Friday, July 18, 2025
Homeರಾಜ್ಯಸುಪ್ರೀಂಗೆ ಡಿನೋಟಿಫಿಕೇಷನ್ ಅರ್ಜಿ ಸಲ್ಲಿಸಿದ್ದ IAS-IFS ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಚಿವ ಖಂಡ್ರೆ ಶಿಫಾರಸು

ಸುಪ್ರೀಂಗೆ ಡಿನೋಟಿಫಿಕೇಷನ್ ಅರ್ಜಿ ಸಲ್ಲಿಸಿದ್ದ IAS-IFS ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಚಿವ ಖಂಡ್ರೆ ಶಿಫಾರಸು

Minister Khandre recommends action against IAS-IFS officers

ಬೆಂಗಳೂರು, ಮೇ 30– ನಗರದ ಹೆಚ್ ಎಂ ಟಿ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಲು ಸರ್ಕಾರದ ಪೂರ್ವಾನುಮತಿ ಇಲ್ಲದೆ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಒಬ್ಬ ಐಎಫ್‌ಎಸ್ ಅಧಿಕಾರಿಯನ್ನು ಅಮಾನತು ಮಾಡಲು ಹಾಗೂ ಮತ್ತೊಬ್ಬ ಅಧಿಕಾರಿ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ಶಿಫಾರಸು ಮಾಡಲಾಗಿದೆ. ಜೊತೆಗೆ ನಿವೃತ್ತ ಅಧಿಕಾರಿಗಳ ವಿರುದ್ಧ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ನಗರದ ಪ್ರಮುಖ ಭಾಗದಲ್ಲಿರುವ ಹದಿನಾಲ್ಕು ಸಾವಿರ ಕೋಟಿ ರೂ.ಗೂ ಹೆಚ್ಚು ಮೌಲ್ಯದ ಎಚ್ಎಂಟಿ ಅರಣ್ಯ ಭೂಮಿಯ ಡಿನೋಟಿಫಿಕೇಷನ್ ಅನುಮತಿ ಕೋರಿ ಸುಪ್ರೀಂಕೋರ್ಟ್ ಗೆ ಐಎ ಹಾಕಿರುವ ಪ್ರಕರಣದಲ್ಲಿ ನಿವೃತ್ತ ಐ.ಎ.ಎಸ್, ಐಎಫ್.ಎಸ್ ಮತ್ತು ಇಬ್ಬರು ಹಾಲಿ ಐ.ಎಫ್.ಎಸ್. ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಸ್ಪಷ್ಟ ಪಡಿಸಿದರು.

ಎಚ್.ಎಂ.ಟಿ. ವಶದಲ್ಲಿರುವ ಭೂಮಿ ಅರಣೇತರ ಉದ್ದೇಶಕ್ಕೆ ಪರಿವರ್ತನೆ ಆಗಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ನೀಡಿರುವ ಹಲವು ತೀರ್ಪು ಮತ್ತು ಅರಣ್ಯ ಸಂರಕ್ಷಣಾ ಕಾಯಿದೆ 1980ರ ಪ್ರಕಾರ ಇಂದಿಗೂ ಇದು ಅರಣ್ಯವೇ ಆಗಿರುತ್ತದೆ. ಆದಾಗ್ಯೂ ಈ ಭೂಮಿ ಪರಭಾರೆ ಆಗಿದೆ, ರಿಯಲ್ ಎಸ್ಟೇಟ್ ಸಂಸ್ಥೆಗಳು ನೂರಾರು ಫ್ಯಾಟ್ ಕಟ್ಟಿದ್ದಾರೆ. ಧಾರಾವಾಹಿ, ಚಲನಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ವಾಣಿಜ್ಯ ಉದ್ದೇಶಕ್ಕೆ ಭೂಮಿ ಬಳಕೆ ಆಗುತ್ತಿದೆ. ಇದಕ್ಕೆ ಹೇಗೆ ಅವಕಾಶ ನೀಡಲಾಗಿದೆ ಎಂಬುದೇ ಪ್ರಶ್ನಾರ್ಥಕವಾಗಿದೆ ಎಂದರು.

