ಬೆಂಗಳೂರು,ಆ.5- ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಯವರು ರಾಜಕೀಯಕ್ಕೆ ಬರುವ ಮುನ್ನ ಸಂಪಾದಿಸಿದ್ದ ಆಸ್ತಿಯ ಮಾಹಿತಿಯನ್ನು ಬಹಿರಂಗಪಡಿಸಬೇಕು ಮತ್ತು ಆಸ್ತಿ ಸಂಪಾದನೆಯ ವಿಚಾರವಾಗಿ ಪರಸ್ಪರ ಕೆಸರೆರಚಾಟವನ್ನು ನಿಲ್ಲಿಸಲಿ ಎಂದು ಕೃಷಿ ಸಚಿವ ಚೆಲವರಾಯಸ್ವಾಮಿ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚಲನಚಿತ್ರರಂಗದಲ್ಲಿರುವವರು ದೊಡ್ಡ ದೊಡ್ಡ ನಟರು, ನಿರ್ಮಾಪಕರು ಏನಾಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಸಿನಿಮಾರಂಗದಲ್ಲಿರುವ ಎಲ್ಲರೂ ಆರ್ಥಿಕವಾಗಿ ಸಂತೃಪ್ತಿ ಹೊಂದಿಲ್ಲ, ಬಲಿಷ್ಠರಾಗಿಲ್ಲ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಉತ್ತಮ ಸ್ಥಿತಿಯಲ್ಲಿದ್ದಾರೆ.
ಉಳಿದೆರಲ್ಲರೂ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಸಿನಿಮಾರಂಗ ಅಷ್ಟು ಸುಲಭ ಅಲ್ಲ. ಅದರಿಂದಲೇ ದುಡ್ಡು ಮಾಡಿದರೆ ಅಂದಿನನ ಲೆಕ್ಕ ತೋರಿಸಲಿ ಎಂದು ಸವಾಲು ಹಾಕಿದರು.
ದೇವೇಗೌಡರು ಮುಖ್ಯಮಂತ್ರಿಯಾಗುವ ಮೊದಲೇ ಕುಮಾರಸ್ವಾಮಿ ಸಿನಿಮಾರಂಗದಲ್ಲಿದ್ದರು. ಅಂದು ಇವರ ಆಸ್ತಿ ಎಷ್ಟಿತ್ತು ಎಂಬುದನ್ನು ತೋರಿಸಲಿ ಎಂದು ಪುನರುಚ್ಚರಿಸಿದ ಚೆಲುವರಾಯಸ್ವಾಮಿ ಅವರು ಕುಮಾರಸ್ವಾಮಿ ಕೆಸರೆರಚಾಟವನ್ನು ನಿಲ್ಲಿಸಬೇಕು. ಡಿ.ಕೆ.ಶಿವಕುಮಾರ್ರವರು ಆರೋಪವನ್ನು ಮುಂದುವರೆಸ ಬೇಕೆಂದು ನಾನು ಹೇಳುವುದಿಲ್ಲ. ಸಮಾಜದ ಬಹಳಷ್ಟು ಮಂದಿ ದೂರವಾಣಿ ಕರೆ ಮಾಡಿ ಇದನ್ನು ಮುಂದುವರೆಸುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ.
ಡಿಕೆಶಿ ರಾಜಕೀಯಕ್ಕೆ ಬರುವ ಮೊದಲೇ ವ್ಯಾಪಾರ ನಡೆಸುತ್ತಿದ್ದರು. ಕುಮಾರಸ್ವಾಮಿ ಯಾವ ವ್ಯಾಪಾರ ಮಾಡುತ್ತಿದ್ದರು. ಆದಾಯದ ಮೂಲ ಇಲ್ಲವೇ?, ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಆಸ್ತಿ ಗಳಿಸಲು ಹೇಗೆ ಸಾಧ್ಯ ಎಂಬ ಬಗ್ಗೆ ಮಾಹಿತಿ ನೀಡಬೇಕಿದೆ ಎಂದರು.
ಆರೋಪ-ಪ್ರತ್ಯಾರೋಪಗಳಲ್ಲಿ ಡಿ.ಕೆ.ಶಿವಕುಮಾರ್ರವರದು ತಪ್ಪಿಲ್ಲ. ಕುಮಾರಸ್ವಾಮಿ ಟೀಕೆ ಮಾಡುವುದಕ್ಕೆ ಡಿಕೆಶಿ ಉತ್ತರ ನೀಡುವಂತಾಗಿದೆ. ಅವರಿಗೆ ಕೇಂದ್ರ ಸಂಪುಟದಲ್ಲಿ ಒಳ್ಳೆಯ ಜವಾಬ್ದಾರಿ ಇದೆ. ಅದನ್ನು ಬಳಸಿಕೊಂಡು ರಾಜ್ಯಕ್ಕೆ ಉತ್ತಮ ಕೆಲಸ ಮಾಡುವ ನಿಟ್ಟಿನತ್ತ ಗಮನ ಹರಿಸಲಿ. ಅದನ್ನು ಬಿಟ್ಟು ಈ ರೀತಿ ಕೆಸರೆರಚಾಟದಲ್ಲಿ ಭಾಗವಹಿಸುವುದು ಸರಿಯಲ್ಲ ಎಂದು ಸಲಹೆ ನೀಡಿದರು.
