ಬೆಂಗಳೂರು, ಡಿ.6- ಆರೋಗ್ಯ ಕ್ಷೇತ್ರದಲ್ಲಿ ಪೂರೈಕೆಯಾಗುವ ಔಷಧಿ ಹಾಗೂ ವೈದ್ಯಕೀಯ ಸಲಕರಣೆಗಳ ಗುಣಮಟ್ಟ ಪರೀಕ್ಷೆ ನಡೆಸುವ ಪ್ರಯೋಗಾಲಯಗಳ ವ್ಯವಸ್ಥೆ, ತಯಾರಿಕಾ ಕಂಪೆನಿಗಳ ಪರವಾಗಿಯೇ ವರ್ತಿಸುತ್ತಿದ್ದು, ಈ ರೀತಿಯ ಧೋರಣೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ಅಗತ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಜಿಲ್ಲಾಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವುಗಳ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಸಚಿವರು, ನೈಜ್ಯ ಕಾರಣಗಳಿಗಾಗಿ ಸಾವುಗಳಾದರೆ ಅದನ್ನು ಸಹಿಸಿಕೊಳ್ಳಬಹುದು. ಆದರೆ ಆರೋಗ್ಯವಂತ ಜನ ಕಳಪೆ ಔಷಧಿಗಳಿಗಾಗಿ ಜೀವ ಕಳೆದುಕೊಳ್ಳುವುದನ್ನು ಸಹಿಸಿಕೊಳ್ಳಬಾರದು ಎಂದಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿನ ಬಾಣಂತಿಯರ ಸಾವುಗಳಿಂದ ಸರ್ಕಾರ ಉತ್ತರ ನೀಡಲಾಗದ ಸ್ಥಿತಿಯಲ್ಲಿದೆ. ಜನರ ಆಕ್ರೋಶ ಹೆಚ್ಚಾಗಿದೆ. ಹೆಚ್ಚಾಗಬೇಕು ಕೂಡ. ಇಂತಹ ತಪ್ಪುಗಳನ್ನು ಸಹಿಷ್ಣತೆಯಿಂದ ನೋಡಲೇಬಾರದು. ಔಷಧ ಗುಣಮಟ್ಟ ಪರೀಕ್ಷೆ ನಡೆಸು ಪ್ರಯೋಗಾಲಯಗಳು ಖಾಸಗಿ ಕಂಪೆನಿಗಳ ಪರವಾಗಿಯೇ ಕೆಲಸ ಮಾಡುತ್ತಿವೆ.
ಅವು ರಾಜ್ಯ ಸರ್ಕಾರದ್ದಾಗಲಿ, ಕೇಂದ್ರ ಸರ್ಕಾರದ್ದಾಗಲಿ ಔಷಧಿ ಉತ್ಪಾದನಾ ಕಂಪೆನಿಯಗಳಿಗೆ ಅನುಕೂಲವಾಗುಂತೆ ವರ್ತಿಸುತ್ತಿವೆ. ಇದರಿಂದ ಗುಣಮಟ್ಟ ಪಾಲನೆ ಮಾಡುವುದು ಕಷ್ಟ ಸಾಧ್ಯವಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತ ಪಡಿಸಿದರು.
ರಾಜ್ಯ ಸರ್ಕಾರದ ಪ್ರಯೋಗಾಲಯಗಳು ಪರೀಕ್ಷೆ ನಡೆಸಿ ಗುಣಮಟ್ಟ ಸರಿ ಇಲ್ಲ ಎಂದು ವರದಿ ನೀಡಿದರೆ, ಕೇಂದ್ರ ಸರ್ಕಾರದ ಪ್ರಯೋಗಾಲಯಗಳು ಗುಣಮಟ್ಟ ಸರಿ ಇದೆ ಎಂದು ದೃಢೀಕರಿಸುತ್ತವೆ ಎಂದು ಆಕ್ರೋಶ ವ್ಯಕ್ತ ಪಡಿಸಿದ ಸಚಿವರು, ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮಕ್ಕೆ ಈ ಹಿಂದೆ ಪಶ್ಚಿಮ ಬಂಗಾಳದ ಕಂಪೆನಿ ಪೂರೈಸಿದ್ದ ಔಷಧಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಗುಣಮಟ್ಟದ ಕೊರತೆ ಕಂಡು ಬಂದಿತ್ತು.