ಸಚಿವ ಸಂಪುಟದ ಅನುಮತಿ ಇಲ್ಲದೆ, ಎಚ್‌.ಎಂಟಿ ಅರಣ್ಯ ಭೂಮಿ ಡಿನೋಟಿಫಿಕೇಷನ್ ಗೆ ಐ.ಎ. ಹಾಕಿರುವ ಪ್ರಕರಣದಲ್ಲಿ ಅಧಿಕಾರಿಗಳಿಗೆ ನೋಟಿಸ್ ನೀಡಿ 7 ತಿಂಗಳೇ ಇನ್ನೂ ಏಕೆ ಕ್ರಮ ಆಗಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಚ್.ಎಂ.ಟಿ. ವಶದಲ್ಲಿರುವ ಅರಣ್ಯಭೂಮಿ 7 ಕೋಟಿ ಕನ್ನಡಿಗರ ಆಸ್ತಿ, ಇದನ್ನು ಕೆಲವೇ ಕೆಲವು ಅಧಿಕಾರಿಗಳು ಅಂದಿನ ಅರಣ್ಯ ಸಚಿವರ ಗಮನಕ್ಕೂ ತಾರದೆ, ಸಚಿವ ಸಂಪುಟದ ಪೂರ್ವಾನುಮತಿ ಪಡೆಯದ ಡಿನೋಟಿಫಿಕೇಷನ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರು ನಿವೃತ್ತ ಮತ್ತು ಇಬ್ಬರು ಹಾಲಿ ಸೇರಿ 4 ಅಧಿಕಾರಿಗಳಿಗೆ ನೋಟಿಸ್ ನೀಡಿದ್ದು, ಕ್ರಮಕ್ಕೆ ತಾವು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿರುವುದಾಗಿ ತಿಳಿಸಿದರು.

ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆರ್. ಗೋಕುಲ್ ತಾವು ಬೇಲಿಕೇರಿ ಪ್ರಕರಣದಲ್ಲಿ ಆಡಳಿತ ಪಕ್ಷದ ಶಾಸಕರಿಗೆ ಶಿಕ್ಷೆ ಆಗುವಂತೆ ಮಾಡಿದ ಕಾರಣ ತಮ್ಮನ್ನು ಬಲಿ ಪಶು ಮಾಡಲಾಗುತ್ತಿದೆ ಎಂದು ತಿಳಿಸಿ, ರಕ್ಷಣೆ ಕೋರಿ ಸಿಬಿಐಗೆ ಪತ್ರ ಬರೆದಿದ್ದಾರೆ. ಸರ್ಕಾರ ಅಧಿಕಾರಿಗಳನ್ನು ಬಲಿಪರು ಮಾಡುತ್ತಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಂಡ್ರೆ, ಇದು ಸರ್ಕಾರದ ವಿರುದ್ಧ ಮಾಡಿರುವ ಸಂಪೂರ್ಣ ಸುಳ್ಳು ಆರೋಪ ಎಂದರು.

2024ರ ಸೆಪ್ಟೆಂಬರ್ 24ರಂದು ತಾವು ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ಟಿಪ್ಪಣಿ ಕಳಿಸಿ, ಸಚಿವ ಸಂಪುಟದ ಪೂರ್ವಾನುಮತಿ ಇಲ್ಲದೆ ಐಎ ಹಾಕಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ. ಸೂಚನೆ ನೀಡಿದ ಒಂದು ತಿಂಗಳ ನಂತರ ಅಕ್ಟೋಬರ್ 2024ರಲ್ಲಿ ಬೇಲಿಕೇರಿ ತೀರ್ಪು ಬಂದಿದೆ. ಆರ್.ಗೋಕುಲ್ ತಮ್ಮ ತಪ್ಪು ಮುಚ್ಚಿಕೊಳ್ಳಲು ಸರ್ಕಾರದ ವಿರುದ್ಧ ಸಿಬಿಐಗೆ ಸುಳ್ಳು ಆರೋಪ ಮಾಡಿ ಪತ್ರ ಬರೆದಿದ್ದಾರೆ ಇದು ಕೂಡ ಅಧಿಕಾರಿಯ ದುರ್ವತ್ರನೆ ಆಗುತ್ತದೆ ಅಥವಾ ಬೆದರಿಕೆಯ ತಂತ್ರ ಎಂದು ಭಾವಿಸಬಹುದಾಗಿದೆ ಎಂದರು.

