ಮಾಧ್ಯಮ ಪ್ರತಿನಿಧಿಗಳಿಗೆ ರಾಜ್ಯಮಟ್ಟದ ಚಿಂತನ-ಮಂಥನ

Spread the love

ಬೆಂಗಳೂರು,ಮಾ.1- ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ವತಿಯಿಂದ ಬೆಂಗಳೂರು ವಿಭಾಗ ಮಟ್ಟದಲ್ಲಿ ಸಮೂಹ ಮಾಧ್ಯಮ ಪ್ರತಿನಿಧಿಗಳಿಗೆ ರಾಜ್ಯಮಟ್ಟದ ಸಹಕಾರ ಜಾಗೃತಿ, ಚಿಂತನ-ಮಂಥನ ಕಾರ್ಯಕ್ರಮವನ್ನು ನಾಳೆ ಬೆಳಗ್ಗೆ 10 ಗಂಟೆಗೆ ಕೃಷಿ ತಂತ್ರಜ್ಞ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸುತ್ತಿದ್ದು, ಕನ್ಟಾಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ರಾಜೇಂದ್ರಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಹಾಮಂಡಳದ ಆಡಳಿತಾಧಿಕಾರಿ ವೈ.ಎಚ್.ಗೋಪಾಲಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಅರುಣ್‍ಕುಮಾರ್, ಕಾರ್ಯದರ್ಶಿ ಲಕ್ಷ್ಮೀಪತಯ್ಯ, ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಕೆ.ವಿಜಯಕುಮಾರ್, ಉಪಾಧ್ಯಕ್ಷ ಎಸ್.ಲಕ್ಷ್ಮಿನಾರಾಯಣ್ ಪಾಲ್ಗೊಳ್ಳುವರು. ಬೆಳಗ್ಗೆ 9ರಿಂದ 9.30ರವರಗೆ ಉಪಹಾರ, 11.45ರಿಂದ 12ಕ್ಕೆ ಚಹಾ ವಿರಾಮ ಹಾಗೂ 2ರಿಂದ 3ರವರಗೆ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಳಗ್ಗೆ 10.40ರಿಂದ 11.45ರವರೆಗೆ ಕೊರೊನಾ ನಂತರದ ಸಮಯದಲ್ಲಿ ಪತ್ರಕರ್ತರ ಸ್ಥಿತಿಗತಿಗಳ ಕುರಿತು ಚರ್ಚೆ ನಡೆಯಲಿದ್ದು, ಪ್ರಾಧ್ಯಾಪಕ ಎ.ನಾರಾಯಣ್ ಅವರು ಉಪನ್ಯಾಸ ನೀಡುವರು. 12ರಿಂದ 1.30ರವರೆಗೆ ನಡೆಯುವ ಚರ್ಚೆಯಲ್ಲಿ ಎ.ಸಿ.ದಿವಾಕರ್ ಅವರಿಂದ ಸಹಕಾರ ವಲಯದಲ್ಲಿ ಉದ್ಯೋಗ ಅವಕಾಶ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ.

1.30ರಿಂದ 2 ಗಂಟವರೆಗೆ ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶರಣಬಸಪ್ಪ ಕಾಟ್ರಳ್ಳಿ ಅವರಿಂದ ಸಹಕಾರಾಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಕೊಡುಗೆ-ಸಾಧನೆ- ಮುಂದಿನ ಯೋಜನೆಗಳ ಚರ್ಚೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಮಹಾಮಂಡಳ ಮನವಿ ಮಾಡಿದೆ.