ಬೆಂಗಳೂರು,ಜು.16- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಬೆಂಗಳೂರಿನ ಶಾಸಕರ ಜೊತೆ ಜು.27ರಂದು ಸಭೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ, ಅಧಿವೇಶನ ಮುಗಿದ ಮರುದಿನವೇ ವೈಟ್ಯಾಪಿಂಗ್, ರಸ್ತೆಗುಂಡಿ ಮುಚ್ಚುವುದು ಮೊದಲಾದ ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ಚರ್ಚೆ ಮಾಡಿ ನಿರ್ಧಾರ ಮಾಡೋಣ, ಕಸ ವಿಲೇವಾರಿ, ಸಂಚಾರ ದಟ್ಟಣೆ, ಬೀದಿ ದೀಪ ನಿರ್ವಹಣೆ, ತೆರಿಗೆ ಸಂಗ್ರಹ, ಹಸರೀಕರಣ, ಕುಡಿಯುವ ನೀರು ಮೊದಲಾದ ವಿಚಾರಗಳ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡೋಣ. ಶಾಸಕರು ಹೇಳಿದಂತೆ ವಿವಿಧ ಇಲಾಖೆಗಳ ನಡುವೆ ಸಮನ್ವಯ ಇಲ್ಲ. ತಾವು ಉಸ್ತುವಾರಿ ವಹಿಸಿದ ನಂತರ ಒಂದು ಹಂತಕ್ಕೆ ಬಂದಿದೆ ಎಂದು ಹೇಳಿದರು.
ವೈಟ್ಯಾಪಿಂಗ್ ಕಾಮಗಾರಿ, ರಸ್ತೆಗಳ ನಿರ್ಮಾಣ ಮತ್ತು ಹಗಲೀಕರಣ, ಸುರಂಗ ಮಾರ್ಗ, ಮೆಟ್ರೊ ರೋಡ್ ಫ್ಲೈಓವರ್ ಸೇರಿದಂತೆ ವಿವಿಧ ಕಾಮಗಾರಿಗಳಿಗೆ 3450 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರದಿಂದ ನಿಗದಪಡಿಸಲಾಗಿದೆ. ಇದರಲ್ಲಿ ಬಿಬಿಎಂಪಿ ವತಿಯಿಂದ ಪ್ರಸಕ್ತ ಸಾಲಿನಲ್ಲಿ 1790 ಕೋಟಿ ರೂ. ರಾಜ್ಯ ಸರ್ಕಾರದಿಂದ 1660 ಕೋಟಿ ರೂ. ಒದಗಿಸಲಾಗಿದೆ ಎಂದು ತಿಳಿಸಿದರು.
ಏ.1ರಿಂದ ಜೂ.30ರವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 16,202 ರಸ್ತೆಗುಂಡಿಗಳನ್ನು ಗುರುತಿಸಿದ್ದು, ಈ ಪೈಕಿ 15,686 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. 516 ರಸ್ತೆ ಗುಂಡಿಗಳು ಬಾಕಿ ಇವೆ. ರಸ್ತೆ ಗುಂಡಿಗಳನ್ನು ದುರಸ್ತಿಪಡಿಸಲು ಬಿಬಿಎಂಪಿ ಬ್ಯಾಚ್ ಮಿಕ್ಸ್ ಸ ಘಟಕವನ್ನು ಸ್ಥಾಪಿಸಲಾಗಿದ್ದು, ಪ್ರತಿ ವಾರ್ಡ್ 15 ಲಕ್ಷ ರೂ. ಅನುದಾನವನ್ನು ಗುಂಡಿ ಮುಚ್ಚಲು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಮಳೆಗಾಲದಲ್ಲಿಯೂ ರಸ್ತೆಗುಂಡಿ ಮುಚ್ಚಲು ತಂಪಾದ ಡಾಂಬರು ಮಿಶ್ರಣ ತಯಾರಿಸುವ ಘಟಕವನ್ನು ಸ್ಥಾಪಿಸಲಾಗಿದೆ. ಬಿಡಬ್ಲುಎಸ್‌ಎಸ್‌ಬಿ ಸೇರಿದಂತೆ ಇತರೆ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಲಾಗಿದ್ದು, ರಸ್ತೆ ಅಗೆಯುವುದನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗಿದೆ. ರಸ್ತೆ ಗುಂಡಿಗಳನ್ನು ಗುರುತಿಸಲು ಮತ್ತು ನಿಗಾವಹಿಸಲು ರಸ್ತೆಗುಂಡಿ ಗಮನ ಎಂಬ ನೂತನ ಮೊಬೈಲ್ ಆಪ್‌ನ್ನು ಸೃಜಿಸಲು ಉದ್ದೇಶಿಸಲಾಗಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ರಾಮಮೂರ್ತಿ, ಬ್ರಾಂಡ್ ಬೆಂಗಳೂರು, ಗ್ರೇಟರ್ ಬೆಂಗಳೂರು ಎಂದು ಹೇಳುತ್ತೀರಿ. ಬೆಂಗಳೂರನ್ನು 5 ಭಾಗ ಮಾಡುವುದಾಗಿ ಹೇಳುತ್ತೀರಿ. ಈ ಪರಿಕಲ್ಪನೆ ಅರ್ಥವಾಗುತ್ತಿಲ್ಲ. ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಟ್ಟಿಲ್ಲ. ಕೇವಲ 516 ರಸ್ತೆ ಗುಂಡಿಗಳು ಬಾಕಿ ಉಳಿದಿರುವುದಾಗಿ ಹೇಳುತ್ತೀರಿ, ಯಾವ ರಸ್ತೆಯಲ್ಲಿ ಗುಂಡಿಗಳಿಲ್ಲ ಹೇಳಿ ಎಂದು ಆಗ್ರಹಿಸಿದರು.
ಇದಕ್ಕೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಎಲ್ಲಾ ರಸ್ತೆಗಳು ಗುಂಡಿಗಳಾಗಿವೆ. ಮಳೆಯಿಂದ ಹೆಚ್ಚು ಗುಂಡಿಗಳಾಗುತ್ತಿವೆ. ಗುಂಡಿ ಮುಚ್ಚಿರುವುದರ ಗುಣಮಟ್ಟವೂ ಸರಿಯಿಲ್ಲ. ಕಳೆದ 15 ವರ್ಷದಲ್ಲಿ ಯಾವ ಯಾವ ಕ್ಷೇತ್ರಕ್ಕೆ ಎಷ್ಟೇಷ್ಟು ಅನುದಾನ ನೀಡಲಾಗಿದೆ ಎಂಬ ಮಾಹಿತಿಯ ಶ್ವೇತಪತ್ರ ಹೊರಡಿಸಿ, ಬಿಜೆಪಿ 16 ಶಾಸಕರು ಬೆಂಗಳೂರಿನಲ್ಲಿದ್ದಾರೆ. ಎಲ್ಲಾ ಕ್ಷೇತ್ರದ ಅಭಿವೃದ್ಧಿಗೂ ಅನುದಾನ ಕೊಡಿ ಎಂದು ಒತ್ತಾಯಿಸಿದರು.
ಬಿಜೆಪಿ ಶಾಸಕ ಎಸ್.ಸುರೇಶ್‌ಕುಮಾರ್ ಮಾತನಾಡಿ, ಬ್ರಾಂಡ್ ಬೆಂಗಳೂರು ಮಾಡಲು ಹೊರಟಿದ್ದೀರಿ. ವಿವಿಧ ಇಲಾಖೆಗಳ ನಡುವೆ ಸಮನ್ವಯ ಇಲ್ಲ. ಬೆಂಗಳೂರು ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ರಚನೆ ಮಾಡಿ, ವಿಧಾನಸಭಾ ಕ್ಷೇತ್ರ ಮಟ್ಟದಲ್ಲೂ ಒಂದು ಟಾಸ್ಕ್‌ಫೋರ್ಸ್ ರಚನೆ ಮಾಡಿ ಎಂದು ಸಲಹೆ ಮಾಡಿದರು.