ಬೆಂಗಳೂರು, ನ.11- ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವಾದರೂ ಹಲವು ರಾಜ್ಯಗಳ ರಾಜ್ಯಪಾಲರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೊಸ್ಟ್ ಮಾಡಿರುವ ಅವರು, ಪಂಜಾಬ್ ರಾಜ್ಯಪಾಲರ ನಡೆಯ ವಿರುದ್ಧ ಸುಪ್ರೀಂ ಕೋರ್ಟ್ ಅತ್ಯಂತ ಕಟುವಾದ ಭಾಷೆಯಲ್ಲಿ ಎಚ್ಚರಿಕೆ ನೀಡಿದೆ.
ಬೆಂಕಿಯ ಜೊತೆ ಆಟ ಬೇಡ ಎಂಬ ಸುಪ್ರೀಂ ಅಭಿಪ್ರಾಯ ಕೇವಲ ರಾಜ್ಯಪಾಲರಿಗೆ ಕೊಟ್ಟ ಎಚ್ಚರಿಕೆಯಲ್ಲ. ಬದಲಿಗೆ ರಾಜ್ಯಪಾಲರ ಮೂಲಕ ಒಕ್ಕೂಟ ವ್ಯವಸ್ಥೆಯ ಆಶಯವನ್ನೇ ಹಾಳು ಮಾಡಲು ಹೊರಟಿರುವ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಕೊಟ್ಟಿರುವ ಎಚ್ಚರಿಕೆಯೂ ಹೌದು ಎಂದಿದ್ದಾರೆ.
ರಾಷ್ಟ್ರಪತಿಗಳ ಮೂಲಕ ರಾಜ್ಯಗಳಿಗೆ ನೇಮಕವಾಗುವ ರಾಜ್ಯಪಾಲರು ಸಾಂವಿಧಾನಿಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಬೇಕು. ವಿಪರ್ಯಾಸವೆಂದರೆ ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರಾಗಿ ನಿಯುಕ್ತರಾಗಿರುವ ಕೆಲವು ರಾಜ್ಯಪಾಲರು ಬಿಜೆಪಿಯ ಏಜೆಂಟ್ಗಳಾಗಿದ್ದಾರೆ. ಅವೇಶನದಲ್ಲಿ ಅಂಗೀಕಾರವಾದ ಮಸೂದೆಗಳನ್ನು ಅನಗತ್ಯವಾಗಿ ತಡೆ ಹಿಡಿಯುವುದು, ಬಿಕ್ಕಟ್ಟು ಸೃಷ್ಟಿಸುವುದು ಸಾಮಾನ್ಯವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕದ ಬೆನ್ನಲ್ಲೇ ಬದಲಾದ ಕಾಂಗ್ರೆಸ್ ತಂತ್ರಗಾರಿಕೆ
ರಾಜ್ಯಪಾಲರ ನಡೆಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಎಚ್ಚರಿಕೆ ಗಂಭೀರವಾಗಿದೆ. ಪಂಜಾಬ್, ಕೇರಳ, ತಮಿಳುನಾಡು ರಾಜ್ಯಪಾಲರು ಕೇಂದ್ರದ ಮರ್ಜಿಗೆ ಬಿದ್ದು ಪಕ್ಷಪಾತವಾಗಿ ನಡೆದುಕೊಳ್ಳದೆ, ಸಂವಿಧಾನದ ಘನತೆ ಎತ್ತಿ ಹಿಡಿದಿದ್ದರೆ ಸುಪ್ರೀಂ ಇಷ್ಟು ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿರಲಿಲ್ಲ. ಸುಪ್ರೀಂ ಕೋರ್ಟ್ನ ಎಚ್ಚರಿಕೆಯ ಹಿನ್ನೆಲೆಯಲ್ಲಿ ಅವರೆಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ಈ ವಿಷಯದಲ್ಲಿ ನಮ್ಮ ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಲ್ಹೋಟ್ ಅವರು ನಿಶ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರ ಸರಳ ಸಜ್ಜನಿಕೆ ನಡವಳಿಕೆಯಿಂದ ಎಲ್ಲರ ವಿಶ್ವಾಸ ಗಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ದಿನೇಶ್ ಗುಂಡೂರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.