Saturday, January 25, 2025
Homeರಾಜ್ಯನಿಯಮ ಬಾಹಿರ ವಸೂಲಾತಿ ಮಾಡದಂತೆ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಕಟ್ಟಪ್ಪಣೆ

ನಿಯಮ ಬಾಹಿರ ವಸೂಲಾತಿ ಮಾಡದಂತೆ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಕಟ್ಟಪ್ಪಣೆ

Microfinance companies ordered not to take illegal recovery measures

ಬೆಂಗಳೂರು,ಜ.24- ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಾತಿಗೆ ನಿಯಮಬಾಹಿರ ಕ್ರಮಗಳನ್ನು ಕೈಗೊಳ್ಳದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕಟ್ಟಪ್ಪಣೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿ ನಲ್ಲಿ ಸಾಲ ವಸೂಲಾತಿಗೆ ಹಾಗೂ ಸಾಲ ಕೊಟ್ಟವರ ರಕ್ಷಣೆಗೆ ಸ್ಪಷ್ಟ ನಿಯಮಾವಳಿಗಳಿವೆ. ಆದರೆ ಅವು ಸಾಲುತ್ತಿಲ್ಲ ಎಂಬ ಟೀಕೆಗಳು ಇವೆ. ಇದರ ಬಗ್ಗೆ ಕಾನೂನಿನ ತಿದ್ದುಪಡಿಯ ಪರಿಶೀಲನೆ ನಡೆ ಸಲಾಗುವುದು ಎಂದರು.

ಸಾಲ ಕೊಡುವಾಗ ಹಲವಾರು ಕಡೆ ಸಹಿ ಮಾಡಲಾಗಿರುತ್ತದೆ. ಅಷ್ಟು ಸಹಿಗಳನ್ನು ಏಕೆ ಮಾಡಲಾಗಿದೆ ಎಂದು ಸಾಲ ತೆಗೆದುಕೊಳ್ಳುವವರಿಗೆ ತಿಳಿದಿರುವುದಿಲ್ಲ. ಸಾಲ ಕೊಡುವವರು ಕೆಲವು ಆಸ್ತಿಗಳನ್ನು ಅಡಮಾನ ಮಾಡಿಕೊಂಡಿರುತ್ತಾರೆ. ಅದರಮೇಲೆ ಮನೆಗಳ ಮೇಲೆ ದಾಳಿ ಹಾಗೂ ಜಪ್ತಿ ಮಾಡುವುದು ಮುಂತಾದ ಕ್ರಮಗಳನ್ನು ಕೈಗೊಳ್ಳುತ್ತಾರೆ. ಇದಕ್ಕೆ ಕಾನೂನು ಮೂಲಕವೇ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಅದಕ್ಕಾಗಿ ಈಗಾಗಲೇ ಕಾನೂನು ಸಚಿವರು ಅಗತ್ಯ ತಿದ್ದುಪಡಿಗೆ ಮುಂದಾಗಿದ್ದಾರೆ ಎಂದರು.

ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ನಿಂದ ಕಿರುಕುಳವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳಂತೂ ಬಂದಿವೆ. ಈ ನಿಟ್ಟಿನಲ್ಲಿ ಚರ್ಚೆ ನಡೆಸಲು ಮುಖ್ಯಮಂತ್ರಿಯವರು ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಯಾವ ರೀತಿಯ ಪ್ರಕರಣಗಳು ದಾಖಲಾಗಿವೆ, ಎಷ್ಟು ಕಿರುಕುಳ ಪ್ರಕರಣಗಳಿವೆ, ಕಾನೂನು ಬದಲಾವಣೆ ಯಾವ ರೀತಿ ಆಗಬೇಕು ಎಂಬ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲನವಿ ಸಲ್ಲಿಸಲಾಗಿದೆ. ನ್ಯಾಯಾಲಯ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡುತ್ತೇವೆ ಎಂದು ಇದೇ ವೇಳೆ ಅವರು ತಿಳಿಸಿದರು.

ಪೊಲೀಸರು ತಮ್ಮ ಕೆಲಸವನ್ನು ತಾವು ಮಾಡಿದ್ದಾರೆ. ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದರು. ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಶ್ರೀರಾಮುಲು ಅವರನ್ನು ಕಾಂಗ್ರೆಸ್ಗೆ ಕರೆತರುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಪಕ್ಷದಲ್ಲೇ ಇರುವ ಸತೀಶ್ ಜಾರಕಿಹೊಳಿ ಅವರನ್ನು ಮೂಲೆಗುಂಪು ಮಾಡಲು ಶ್ರೀರಾಮುಲು ಅವರನ್ನು ಕಾಂಗ್ರೆಸ್ಗೆ ಸೆಳೆಯುವ ಯತ್ನ ನಡೆಯುತ್ತಿದೆ ಎಂಬ ಆರೋಪದ ಬಗ್ಗೆಯೂ ತಮಗೆ ಮಾಹಿತಿ ಇಲ್ಲ ಎಂದು ಹೇಳಿದರು.

RELATED ARTICLES

Latest News