ್ಥಗೊಳಿಸಿದ್ದೇವೆ. ಪಾಕ್ ಸೇನೆ ಭಾರತದ ನಾಗರಿಕರನ್ನು, ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ. ಪ್ರಯಾಣಿಕ ವಿಮಾನವನ್ನು ಗುರಾಣಿಯನ್ನಾಗಿ ಬಳಸಿಕೊಂಡು ಭಾರತದ ಮೇಲೆ ದಾಳಿ ನಡೆಸುತ್ತಿದೆ.