Tuesday, July 2, 2024
Homeರಾಜ್ಯಹಾಲಿನ ದರ ಪ್ರತಿ ಲೀಟರ್‌ಗೆ 2ರೂ. ಹೆಚ್ಚಳ, ನಾಳೆಯಿಂದಲೇ ಹೊಸ ದರ ಜಾರಿ

ಹಾಲಿನ ದರ ಪ್ರತಿ ಲೀಟರ್‌ಗೆ 2ರೂ. ಹೆಚ್ಚಳ, ನಾಳೆಯಿಂದಲೇ ಹೊಸ ದರ ಜಾರಿ

ಬೆಂಗಳೂರು, ಜೂ.25- ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಬೆನ್ನಲ್ಲೇ ದಿನನಿತ್ಯ ಬಳಕೆಯ ನಂದಿನಿ ಹಾಲಿನ ದರ ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ನಾಳೆಯಿಂದ ತಟ್ಟಲಿದೆ.ನಂದಿನಿ ಹಾಲಿನ ಅರ್ಧ ಮತ್ತು ಒಂದು ಲೀಟರ್‌ ಹಾಲಿನ ಪ್ಯಾಕೆಟ್‌ನಲ್ಲಿ 50 ಮಿಲಿ ಹೆಚ್ಚುವರಿ ಹಾಲನ್ನು ಸೇರಿಸಿದ್ದು, ಪ್ರತಿ ಲೀಟರ್‌ಗೆ 2ರೂ.ನಂತೆ ನಾಳೆಯಿಂದ ಹೆಚ್ಚಳ ಮಾಡಿರುವುದಾಗಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ಅಧ್ಯಕ್ಷ ಭೀಮಾನಾಯಕ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಧ ಲೀಟರ್‌ ಹಾಲಿನ ಪ್ಯಾಕೆಟ್‌ ಜತೆಗೆ 50 ಮಿಲಿ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿದ್ದು, ಹೆಚ್ಚುವರಿ ನೀಡಲಾಗುವ ಹಾಲಿಗೆ ತಗಲುವ ವೆಚ್ಚವನ್ನು ಮಾತ್ರ ಹೆಚ್ಚಳ ಮಾಡಲಾಗಿದೆಯೇ ಹೊರತು ಹಾಲಿನ ದರದಲ್ಲಿ ಏರಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿ ಅರ್ಧ ಲೀಟರ್‌ ಹಾಲಿನ ಪ್ಯಾಕೆಟ್‌ ದರವನ್ನು 2ರೂ. ಹೆಚ್ಚಳ ಮಾಡಲಾಗಿದೆ. ಇದರಿಂದ ಗ್ರಾಹಕರಿಗೂ ಹೆಚ್ಚುವರಿ ಹಾಲು ದೊರೆತಂತಾಗಿದೆ ಎಂದು ಸಮರ್ಥಿಸಿಕೊಂಡರು. ಪ್ರತಿ ಅರ್ಧ ಲೀಟರ್‌ ಟೋನ್ಡ್ ಹಾಲಿನ ದರ 22 ರಿಂದ 24ರೂ., ಒಂದು ಲೀಟರ್‌ ಹಾಲಿನ ದರ 42 ರಿಂದ 44ರೂ., ಹೋಮೋಜಿನೈಸ್ಡ್‌ ಟೋನ್ಡ್ ಹಾಲಿನ ದರ ಅರ್ಧ ಲೀಟರ್‌ಗೆ 22 ರಿಂದ 44ರೂ., ಒಂದು ಲೀಟರ್‌ಗೆ 43ರೂ. ನಿಂದ 45ರೂ., ಹೋಮೋಜಿನೈಸ್ಡ್‌ ಹಸುವಿನ ಹಾಲು ಅರ್ಧ ಲೀಟರ್‌ಗೆ 24ರೂ. ನಿಂದ 26ರೂ., ಒಂದು ಲೀಟರ್‌ಗೆ 46ರೂ. ನಿಂದ 48ರೂ., ಸ್ಪೆಷಲ್‌ ಹಾಲು ಅರ್ಧ ಲೀಟರ್‌ಗೆ 25ರೂ. ನಿಂದ 27ರೂ., ಒಂದು ಲೀಟರ್‌ಗೆ 48ರೂ. ನಿಂದ 50ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದರು.

