ಬೆಂಗಳೂರು, ಮೇ.7- ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನ ಯಾವುದೇ ಕ್ರಮಗಳನ್ನು ಕೈಗೊಂಡರೂ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಸೇನೆಯ ದಿಟ್ಟ ಕ್ರಮವಾಗಿದೆ. ಇದು ಅನಿವಾರ್ಯವಾಗಿತ್ತು ಎಂದರು. ಪಾಕಿಸ್ತಾನದ ಬೆಂಬಲಿತರು ಮಾಡಿದ್ದನ್ನೆಲ್ಲಾ ಸಹಿಸಲಾಗುವುದಿಲ್ಲ. ಕೇಂದ್ರ ಸರ್ಕಾರ ಮತ್ತು ಸೇನೆಯ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನವೂ ಪ್ರತಿ ದಾಳಿ ಮಾಡಬಹುದು. ಇದಕ್ಕೆ ನಾವು ಸಜ್ಜುಗೊಳ್ಳಬೇಕು. ಇಂತಹ ಅನೇಕ ದಾಳಿಗಳನ್ನು ನಾವು ಮಾಡಿದ್ದೇವೆ. ಪಾಕಿಸ್ತಾನ ಇನ್ನೂ ಬುದ್ದಿ ಕಲಿತಿಲ್ಲ. ಆಪರೇಷನ್ ಸಿಂಧೂರ್ ಯಶಸ್ವಿಯಾಗಲಿ. ಯುದ್ಧ ಆಗಬಾರದು. ಅದರ ಅನಿವಾರ್ಯವಾದರೆ ಸ್ವಾಭಿಮಾನದ ಪ್ರಶ್ನೆ ಎದುರಾದರೆ ಯುದ್ದ ನಡೆಯಬೇಕಾಗುತ್ತದೆ. ಅಮಾಯಕರನ್ನು ಕಗ್ಗೋಲೆ ಮಾಡಿದ್ದಕ್ಕೆ ಇಂತಹ ಕ್ರಮಗಳು ಅನಿವಾರ್ಯ ಎಂದು ಹೇಳಿದರು.