Tuesday, February 25, 2025
Homeರಾಜ್ಯಎಂಇಎಸ್‌ನ ಪುಂಡರು ಶಿಸ್ತಿನ ಪಾಠ ಕಲಿಸಬೇಕಾಗುತ್ತೆ ಹುಷಾರ್ : ತಂಗಡಗಿ ಎಚ್ಚರಿಕೆ

ಎಂಇಎಸ್‌ನ ಪುಂಡರು ಶಿಸ್ತಿನ ಪಾಠ ಕಲಿಸಬೇಕಾಗುತ್ತೆ ಹುಷಾರ್ : ತಂಗಡಗಿ ಎಚ್ಚರಿಕೆ

MES Goons will have to be taught a lesson: Thangadgi warns

ಬೆಂಗಳೂರು,ಫೆ.25- ಎಂಇಎಸ್‌ನ ಪುಂಡರು ತಮ್ಮ ಧೋರಣೆಯನ್ನು ಮುಂದುವರೆಸಿದರೆ ಶಿಸ್ತಿನ ಪಾಠ ಕಲಿಸಬೇಕಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದ್ದಾರೆ.

ಘಟನೆಯ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ್‌ರ್ರವರ ಜೊತೆ ನಾವು ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಮುಂದೆಯೂ ಕನ್ನಡದ ತಂಟೆಗೆ ಬಂದರೆ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೆಲವೇ ಕೆಲವು ಪುಂಡರು ನಾಡಿನ ಗಾಳಿ, ನೀರು, ಅನ್ನ ಸೇವಿಸಿದ ನಂತರವೂ ಕನ್ನಡದ ವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸುತ್ತಿರುವುದು ಖಂಡನೀಯ. ಇದನ್ನು ಸಹಿಸಲು ಸಾಧ್ಯವಿಲ್ಲ. ಈಗಾಗಲೇ ನೇರವಾದ ಎಚ್ಚರಿಕೆ ನೀಡಲಾಗಿದೆ. ಆದರೂ ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ಸುಗಳಿಗೆ ಮಸಿ ಬಳಿಯುವುದು, ಚಾಲಕ-ನಿರ್ವಾಹಕರ ಮೇಲೆ ಹಲ್ಲೆ ಮಾಡುವುದು ಮುಂದುವರೆದಿದೆ. ದುಷ್ಕರ್ಮಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ ಎಂದರು.

ಕನ್ನಡಿಗರು ಯಾವುದೇ ಭಾಷೆಯ ದ್ವೇಷಿಗಳಲ್ಲ. ಆದರೆ ತಂಟೆಕೋರರ ವಿರುದ್ದ ತಿರುಗಿಬಿದ್ದರೆ ಮರಾಠಿಗರು ನಿಲ್ಲಲಾಗುವುದಿಲ್ಲ. ಹೀಗಾಗಿ ಎಚ್ಚರಿಕೆಯಿಂದ ಇರಬೇಕು. ಈ ವಿಚಾರ ಬಂದರೆ ಬೆಳಗಾವಿಯ ನಾಯಕರೂ ಕೂಡ ಗಟ್ಟಿಯ ಧ್ವನಿಯಲ್ಲೇ ಮಾತನಾಡುತ್ತಾರೆ. ಇದರಲ್ಲಿ ಯಾವುದೇ ತಾರತಮ್ಯವಿಲ್ಲ ಎಂದು ಹೇಳಿದರು.

ಕರ್ನಾಟಕಕ್ಕೆ ತೊಂದರೆಯಾಗುತ್ತಿದೆ. ಮರಾಠಿಗರ ಜಾಗದಲ್ಲೇ ನಿಂತು ನಾವು ಉತ್ತರ ಕೊಡುತ್ತೇವೆ. ನಮಗೆ ಯಾವುದೇ ಹೆದರಿಕೆ ಇಲ್ಲ. ಕರ್ನಾಟಕದ ನಿರ್ವಾಹಕ ಮರಾಠಿ ಭಾಷೆ ಏಕೆ ಮಾತನಾಡಬೇಕು, ಆತನ ಭಾಷೆ ಕನ್ನಡ. ಅದರಲ್ಲೇ ಮಾತನಾಡುತ್ತಾರೆ. ಅದನ್ನು ವಿರೋಧಿಸುವುದನ್ನು ಸಹಿಸಲಾಗುವುದಿಲ್ಲ ಎಂದರು.

ಎಂಇಎಸ್‌ನವರು ಕರಾಳ ದಿನ ಆಚರಿಸಲು ಹಿಂದೆಯೂ ಬಿಟ್ಟಿಲ್ಲ, ಮುಂದೆಯೂ ಬಿಡುವುದಿಲ್ಲ. ಇದೇ ವಾತಾವರಣ ಮುಂದುವರೆದರೆ ತಕ್ಕ ಪಾಠ ಕಲಿಸುತ್ತೇವೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದಲ್ಲಿ ಇದೇ ರೀತಿಯ ತನಿಖೆ ಮಾಡಿ ಎಂದು ಜಾರಿ ನಿರ್ದೇಶನಾಲಯ ಲೋಕಾಯುಕ್ತದ ಮೇಲೆ ಒತ್ತಡ ಹೇರುತ್ತಿರುವುದು ಸರಿಯಲ್ಲ. ಮತ್ತೊಂದು ಸಂಸ್ಥೆ ತನಿಖೆಯ ಮೇಲೆ ಪ್ರಭಾವ ಬೀರುವುದು ಅನಗತ್ಯ. ಲೋಕಾಯುಕ್ತ ಸಮರ್ಥವಾಗಿದೆ. ಮುಖ್ಯಮಂತ್ರಿಯವರನ್ನೇ ವಿಚಾರಣೆ ನಡೆಸಿದೆ. ನನಗೆ ಆ ಸಂಸ್ಥೆ ಮೇಲೆ ನಂಬಿಕೆ ಇದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಚುನಾವಣೆ ಮೊದಲು ನಾವು ಹೇಳಿದಂತೆ ನಡೆದುಕೊಂಡಿದ್ದೇವೆ. ಪುನರ್ ಪರಿಶೀಲನೆ ಎಂದಾದರೆ ಅದನ್ನು ಮುಖ್ಯಮಂತ್ರಿಯವರೇ ನಿರ್ಧರಿಸಬೇಕು. ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News