ಎಚ್.ಎಂ.ಟಿ. ಅರಣ್ಯ ಭೂಮಿ ಪ್ರದೇಶಕ್ಕೆ ತಾವೇ ಖುದ್ದು ಭೇಟಿ ನೀಡಿದ್ದು, ಅಲ್ಲಿ ಇಂದಿಗೂ 280 ಎಕರೆಯಷ್ಟು ನೆಡುತೋಪು ಇದೆ. ಆದಾಗ್ಯೂ, ಸದರಿ ಭೂಮಿ ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಸುಪ್ರೀಂಕೋರ್ಟ್ ಗೆ ಸುಳ್ಳು ಮಾಹಿತಿ ನೀಡಿ ಐಎ ಸಲ್ಲಿಸಲಾಗಿದೆ. ತಮ್ಮ ರಕ್ಷಣೆಗೆ ಸಿಬಿಐಗೆ ಪತ್ರ ಬರೆಯುವ ಅಧಿಕಾರಿ, ಎಚ್.ಎಂ.ಟಿ. ಭೂಮಿಯಲ್ಲಿ ಅರಣ್ಯವಿದೆ. ಇದು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಬಿ.ಎ. ಸಲ್ಲಿಸಲು ಬರುವುದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಏಕೆ ಪತ್ರ ಬರೆಯಲಿಲ್ಲ ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಇತರ ಸಂಸ್ಥೆಗಳ ವಶದಲ್ಲಿರುವ ಅರಣ್ಯಭೂಮಿ ಕುರಿತಂತೆ ಚರ್ಚಿಸಿ ಸರ್ಕಾರಕ್ಕೆ ಶಿಫಾರಸು ಮಾಡಲು 2015ರಲ್ಲೇ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಆ ಸಮಿತಿಯ ಗಮನಕ್ಕೆ ಸಹ ತಾರದೆ, ಸಚಿವ ಸಂಪುಟದ ಅನುಮತಿ ಇಲ್ಲದೆ ಸುಪ್ರೀಂ ಕೋರ್ಟ್ ನಲ್ಲಿ ಡಿನೋಟಿಫಿಕೇಷನ್ ಅನುಮತಿ ಕೋರಿ 2020ರ ಜೂನ್ 20ರಂದು ಅರ್ಜಿ ಸಲ್ಲಿಸಲಾಗಿದೆ.

ಕೇವಲ 25 ದಿನಗಳ ಅಂತರದಲ್ಲಿ ಅಂದರೆ 2020ರ ಜುಲೈ 15ರಂದು ಉನ್ನತ ಮಟ್ಟದ ಸಭೆಯಲ್ಲಿ 1980ರ ಪೂರ್ವದಲ್ಲಿ ವಿವಿಧ / ಸರ್ಕಾರಿ ಸಂಸ್ಥೆಗಳಿಗೆ ಆದ ಪ್ರದೇಶಗಳ ಮಂಜೂರಾತಿಗಳ ಬಗ್ಗೆ ಅಡ್ವಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಅಂತಹ ಅರಣ್ಯ ಪ್ರದೇಶಗಳ ಡಿನೋಟಿಫಿಕೇಶನ್ ನ ಪ್ರಸ್ತಾವನೆಯನ್ನು ಕ್ಯಾಬಿನೆಟ್ ನಿರ್ಧಾರಕ್ಕಾಗಿ ಸಲ್ಲಿಸಲು ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆರವರಿಗೆ ಸೂಚಿಸಿದೆ ಎಂಬ ನಿರ್ಣಯ ಮಾಡಲಾಗಿದೆ. ಆದಾಗ್ಯೂ ಈ ಬಗ್ಗೆ ಘಟನೋತ್ತರ ಅನುಮತಿ ಪಡೆದಿಲ್ಲ, ಹೀಗಾಗಿ ನಾಲ್ಕು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತು ಎಂದರು.

ಈಗ ಗೋಕುಲ್ ಅವರನ್ನು ಅಮಾನತು ಮಾಡಿ ವಿಚಾರಣೆ ನಡೆಸಲು, ಮತ್ತೊಬ್ಬ ಅಧಿಕಾರಿ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಹಾಗೂ ನಿವೃತ್ತಿ ಐ.ಎ.ಎಸ್. ಅಧಿಕಾರಿ ಮತ್ತು ಐ.ಎಫ್.ಎಸ್. ಅಧಿಕಾರಿ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲು ತಾವು ಮುಖ್ಯಮಂತ್ರಿಗಳಿಗೆ ಕಡಿತ ಸಲ್ಲಿಸಿರುವುದಾಗಿ ಹೇಳಿದರು.

ಈ ವಿಷಯ ತಮ್ಮ ಗಮನಕ್ಕೆ ಬಂದ ಕೂಡಲೇ ಐಎ ಹಿಂಪಡೆಯಲು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಐ.ಎ. ಹಿಂಪಡೆಯಲು ಸಚಿವ ಸಂಪುಟದ ಅನುಮತಿಯನ್ನೂ ಪಡೆಯಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಬೃಹತ್‌ ಉದ್ಯಾನ ನಿರ್ಮಾಣ: ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ಉತ್ತರ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಿಣ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಮುಂದಿನ ಪೀಳಿಗೆಗೆ ಶ್ವಾಸತಾಣ (ಲಂಗ್ಸ್ ಸ್ಪೇಸ್) ಉಳಿಸುವುದು ತಮ್ಮ ಗುರಿಯಾಗಿದೆ. ಈ ಅಂಶವನ್ನು ಐಎ ಹಿಂಪಡೆಯಲು ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕುವ ಪೂರ್ವದಲ್ಲೇ ತಾವು ಸ್ಪಷ್ಟಪಡಿಸಿರುವುದಾಗಿ ಈಶ್ವರ ಖಂಡ್ರೆ ಹೇಳಿದರು |

RELATED ARTICLES

Latest News