ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಯುಐ ಸಿನಿಮಾ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಎಲ್ಲಾ ವಿಭಾಗದಿಂದಲೂ ಗಮನಸೆಳೆಯುತ್ತಿರುವ ಈ ಚಿತ್ರದಲ್ಲಿ ವಯಸ್ಸಿಗೂ ಮೀರಿದ ಪಾತ್ರದಲ್ಲಿ ಮೇದಿನಿ ಕೆಳಮನೆ ಮಿಂಚಿದ್ದಾರೆ. ಹೀರೋ ತಾಯಿಯಾಗಿ ಸವಾಲಿನ ಪಾತ್ರವನ್ನು ಸೊಗಸಾಗಿ ನಿಭಾಯಿಸಿ ಸಿನಿರಸಿಕರಿಂದ ಸೈ ಎನಿಸಿಕೊಂಡಿದ್ದಾರೆ.
ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಪದವಿ ಪಡೆದಿರುವ ಮೇದಿನಿ ಮೂಲತಃ ಹೆಗ್ಗೋಡಿನವರು. ಕಲೆ ಮತ್ತು ಸಂಸ್ಕೃತಿಯ ವಾತಾವರಣದಲ್ಲಿ ಬೆಳೆದಿದ್ದರಿಂದ ಬಾಲ್ಯದಿಂದಲೇ ನಾಟಕ-ಸಿನಿಮಾದ ಬಗ್ಗೆ ಆಸಕ್ತಿ ಹೊಂದಿದ್ದರು. ಪದವಿಯ ಅವಧಿಯಲ್ಲಿಯೂ ಹಾಗೂ ನಂತರವೂ, ಅನುರಾಧಾ ಕಪೂರ್, ಅಭಿಲಾಷ್ ಪಿಳ್ಳೈ ಮತ್ತು ಒವ್ಲ್ಯಕುಲಿ ಕೊಜಾಕುಲಿ ಮೊದಲಾದ ಪ್ರಖ್ಯಾತ ನಿರ್ದೇಶಕರು ಮತ್ತು ನಾಟಕಕಾರರೊಂದಿಗೆ ವಿವಿಧ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪದವಿಯ ನಂತರ ದೆಹಲಿ ಹಾಗೂ ಮುಂಬೈಯಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ, ಅವರು ಪ್ರಾಯೋಗಿಕ ನಾಟಕಗಳಲ್ಲಿ, ಕಿರುಚಿತ್ರ, ಟಿವಿ ಜಾಹೀರಾತುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೇದಿನಿ, ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ ಸಹೋದರನೊಂದಿಗೆ ‘ದಾಳಿ’ ಮತ್ತು ‘ಮುಕ್ತ’ ಎಂಬ ಎರಡು ಕನ್ನಡ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ದಾಳಿ ಚಿತ್ರಕ್ಕೆ 2017ರ ಪ್ರಖ್ಯಾತ ಟೋಟೋ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಶೈಲಜಾ ಪಡಿಂದಳ ನಿರ್ದೇಶಿಸಿರುವ ‘ನಾನು ಲೇಡೀಸ್’ ಚಿತ್ರದ ಮೂಲಕ ಅವರು ತಮ್ಮ ಸಿನಿಮಾ ಜರ್ನಿ ಶುರು ಮಾಡಿದರು. ಇದರಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಇಬ್ಬರು ಹುಡುಗಿಯರ ನಡುವಿನ ಪ್ರೀತಿಯ ಕಥೆಯನ್ನು ವಿವರಿಸುವ ಮೊದಲ ಕನ್ನಡ ಲೆಸ್ಬಿಯನ್ ಸಿನಿಮಾ.
ನಟೇಶ್ ಹೆಗ್ಡೆ ನಿರ್ದೇಶನದ, ರಿಷಭ್ ಶೆಟ್ಟಿ ಫಿಲ್ಮ್ಸ್ ನಿರ್ಮಿಸಿ ‘ಪೆಡ್ರೊ’ ಎಂಬ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಗಿದೆ ಮತ್ತು ವಿಶ್ವಾದ್ಯಂತ ವಿವಿಧ ಪ್ರಶಸ್ತಿಗಳನ್ನು ಮತ್ತು ಮೆಚ್ಚುಗೆಗಳನ್ನು ಪಡೆದಿದೆ. ಕನ್ನಡ ಮಾತ್ರವಲ್ಲ ಬಾಲಿವುಡ್ ಅಂಗಳದಲ್ಲಿಯೂ ಮೇದಿನಿ ಮೋಡಿ ಮಾಡಿದ್ದಾರೆ.