ಆಗ ಆ ಕಂಪೆನಿಯನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಲಾಗಿತ್ತು. ರಾಜ್ಯ ಸರ್ಕಾರದ ಕ್ರಮಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಸದರಿ ಕಂಪೆನಿ, ಕೇಂದ್ರ ಪ್ರಯೋಗಾಲಯದಲ್ಲಿ ತನ್ನ ಔಷಧಿಯನ್ನು ಪರೀಕ್ಷೆ ಒಳಪಡಿಸಿ ಉತ್ತಮ ಗುಣಮಟ್ಟ ಹೊಂದಿದೆ ಎಂದು ವರದಿ ಪಡೆದುಕೊಂಡು ಬಂದಿದೆ. ನಂತರ ರಿಂಗರ್ ಲ್ಯಾಕ್ಟೇಟ್ ಸಲ್ಯೂಷನ್ ಐವಿ ದ್ರಾವಣವನ್ನು ಪೂರೈಸಿದೆಎಂದು ಸಚಿವರು ಆರೋಪಿಸಿದರು. ಕೇಂದ್ರ ಸರ್ಕಾರದ ಪ್ರಯೋಗಾಲಯಗಳ ವರದಿಗಳು ಈ ರೀತಿ ವ್ಯತಿರಿಕ್ತವಾಗುತ್ತಿರುವುದೇಕೆ ಎಂದು ಪತ್ರ ಬರೆಯಲಾಗಿದೆ ಎಂದರು.
ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮಕ್ಕೆ ವರ್ಗಾವಣೆಗೊಳ್ಳುವ ವ್ಯವಸ್ಥಾಪಕ ನಿರ್ದೇಶಕರು ಆರೇಳು ತಿಂಗಳ ಮೇಲೆ ಕೆಲಸ ಮಾಡುತ್ತಿಲ್ಲ. ಇನ್ನೂ ಮುಂದೆ ಒಳ್ಳೆಯ ಅಧಿಕಾರಿಯನ್ನು ಅಲ್ಲಿಗೆ ನಿಯೋಜಿಸಿ ವ್ಯವಸ್ಥೆಯನ್ನು ಸರಿಪಡಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ದ್ರಾವಣ ಪೂರೈಸಿದ ಕಂಪೆನಿಯ ವಿರುದ್ಧ ಅಭಿಯೋಜನೆ ಜಾರಿ ಮಾಡುವ ಮುನ್ನಾ ಅದರ ಉತ್ಪಾದನಾ ಘಟಕದ ವ್ಯವಸ್ಥೆಯನ್ನು ಪರಿಶೀಲನೆ ನಡೆಸಬೇಕಿದೆ.
ಅದಕ್ಕಾಗಿ ನಮ ಅಧಿಕಾರಿಗಳ ತಂಡ ಅಲ್ಲಿಗೆ ಭೇಟಿ ನೀಡಿದೆ. ಬಳ್ಳಾರಿಯಲ್ಲಿನ ಸಾವುಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ಔಷಧ ನಿಯಂತ್ರಕರನ್ನು ಅಮಾನತುಗೊಳಿಸಲಾಗಿದೆ, ವೈದ್ಯಕೀಯ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ವಿಚಾರಣೆಗೆ ಆದೇಶಿಸಲಾಗಿದೆ ಎಂದರು.
ಪ್ರಕರಣದಲ್ಲಿ ನನ್ನ ತಪ್ಪಿದ್ದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಇಲ್ಲಿ ಪ್ರತಿಷ್ಠೆಯಿಲ್ಲ. ಜನರ ಜೀವದ ಪ್ರಶ್ನೆಯಿದೆ. ನನ್ನ ರಾಜೀನಾಮೆಯಿಂದ ಸರಿ ಹೋಗುವುದಾದರೆ ಅದಕ್ಕೂ ನಾನು ಸಿದ್ಧ. ಈವರೆಗೂ ದೇಶಾದ್ಯಂತ ಇಂತಹ ಅನೇಕ ಪ್ರಕರಣಗಳಾಗಿವೆ. ಯಾರಿಗೂ ಶಿಕ್ಷೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.