Sunday, September 8, 2024
Homeರಾಜ್ಯಸರ್ಕಾರ ಪತನಗೊಳಿಸುವ ಪ್ರಯತ್ನ ನಡೆಯುತ್ತಿದೆ : ಸಚಿವರ ಆರೋಪ

ಸರ್ಕಾರ ಪತನಗೊಳಿಸುವ ಪ್ರಯತ್ನ ನಡೆಯುತ್ತಿದೆ : ಸಚಿವರ ಆರೋಪ

ಬೆಂಗಳೂರು,ಜು.18- ವಾಲೀಕಿ ಪರಿಶಿಷ್ಟ ಪಂಗಡಗಳ ಹಗರಣದಲ್ಲಿ ಬಂಧಿತರಾಗಿರುವವರ ಮೇಲೆ ಜಾರಿ ನಿರ್ದೇಶನಾಲಯ ಒತ್ತಡ ಹೇರಿ ಸರ್ಕಾರದ ಪ್ರಮುಖರ ಹೆಸರು ಹೇಳಿಸುವ ಪ್ರಯತ್ನ ನಡೆಸುತ್ತಿದ್ದು, ಕಾಂಗ್ರೆಸ್‌‍ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ನಡೆಸಿದೆ. ಇದಕ್ಕೆ ನಾವು ಹೆದರುವುದಿಲ್ಲ. ಕಾನೂನಾತಕವಾಗಿ ಹಾಗೂ ಪ್ರಜಾಸತ್ತಾತಕವಾಗಿ ಹೋರಾಟ ಮುಂದುವರೆಸುತ್ತೇವೆ ಎಂದು ಸಚಿವರ ತಂಡ ಘೋಷಣೆ ಮಾಡಿದೆ.

ವಿಧಾನಸೌಧದ ಸಭಾಂಗಣದಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌, ಕಂದಾಯ ಸಚಿವ ಕೃಷ್ಣಾಭೈರೇಗೌಡ, ಇಂಧನ ಸಚಿವ ಕೆ.ಜೆ.ಜಾರ್ಜ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ ಖರ್ಗೆ, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಶಾಸಕ ಎ.ಎಸ್‌‍.ಪೊನ್ನಣ್ಣ ಮಾತನಾಡಿದರು.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಇ.ಡಿ. ತನಿಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರವನ್ನು ಬುಡಮೇಲು ಮಾಡುವ ಹುನ್ನಾರ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದರು.ಕೃಷ್ಣಾಭೈರೇಗೌಡ ಮಾತನಾಡಿ, ಜಾರಿ ನಿರ್ದೇಶನಾಲಯ ಬಂಧಿತರ ಮೇಲೆ ಒತ್ತಡ ಹೇರತ್ತಿದ್ದು, ಸರ್ಕಾರದ ಪ್ರಮುಖರ ಹೆಸರನ್ನು ಹೇಳಿದರೆ ನಿಮನ್ನು ರಕ್ಷಿಸುತ್ತೇವೆ. ಇಲ್ಲದೇ ಹೋದರೆ ಜಾರಿ ನಿರ್ದೇಶನಾಲಯದ ಶಕ್ತಿ ಏನು ಎಂದು ತೋರಿಸುತ್ತೇವೆ ಎಂಬ ಬೆದರಿಕೆ ಹಾಕುತ್ತಿದ್ದಾರೆ.

ಕಳೆದ ಹತ್ತು ವರ್ಷಗಳಿಂದಲೂ ಜಾರಿ ನಿರ್ದೇಶನಾಲಯ ವಿರೋಧಪಕ್ಷಗಳನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದೆ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿರೋಧಪಕ್ಷಗಳ ವಿರುದ್ಧ ಶೇ. 52 ರಷ್ಟು ಪ್ರಕರಣಗಳಿದ್ದವು. ಕಾಂಗ್ರೇಸ್‌‍ ನೇತೃತ್ವದ ಯುಪಿಎ ಮತ್ತು ಅದರ ಮಿತ್ರಪಕ್ಷಗಳ ಶೇ.47 ರಷ್ಟು ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಶೇ.95 ರಷ್ಟು ಪ್ರಕರಣಗಳು ವಿರೋಧಪಕ್ಷಗಳ ವಿರುದ್ಧ ದಾಖಲಾಗಿವೆ. ಶೇ.5 ರಷ್ಟು ಮಾತ್ರ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ದಾಖಲಾಗಿವೆ ಎಂದು ಹೇಳಿದರು.

ರಾಜ್ಯದಲ್ಲಿ ಬೋವಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ದೇವರಾಜು ಅರಸು ಟ್ರಕ್‌ ಟರ್ಮಿನಲ್‌ ಸೇರಿದಂತೆ ಹಲವು ಹಗರಣಗಳು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿವೆ. ಅದರ ಬಗ್ಗೆ ಜಾರಿ ನಿರ್ದೇಶನಾಲಯ ಏಕೆ ತನಿಖೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.