ಅನುರಾಗ್ ಕಶ್ಯಪ್ ನಿರ್ದೇಶಿಸಿರುವ ‘ದೋಬಾರಾ’ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ಮೇದಿನಿ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದ್ದಾರೆ. ಅವರ ಪ್ರಸ್ತುತ ಹಿಂದಿ ಚಿತ್ರ ಹಂಸಲ್ ಮೆಹ್ತಾ ನಿರ್ದೇಶನದ ‘ಗಾಂಧಿ – ಬಿಫೋರ್ ಇಂಡಿಯಾ’ ವೆಬ್ ಸೀರಿಸ್ ಆಗಿದ್ದು, 2025ರ ಅಂತ್ಯದಲ್ಲಿ ಬಿಡುಗಡೆಗೊಳ್ಳಲಿದೆ. ವಿನಯ್ ರಾಜಕುಮಾರ್ ಅಭಿನಯದ ಮತ್ತು ಶ್ರೀಲೇಶ್ ಎಸ್. ನಾಯರ್ ನಿರ್ದೇಶಿಸಿದ ‘ಪೆಪೆ’ ಸಿನಿಮಾದಲ್ಲಿ ಮೇದಿನಿ ‘ಪ್ರಭಾ’ ಪಾತ್ರವು ವಿಶೇಷವಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ‘ಬಿಟಿಎಸ್’ ಎಂಬ ಅಂತೋಲಜಿಯಲ್ಲಿ ಚಿತ್ರದಲ್ಲಿಯೂ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಡಿಸೆಂಬರ್ 20ರಂದು ಬಿಡುಗಡೆಯಾಗಲಿರುವ ‘ಯುಐ’ ಚಿತ್ರದಲ್ಲೂ ಅವರು ಹೀರೋ ತಾಯಿ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮೇದಿನಿ ಕೆಳಮನೆಯವರು, ಈಗಾಗಲೇ ರೂಢಿಗತವಾಗಿಲ್ಲದ ಪಾತ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುವುದರ ಮೂಲಕ ನಟನೆಯಲ್ಲಿ ತನ್ನದೇ ಆದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಅವರು ಅಭಿನಯಿಸುವ ಪಾತ್ರಗಳೆಲ್ಲವೂ ಸಂಕೀರ್ಣವಾಗಿರುತ್ತವೆ. ಅವರು ಪಾತ್ರಗಳು ಆಯ್ಕೆಯಲ್ಲಿ ಯಾವುದೇ ಸಾಮಾಜಿಕ ಕಟ್ಟುಪಾಡುಗಳಿಗೆ ಅಂಟಿಕೊಳ್ಳದೆ, ಆ ಪಾತ್ರವು ಪ್ರೇಕ್ಷಕರ ಮೇಲೆ ಬೀರುವ ಪರಿಣಾಮದ ಕಡೆಗೆ ಗಮನವನ್ನು ಕೇಂದ್ರೀಕರಿಸುತ್ತಾರೆ.
UI ಸಿನೆಮಾದಲ್ಲಿನ ಅವರ ಪಾತ್ರ ಮತ್ತು ಪಾತ್ರ ಚಿತ್ರಣ ಬೇರೆಯದೇ ರೀತಿಯಲ್ಲಿದೆ. ಚಿತ್ರೀಕರಣ ಸಂದರ್ಭದಲ್ಲಿ ಉಪೇಂದ್ರ ಅವರೇ ‘ನಟನೆಯಲ್ಲಿನ ಅವರ ಬದ್ಧತೆ ಮತ್ತು ಕೌಶಲ್ಯವನ್ನು ಗಮನಿಸಿಯೇ ನಾನು ಅವರನ್ನು ಆಯ್ಕೆ ಮಾಡಿದ್ದು’ ಎಂದು ಉದ್ಘರಿಸಿದ್ದು ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. UI ದಲ್ಲಿನ ಅವರ ಪಾತ್ರವನ್ನು ಆಳವಾಗಿ ಬಗೆಯುತ್ತಾ ಹೋದಂತೆ ಅದು ಒಂದು ರೂಪಕದಂತೆ ಕಾಣುತ್ತದೆ. ಈ ಸಿನೆಮಾದಲ್ಲಿ ಅವರು ಬೇರೆ ಬೇರೆ ವಯೋಮಾನದಲ್ಲಿ ಹಾಗೂ ಬೇರೆ ಬೇರೆ ಲುಕ್ ಗೆಟ್ ಅಪ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು, ತಮಗೆ ನೀಡಲಾದ ಪಾತ್ರವನ್ನು ಸಾಧಿಸಲು ಅವರು ಯಾವ ಮಟ್ಟಕ್ಕೂ ಹೋಗಿ ಅದಕ್ಕೆ ಬೇಕಾದ ಪರಿಶ್ರಮ ಪಡುತ್ತಾರೆ ಎಂಬುದನ್ನು ಸಾಬೀತು ಪಡಿಸುತ್ತದೆ