ಬೆಂಗಳೂರು,ಸೆ.11- ಮಿನಿ ಲಾರಿಯೊಂದು ನಿಯಂತ್ರಣ ತಪ್ಪಿ ಬೇಕರಿಗೆ ನುಗ್ಗಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದಂತಾಗಿದೆ.ಇಂದು ಬೆಳಗಿನ ಜಾವ 4.30 ರ ಸುಮಾರಿನಲ್ಲಿ ಮಲ್ಲೇಶ್ವರಂನ ಲಿಂಕ್ ರಸ್ತೆ ಮೂಲಕ ಮಿನಿ ಲಾರಿ ತೆರಳುತ್ತಿದ್ದಾಗ ಅತೀ ವೇಗದಿಂದಾಗಿ ನಿಯಂತ್ರಣ ತಪ್ಪಿ ಪುಟ್‌ಪಾತ್ ಮೇಲೆ ಸಂಚರಿಸಿ ಬೇಕರಿಗೆ ನುಗ್ಗಿದೆ.
ಇದರಿಂದಾಗಿ ಬೇಕರಿಯ ಬಾಗಿಲು ಜಖಂಗೊಂಡು ಗೋಡೆ ಹಾನಿಯಾಗಿದ್ದು, ಪುಟ್‌ಪಾತ್ ಕಾಂಕ್ರಿಟ್ ಕುಸಿದಿದೆ.ಆ ಸಮಯದಲ್ಲಿ ಬೇಕರಿಗೆ ಬೀಗ ಹಾಕಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಒಂದು ವೇಳೆ ಬೆಳಗ್ಗೆ ಈ ಘಟನೆ ನಡೆದಿದ್ದರೆ ಭಾರೀ ದುರಂತ ಸಂಭವಿಸುವ ಸಾಧ್ಯತೆ ಇತ್ತು. ಸುದ್ದಿ ತಿಳಿದು ಮಲ್ಲೇಶ್ವರಂ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಸ್ಥಳಕ್ಕೆ ಕ್ರೇನ್ ತರಿಸಿಕೊಂಡು ವಾಹನವನ್ನು ತೆರವುಗೊಳಿಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿ ದ್ದಾರೆ.