ಪ್ರಿಯಾಂಕ್‌ ಖರ್ಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಹಿನ್ನಡೆಯಾದಾಗಲೆಲ್ಲಾ ಕೇಂದ್ರ ಸರ್ಕಾರ ರಾಜ್ಯಗಳಲ್ಲಿರುವ ಬಿಜೆಪಿ ಘಟಕಗಳ ನೆರವಿಗೆ ಬರುತ್ತದೆ. ಬಿಜೆಪಿಯೇತರ ಸರ್ಕಾರಗಳಿರುವ ಕಡೆಗೆ ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆ ಸಂಸ್ಥೆಗಳನ್ನು ಬಳಕೆ ಮಾಡಿಕೊಂಡು ಸರ್ಕಾರಗಳನ್ನು ಪಥನಗೊಳಿಸಲಾಗಿದೆ. 2019 ರಲ್ಲಿ ರಾಜ್ಯದ ಕಾಂಗ್ರೆಸ್‌‍ ಸರ್ಕಾರ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಮಹಾರಾಷ್ಟ್ರ, ಗೋವಾ, ಮಿಜೋರಾಂ, ನಾಗಾಲ್ಯಾಂಡ್‌, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರ್ಕಾರಗಳನ್ನು ಪತನಗೊಳಿಸಲಾಗಿದೆ.

ಆಂಧ್ರಪ್ರದೇಶ, ಪ.ಬಂಗಾಳ ಸೇರಿದಂತೆ ಹಲವು ಕಡೆ ಪ್ರಯತ್ನಗಳಾಗಿವೆ. ವಿರೋಧಪಕ್ಷಗಳಲ್ಲಿ ಇದ್ದವರ ಮೇಲೆ ದಾಳಿ ಮಾಡಿ ಬಿಜೆಪಿಗೆ ಸೆಳೆದುಕೊಂಡು ನಂತರ ಅವರಿಗೆ ಕ್ಲೀನ್‌ಶೀಟ್‌ ನೀಡಲಾಗುತ್ತಿದೆ. 444 ಶಾಸಕರನ್ನು ಇದೇ ರೀತಿ ಸೆಳೆದುಕೊಳ್ಳಲಾಗಿದೆ. 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ 3,000 ಕ್ಕೂ ಹೆಚ್ಚು ದಾಳಿಗಳಾಗಿವೆ. 121 ಮಂದಿ ರಾಜಕೀಯ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ 115 ಮಂದಿ ಕಾಂಗ್ರೆಸ್‌‍ ಮತ್ತು ವಿರೋಧಪಕ್ಷದ ಪ್ರಮುಖರಿದ್ದಾರೆ.

ದಿನೇಶ್‌ ಗುಂಡೂರಾವ್‌ ಮಾತನಾಡಿ, ಕೇಂದ್ರ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್‌‍ ಸರ್ಕಾರವನ್ನು ಪತನಗೊಳಿಸುವ ಯತ್ನ ನಡೆಸುತ್ತಿದೆ ಎಂದರು.
ಹಗರಣದ ಮಾಹಿತಿ ತಿಳಿಯುತ್ತಿದ್ದಂತೆ ನಮ ಸರ್ಕಾರ ಎಸ್‌‍ಐಟಿಯನ್ನು ರಚನೆ ಮಾಡಿ ತನಿಖೆ ನಡೆಸುತ್ತಿದೆ. ಈ ನಡುವೆ ಇ.ಡಿ ಏಕಾಏಕಿ ಮಧ್ಯಪ್ರವೇಶ ಮಾಡಿ, ನಾಗೇಂದ್ರ ಅವರನ್ನು ಬಂಧಿಸಿದೆ. ಜಾರಿ ನಿರ್ದೇಶನಾಲಯ ಕೇಂದ್ರ ತನಿಖೆ ಸಂಸ್ಥೆಯಾಗಿ ಉಳಿದಿಲ್ಲ. ಬಿಜೆಪಿಯ ರಾಜ್ಯಘಟಕವಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಕೆ.ಜೆ.ಜಾರ್ಜ್‌ ಮಾತನಾಡಿ, ಕಾಂಗ್ರೆಸಿಗರು ಬ್ರಿಟಿಷರ ಗುಂಡಿಗೇ ಹೆದರಿಲ್ಲ. ಇನ್ನು ಇಂತಹ ದಾಳಿಗಳಿಗೆಲ್ಲಾ ಜಗ್ಗುವುದಿಲ್ಲ. ಕೇಂದ್ರ ಸರ್ಕಾರದ ಆದೇಶದ ಮೇಲೆ ರಾಜ್ಯದಲ್ಲಿ ವಾಲೀಕಿ ಹಗರಣದಲ್ಲಿ ಇ.ಡಿ ದಾಳಿಯಾಗಿದೆ ಎಂದು ಆರೋಪಿಸಿದರು.

ಸಂತೋಷ್‌ ಲಾಡ್‌ ಮಾತನಾಡಿ, ಕೇಂದ್ರ ಸರ್ಕಾರದ ವರದಿಯಲ್ಲೇ ಹಲವಾರು ಭ್ರಷ್ಟಾಚಾರಗಳು ಬೆಳಕಿಗೆ ಬಂದಿವೆ. ಸಾವಿರಾರು ಕೋಟಿ ರೂ.ಗಳ ಎಲೆಕ್ಟ್ರೋಲ್‌ ಹಗರಣ, ಆನ್‌ಲೈನ್‌ನಲ್ಲಿ ಫಲಾನುಭವಿಗಳಿಗೆ ನಗದು ವರ್ಗಾವಣೆ ಹಗರಣ ಸೇರಿದಂತೆ ಬಹಳಷ್ಟು ಉದಾಹರಣೆಗಳಿದ್ದರೂ ಯಾವುದರಲ್ಲೂ ಜಾರಿ ನಿರ್ದೇಶನಾಲಯ ಸಿಬಿಐ ಅಥವಾ ಆದಾಯ ತೆರಿಗೆ ದಾಳಿಗಳಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Latest News