ಬೆಳಗಾವಿ,ಡಿ.6- ಸದನದ ಸದಸ್ಯರು ಸಮ್ಮತಿಸಿದರೆ ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಹಾಲಿನ ಮಾರಾಟ ದರವನ್ನು ಹೆಚ್ಚಳ ಮಾಡಲು ಸರ್ಕಾರ ಸಿದ್ಧವಿದೆ ಎಂದು ಪಶುಸಂಗೋಪನ ಸಚಿವ ಕೆ.ವೆಂಕಟೇಶ್ ವಿಧಾನಪರಿಷತ್‍ಗೆ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಕೆ.ಹರೀಶ್‍ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಲಿನ ಮಾರಾಟ ದರವನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದೆ. ಇದರಿಂದ ರೈತರಿಗೆ ಅನುಕೂಲವಾಗುವುದಾದರೆ ಖಂಡಿತವಾಗಿಯೂ ನಮ್ಮ ಸರ್ಕಾರ ಸಿದ್ಧವಿದೆ. ಆದರೆ ಅದಕ್ಕೂ ಮುನ್ನ ಸದನ ಸದಸ್ಯರ ಒಪ್ಪಿಗೆ ಅಗತ್ಯ ಎಂದು ಮನವಿ ಮಾಡಿದರು.
ಕರ್ನಾಟಕ ಹಾಲು ಮಹಾಮಂಡಳಿಯು ಪಶು ಆಹಾರ ಉತ್ಪಾದನೆಗೆ ಅವಶ್ಯಕವಿರುವ ಕಚ್ಚಾ ಪದಾರ್ಥಗಳ ವೆಚ್ಚದ ಮೇಲೆ ಪಶು ಆಹಾರದ ದರವನ್ನು ಹೆಚ್ಚಳ ಮಾಡಿದೆ. ಒಂದು ಮೆಟ್ರಿಕ್ ಟನ್‍ಗೆ ಒಂದು ಸಾವಿರ ರೂ.ಗಳಾದರೆ, ಒಂದು ಕೆಜಿಗೆ 1 ರೂ. ಹೆಚ್ಚಳವಾಗಿದೆ. ಇದಕ್ಕೆ ಬಳಸುವ ಕಚ್ಚಾ ಪದಾರ್ಥಗಳ ದರ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ದರವನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದರು.
ಮತ್ತೆ ಅಮೆರಿಕ ಅಧ್ಯಕ್ಷನಾದರೆ ಸರ್ವಾಧಿಕಾರಿಯಾಗಿ ಬದಲಾಗುವುದಿಲ್ಲ : ಟ್ರಂಪ್
ಆಗ ವೆಂಕಟೇಶ್ ಅವರು ಸಭಾಪತಿ ಹೊರಟ್ಟಿ ಅವರತ್ತ, ನೀವು ಕೂಡ ಹಸುಗಳನ್ನು ಸಾಕಿದ್ದೀರಿ, ಪಶು ಆಹಾರದ ಕಚ್ಚಾ ಬೆಲೆ ಎಷ್ಟು ಹೆಚ್ಚಾಗಿದೆ ಎಂಬುದು ನಿಮಗೂ ಗೊತ್ತು ಎಂದಾಗ, ಆಗ ಹೊರಟ್ಟಿಯವರು, ಒಂದು ಮೆಟ್ರಿಕ್ ಟನ್‍ಗೆ ಒಂದು ಸಾವಿರ ರೂ. ಮಾಡಿದ್ದೀರಲ್ಲವೇ? ಎಂದು ಪ್ರಶ್ನೆ ಹಾಕಿದರು.
ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣಕನ್ನಡದಲ್ಲಿ ಪ್ರತಿ ಲೀಟರ್ ಹಾಲಿಗೆ 40ರೂ. 85 ಪೈಸೆ ಕೊಡುತ್ತೇವೆ. ಇದಕ್ಕೆ ಬೆಂಬಲ ಬೆಲೆ ಸಿಗುವುದರಿಂದ ಇದು ಇನ್ನಷ್ಟು ಹೆಚ್ಚಾಗುತ್ತದೆ. ಆದರೆ ಮೈಸೂರು, ಕೊಡುಗು ಬೇರೆ ಬೇರೆ ಭಾಗಗಳಲ್ಲಿ ಇದರ ದರ ಕಡಿಮೆ ಇದೆ ಎಂದು ಮಾಹಿತಿ ನೀಡಿದರು.