ಬೆಂಗಳೂರು, ಫೆ.15- ಕಾಡಿನಂಚಿನ ಗ್ರಾಮಗಳಿಗೆ ನುಗ್ಗಿ ಜೀವಹಾನಿ, ಬೆಳೆ ಹಾನಿ ಮಾಡುವ ಆನೆಗಳ ಸಂಚಾರದ ಬಗ್ಗೆ ನಿಗಾ ಇಟ್ಟು, ಸಕಾಲಿಕ (ರಿಯಲ್ ಟೈಮ್) ಮಾಹಿತಿಯನ್ನು ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪಂಚಾಯಿತಿಗಳ ಅಧ್ಯಕ್ಷರು, ಕಾರ್ಯದರ್ಶಿ, ಪಿಡಿಒ ಮತ್ತು ಗ್ರಾಮದ ಮುಖ್ಯಸ್ಥರಿಗೆ ನೀಡುವ ಮೂಲಕ ಜೀವಹಾನಿ ತಡೆಯುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಫೆ.13ರಂದು ರಾಜ್ಯದಲ್ಲಿ ಒಂದೇ ದಿನ ಆನೆ ದಾಳಿಯಿಂದ ಮೂರು ಅಮೂಲ್ಯ ಜೀವಗಳ ಹಾನಿ ಆಗಿರುವ ಹಿನ್ನೆಲೆಯಲ್ಲಿ ಇಂದು ಎಲ್ಲ ಜಿಲ್ಲೆಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ತುರ್ತು ವರ್ಚುವಲ್ ಸಭೆ ನಡೆಸಿದ ಅವರು, ಆನೆ ಹಾವಳಿ ನಿಯಂತ್ರಿಸಲು ಎಲ್ಲ ಸಾಧ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಪ್ರಸ್ತುತ ದೇಶೀಯವಾಗಿ ಅಭಿವೃದ್ಧಿಪಡಿಸಿದ ರೇಡಿಯೋ ಕಾಲರ್ ಕೂಡ ಲಭ್ಯವಿದ್ದು, ಗುಂಪಿನಲ್ಲಿರುವ ಆನೆಗಳಿಗೆ ರೇಡಿಯೋ ಕಾರ್ಲ ಅಳವಡಿಸಿ, ಥರ್ಮಲ್ ಕ್ಯಾಮೆರಾ ಬಳಸಿ ಆನೆಗಳ ಚಲನವಲನದ ಬಗ್ಗೆ ನಿಗಾ ಇಟ್ಟು, ಮಾಹಿತಿಯನ್ನು ಬಲ್ ಎಸ್.ಎಂ.ಎಸ್. ಮೂಲಕ ಸಕಾಲಿಕವಾಗಿ ನೀಡುವ ವ್ಯವಸ್ಥೆ ಮಾಡುವಂತೆ ತಿಳಿಸಿದರು.
2022-23ರ ಸಾಲಿನಲ್ಲಿ ರಾಜ್ಯದಲ್ಲಿ ಆನೆಯಿಂದ 32 ಜನರು ಸಾವಿಗೀಡಾಗಿದ್ದರೆ, 2023-24ರಲ್ಲಿ 48 ಸಾವು ಸಂಭವಿಸಿದೆ. ಈ ವರ್ಷ ಇಲ್ಲಿಯವರೆಗೆ 30 ಜೀವಹಾನಿ ಆಗಿದೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ಹಾಗೂ ಜುಲೈನಲ್ಲಿ ಹೆಚ್ಚಿನ ಸಾವು ಸಂಭವಿಸುತ್ತಿದೆ ಇದಕ್ಕೆ ಕಾರಣವೇನು ಎಂಬ ಬಗ್ಗೆ ಅಧ್ಯಯನ ನಡೆಸಿ ಎಂದು ತಿಳಿಸಿದರು.
ಆವಾಸಸ್ಥಾನ ಅಭಿವೃದ್ಧಿಗೆ ಸೂಚನೆ:
ಆನೆಗಳು ನೀರು ಮತ್ತು ಆಹಾರ ಅರಸಿ ಊರಿಗೆ ಬರುತ್ತಿದ್ದು, ಕಾಡಿನಲ್ಲೇ ಆನೆಗಳಿಗೆ ಆಹಾರ ಲಭಿಸುವಂತೆ ಮಾಡಲು ಮತ್ತು ಸ್ಥಳೀಯರಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸುವಂತೆ ತಿಳಿಸಿದರು. ಗ್ರಾಮಸ್ಥರು ಮತ್ತು ಅರಣ್ಯ ಸಿಬ್ಬಂದಿಯ ನಡುವೆ ಡಿಜಿಟಲ್ ಸಂಪರ್ಕ ವೃದ್ಧಿಸಲು ಸೂಚಿಸಿದ ಸಚಿವರು, ಆನೆಗಳು ಊರಿನ ಬಳಿ ಕಾಣಿಸಿಕೊಂಡಾಗ ತ್ವರಿತವಾಗಿ ಸ್ಪಂದಿಸುವಂತೆ ತಿಳಿಸಿದರು.
ವಿರಾಜಪೇಟೆಯ ಪುಂಡಾನೆ ಸೆರೆಗೆ ತಂಡ ಕಳಿಸಲು ಸೂಚನೆ:
ವಿರಾಜ ಪೇಟೆಯಲ್ಲಿ ಪುಂಡಾನೆ ಪದೆ ಪದೆ ಜನರ ಮೇಲೆ ದಾಳಿ ಮಾಡುತ್ತಿದ್ದು, ಇಂತಹ ಆನೆಗಳಿಗೆ ಅರವಳಿಕೆ ನೀಡಿ ಸೆರೆ ಹಿಡಿಯಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ರೈಲ್ವೆ ಬ್ಯಾರಿಕೇಡ್ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ:
ಆನೆಗಳ ಉಪಟಳ ಹೆಚ್ಚಿರುವ ಪ್ರದೇಶಗಳಲ್ಲಿ ತ್ವರಿತವಾಗಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸುವಂತೆ ಸೂಚಿಸಿದ ಸಚಿವರು. ಟೆಂಟಕಲ್ ಫೆನ್ಸಿಂಗ್, ಆನೆ ಕಂದಕ ಮತ್ತು ಸೌರಬೇಲಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುವಂತೆ ನೋಡಿಕೊಳ್ಳಲು ತಿಳಿಸಿದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಲ್ಗಡೆ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಾಶ್ವತಿ ಮಿಶ್ರ, ಮನೋಜ್ ರಾಜನ್, ಪಿ.ಸಿ. ರೇ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.