ಸಮೃದ್ಧಿ ಹಾಲು ಅರ್ಧ ಲೀಟರ್‌ಗೆ 26ರೂ. ನಿಂದ 28ರೂ., ಒಂದು ಲೀಟರ್‌ಗೆ 51ರೂ. ನಿಂದ 53ರೂ., ಹೋಮೋಜಿನೈಸ್ಡ್‌ ಶುಭಂ ಹಾಲು ಅರ್ಧ ಲೀಟರ್‌ಗೆ 25ರೂ. ನಿಂದ 27ರೂ., ಒಂದು ಲೀಟರ್‌ಗೆ 49ರೂ. ನಿಂದ 51ರೂ., ಸಂತೃಪ್ತಿ ಹಾಲು ಅರ್ಧ ಲೀಟರ್‌ಗೆ 28ರೂ. ನಿಂದ 30ರೂ., ಒಂದು ಲೀಟರ್‌ಗೆ 55ರೂ. ನಿಂದ 57ರೂ., ಶುಭಂ ಟೋನ್ಡ್ ಹಾಲು ಅರ್ಧ ಲೀಟರ್‌ಗೆ 26ರೂ.ನಿಂದ 28ರೂ., ಒಂದು ಲೀಟರ್‌ಗೆ 49ರೂ. ನಿಂದ 51ರೂ., ಡಬಲ್‌ ಟೋನ್‌್ಡ ಹಾಲು ಅರ್ಧ ಲೀಟರ್‌ಗೆ 21ರೂ. ನಿಂದ 23ರೂ., ಒಂದು ಲೀಟರ್‌ಗೆ 41ರೂ. ನಿಂದ 43ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.

ಹೆಚ್ಚಳ ಮಾಡಿರುವ ದರವು ನಾಳೆಯಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ. ಒಕ್ಕೂಟಗಳಲ್ಲಿ ಹಳೆಯ ದರ ಮುದ್ರಿತವಾಗಿರುವ ಹಾಲಿನ ಪ್ಯಾಕೆಟ್‌ಗಳ ದಾಸ್ತಾನು ಮುಗಿಯುವವರೆಗೂ ಹಳೆಯ ದರದಲ್ಲಿ ಮುದ್ರಿತ ಹಾಲಿನ ಪ್ಯಾಕೆಟ್‌ಗಳು ಸರಬರಾಜಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಅವರು ಕೋರಿದ್ದಾರೆ.

ಪರಿಷ್ಕೃತ ದರವು ಒಂದು ಲೀಟರ್‌ಗೆ 44ರೂ. 10 ಪೈಸೆಯಾಗಲಿದೆ. ಗ್ರಾಹಕರ ಹಿತದೃಷ್ಟಿಯಿಂದ 44ರೂ.ಗೆ ಮಾರಾಟ ಮಾಡಲಾಗುವುದು. ಆದರೆ, ಮೊಸರು ಹಾಗೂ ಇತರೆ ನಂದಿನಿ ಉತ್ಪನ್ನಗಳ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಹೊರರಾಜ್ಯಗಳ ಹಾಲಿನ ದರಕ್ಕೆ ಹೋಲಿಸಿದರೆ ನಮ ರಾಜ್ಯದ ಹಾಲಿನ ದರವು ಕಡಿಮೆಯಿದೆ ಎಂದು ಅವರು ತಿಳಿಸಿದರು.

ಸುಗ್ಗಿ ಕಾಲವಾಗಿರುವುದರಿಂದ ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಹಾಲಿನ ಶೇಖರಣೆ ಹೆಚ್ಚಾಗುತ್ತಿದೆ. 98, 87,000ದಷ್ಟು ಹಾಲನ್ನು ಶೇಖರಣೆ ಮಾಡುತ್ತಿದ್ದೇವೆ. ಸದ್ಯದಲ್ಲೇ ಹಾಲಿನ ಶೇಖರಣೆ ಪ್ರಮಾಣ ಒಂದು ಕೋಟಿ ಲೀಟರ್‌ ತಲುಪಲಿದೆ. ಹಾಲು ಉತ್ಪಾದನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 28 ಲಕ್ಷ ರೈತರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಸುಮಾರು 30 ಲಕ್ಷ ಲೀಟರ್‌ ಹಾಲನ್ನು ಪೌಡರ್‌ ಉತ್ಪಾದಿಸಲು ಕಳುಹಿಸುತ್ತಿದ್ದೇವೆ. ಇದರಿಂದ ಹಾಲು ಒಕ್ಕೂಟಗಳು ಹಾಲು ಉತ್ಪಾದಕರಿಗೆ ಸಕಾಲಕ್ಕೆ ಹಣ ಪಾವತಿ ಮಾಡಲು ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು ಪ್ರತಿ ಲೀಟರ್‌ ಹಾಲಿನ ದರವನ್ನು 42ರೂ.ನಿಂದ 44ರೂ.ಗೆ ಹೆಚ್ಚಳ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್‌, ಮಂಡಳಿ ನಿರ್ದೇಶಕರಾದ ವೀರಭದ್ರಬಾಬು ಬರಮಣ್ಣನವರ್‌, ಮಾರುಕಟ್ಟೆ ನಿರ್ದೇಶಕ ರಘುನಂದನ್‌ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News