ವಾಲೀಕಿ ಹಾಗೂ ಮುಡಾದಂತಹ ಆರೋಪಗಳನ್ನು ಸಮರ್ಥವಾಗಿ ಎದುರಿಸಬೇಕು ಹಾಗೂ ಬಿಜೆಪಿ-ಜೆಡಿಎಸ್ನ ಹಗರಣವನ್ನು ಜನರ ಮುಂದಿಡಬೇಕು ಎಂದು ನಿನ್ನೆ ನಡೆದ ಸಚಿವರ ಸಭೆಯಲ್ಲಿ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೂಚನೆ ನೀಡಿದ್ದಾರೆ.
ಬಿಜೆಪಿಯ ಆರೋಪಗಳಿಗೆ ಎದುರೇಟು ನೀಡುವಂತೆ ಉತ್ತಮ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಇದರಲ್ಲಿ ದುರ್ಬಲರು, ಸಬಲರು ಎಂದು ಯಾರನ್ನೂ ಗುರುತಿಸಿಲ್ಲ ಎಂದರು.ಸಚಿವರ ಸಾಧನೆಗಳು ಮತ್ತಷ್ಟು ಉತ್ತಮವಾಗಲಿ ಎಂದು ಹೇಳಿರುವುದರಲ್ಲಿ ತಪ್ಪಿಲ್ಲ. ನಿಗದಿತವಾಗಿ ಇಂತಹುದೇ ಸಚಿವರ ಖಾತೆಯಲ್ಲಿ ಕಳಪೆ ಸಾಧನೆಯಾಗಿದೆ ಎಂದು ಯಾರಿಗೂ ಹೇಳಿಲ್ಲ. ಸಚಿವ ಸಂಪುಟದ ಪುನರ್ರಚನೆಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾವೇರಿ ನದಿಪಾತ್ರದ ಕೆಆರ್ಎಸ್ನಿಂದ ಸ್ಥಳೀಯ ರೈತರಿಗೆ ಜು.10 ರಿಂದ ನೀರು ಹರಿಸಲಾಗುತ್ತಿದೆ. ಈವರೆಗೂ ನೀರು ನಿಲ್ಲಿಸಿಲ್ಲ. ಅಣೆಕಟ್ಟೆಯ ಜಲ ಸಂಗ್ರಹದಲ್ಲಿ ಬಳಸಿಕೊಳ್ಳಬಹುದಾದ ನೀರಿನ ಪ್ರಮಾಣ ನಿಗದಿಯಾಗಿದೆ.
ಈಗ ಜಾಸ್ತಿ ನೀರು ಹರಿಸಿರುವುದನ್ನು ತೋರಿಸಿದರೆ ಮುಂದೆ 2ನೇ ಬೆಳೆಗೆ ನೀರು ಬಳಸಿಕೊಳ್ಳಲು ಸಮಸ್ಯೆಯಾಗುತ್ತದೆ. ಹಾಗಾಗಿ ನೀರಿನ ಬಳಕೆಯ ಪ್ರಮಾಣವನ್ನು ದಾಖಲೆ ಪತ್ರಗಳಲ್ಲಿ ಕಡಿಮೆ ತೋರಿಸಲಾಗುತ್ತಿದೆ. ರೈತರಿಗೆ ನೀರು ಹರಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದರು. ಕಬ್ಬು ಹಾಗೂ ಭತ್ತ ನಾಟಿ ಹಾಕಲು ಎರಡನೇ ಬೆಳೆಗೂ ಸಾಕಷ್ಟು ನೀರು ಪೂರೈಸಲಾಗುವುದು. ರೈತರು ಈ ವಿಚಾರದಲ್ಲಿ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಚೆಲುವರಾಯಸ್ವಾಮಿ ಇದೇ ವೇಳೆ ಸ್ಪಷ್ಟಪಡಿಸಿದರು.
ಮಳೆ ಹಾನಿಯಿಂದ ರಾಜ್ಯಕ್ಕೆ ಸಾಕಷ್ಟು ಹಾನಿಯಾಗಿದೆ. ಕೇಂದ್ರ ಸಚಿವರು ಹಣ ಬಿಡುಗಡೆ ಮಾಡಿಸಲಿ. ಅದು ಅಭಿನಂದನಾರ್ಹವಾಗುತ್ತದೆ. ರಾಜ್ಯದಿಂದ ಪ್ರಹ್ಲಾದ್ ಜೋಶಿ, ನಿರ್ಮಲಾ ಸೀತಾರಾಮನ್, ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಂಪುಟ ಸಚಿವರಾಗಿದ್ದಾರೆ. ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ರಾಜ್ಯ ಸಚಿವರಾಗಿದ್ದಾರೆ. ಇವರು ಕುಳಿತು ಚರ್ಚೆ ಮಾಡಿ ಅಧಿಕಾರಿಗಳ ತಂಡ ಕಳುಹಿಸಿ ವರದಿ ಪಡೆದು 2 ದಿನದಲ್ಲೇ ಹಣ ಬಿಡುಗಡೆ ಮಾಡಿಸಲಿ. ಅದನ್ನು ಬಿಟ್ಟು ಚೆಲುವರಾಯಸ್ವಾಮಿಗಿಂತಲೂ ಮೊದಲೇ ನಾನು ಸ್ಥಳ ಪರಿಶೀಲನೆ ಮಾಡಿದ್ದೇನೆ ಎಂದು ಹೇಳಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದರು.