Friday, July 18, 2025
Homeರಾಜ್ಯವಿಳಂಬ ಧೋರಣೆ ತೋರಿದ ಅಧಿಕಾರಿಗಳ ಚಳಿ ಬಿಡಿಸಿದ ಸಚಿವ ಕೃಷ್ಣ ಬೈರೇಗೌಡ

ವಿಳಂಬ ಧೋರಣೆ ತೋರಿದ ಅಧಿಕಾರಿಗಳ ಚಳಿ ಬಿಡಿಸಿದ ಸಚಿವ ಕೃಷ್ಣ ಬೈರೇಗೌಡ

Minister Krishna Byre Gowda slams officials for delaying the project

ಬೆಂಗಳೂರು,ಜು.18- ಭೂಸುರಕ್ಷಾ ಯೋಜನೆ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದರೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಉದ್ದೇಶಪೂರಕವಾಗಿ ಅಧಿಕಾರಿಗಳು ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡರವರು ತಹಸೀಲ್ದಾರ್‌ ಹಾಗೂ ಶಿರಸ್ತೇದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ವಿಕಾಸಸೌಧದಲ್ಲಿಂದು ನಡೆದ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್‌, ಉಪ ತಹಸೀಲ್ದಾರ್‌ಗಳ ಸಭೆಯಲ್ಲಿ ಮಾತನಾಡಿದ ಅವರು, ಭೂಸುರಕ್ಷಾ ಯೋಜನೆಯಡಿ ಭೂದಾಖಲೆಗಳು ಡಿಜಿಟಲೀಕರಣಗೊಳ್ಳುವ ಪ್ರಕ್ರಿಯೆ ಇಡೀ ರಾಜ್ಯದಲ್ಲಿ ನಡೆಯುತ್ತಿದೆ. ಆದರೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಉದ್ದೇಶಪೂರಕವಾಗಿ ಆನ್‌ಲೈನ್‌ನಲ್ಲಿ ದೃಢೀಕರಿಸಿದ ದಾಖಲೆಗಳನ್ನು ನೀಡಲು ತಡೆಹಿಡಿಯಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ 21 ಲಕ್ಷ ಪುಟಗಳಷ್ಟು ಆನ್‌ಲೈನ್‌ ಮೂಲಕ ದೃಢೀಕರಿಸಿದ ದಾಖಲೆಗಳನ್ನು ವಿತರಣೆ ಮಾಡಿದಾಗ ಬೆಂಗಳೂರು ನಗರ ಜಿಲ್ಲೆಯಲ್ಲಿ ಕೇವಲ 25 ಪುಟಗಳಷ್ಟು ಮಾತ್ರ ದಾಖಲೆಗಳನ್ನು ನೀಡಲಾಗಿತ್ತು. ವಿಶ್ವದಲ್ಲಿಯೇ ಐಟಿ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ಆನ್‌ಲೈನ್‌ ಮೂಲಕ ದಾಖಲಾತಿಗಳನ್ನು ವಿತರಣೆ ಮಾಡಲು ಇರುವ ಅಡ್ಡಿಯಾದರೂ ಏನು ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ರಾಜ್ಯದ ಎಲ್ಲೆಡೆ ಹೆಚ್ಚೂ ಕಡಿಮೆ ಯಶಸ್ವಿಯಾಗಿ ಆನ್‌ಲೈನ್‌ ಮೂಲಕ ದೃಢಿಕರಿಸಿದ ದಾಖಲೆ ವಿತರಿಸಲಾಗುತ್ತಿದೆ. ಆದರೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ತಹಸೀಲ್ದಾರ್‌, ಗ್ರೇಡ್‌-2 ತಹಸೀಲ್ದಾರ್‌, ರೆಕಾರ್ಡ್‌ ರೂಂ ಕೀಪರ್‌ರ‍ಸಗಳು ಸೇರಿ ದಾಖಲೆಗಳನ್ನು ನೀಡುವುದಕ್ಕೆ ತಡೆಯೊಡ್ಡುತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ಸಚಿವರು ಮಾಡಿದರು.

ಈ ವಿಚಾರದ ಬಗ್ಗೆ ಬೇರೆಯ ರೂಪದಲ್ಲಿ ಹೇಳಲು ಸಾಧ್ಯವಿಲ್ಲ. ತಾಲೂಕು ಕಚೇರಿಗಳಲ್ಲಿ ಅಧಿಕಾರಿಗಳು ಇರುವುದಿಲ್ಲ. ಬೇರೆ ಎಲ್ಲಿ ಕೆಲಸವಿರುತ್ತದೆ. ಮಾತೆತ್ತಿದರೆ ನ್ಯಾಯಾಲಯದ ಕೇಸ್‌‍ ವಿಚಾರವನ್ನು ಪ್ರಸ್ತಾಪ ಮಾಡಲಾಗುತ್ತದೆ. ಕಚೇರಿಯಿಂದ ಹೊರಹೋಗುವ ಚಲನವಲನಗಳ ದಾಖಲಾತಿ ಮಾಹಿತಿ ಇರುವುದಿಲ್ಲ. ಕಂದಾಯ ಇಲಾಖೆಯ ಪ್ರದಾನ ಕಾರ್ಯದರ್ಶಿ ನಿಯಮಿತವಾಗಿ ನ್ಯಾಯಾಲಯದ ಪ್ರಕರಣಗಳಲ್ಲಿ ಹಾಜರಾಗುತ್ತಾರೆ. ಅವರಿಗೆ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರು ಮಾಹಿತಿ ನೀಡಲು ನೆರವಾಗುತ್ತಾರೆ ಎಂದು ಹೇಳಿದರು.

ತಾಲ್ಲೂಕು ಕಚೇರಿ ಬಿಟ್ಟು ಬೇರೆಲ್ಲಿ ನಿಮಗೆ ಕಚೇರಿ ಇದೆಯೋ ಗೊತ್ತಿಲ್ಲ. ತಾಲೂಕು ಕಚೇರಿಗಳಲ್ಲಿ ಕೂರುವುದೇ ಇಲ್ಲ ಎಂದರೆ ಹೇಗೆ? ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇದುವರೆಗೂ ಎಲ್ಲವನ್ನೂ ಸಹಿಸಿಕೊಂಡಿದ್ದೇವೆ. ಆದರೆ ಮಿತಿಮೀರಿದರೆ ಸಹಿಸಲಾಗುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.ಇನ್ನುಮುಂದೆ ಈ ಅವ್ಯವಸ್ಥೆ ಸರಿ ಹೋಗದಿದ್ದರೆ ಸೂಕ್ತ ಪರಿಣಾಮ ಆಗಲೇಬೇಕು. ಸುಧಾರಣೆ ತರಲಾಗದಿದ್ದರೆ ಮುಂದೇನು ಆಗಬೇಕು ಎಂಬುದು ನಿರ್ಧಾರ ಮಾಡಲಾಗುವುದು. ಎಲ್ಲರಿಗೂ ಮೀರಿದವರಿಗೆ ಭೂಮಿಗೆ ಇಳಿಸುವುದೂ ಗೊತ್ತಿದೆ. ಚೆನ್ನಾಗಿ ಕೆಲಸ ಮಾಡುವ ಒಳ್ಳೆಯವರಿಗೆ ಮೆಚ್ಚುಗೆ ಸೂಚಿಸುವುದು ಗೊತ್ತಿದೆ ಎಂದು ತೀಕ್ಷ್ಣವಾಗಿ ನುಡಿದರು.

ಭೂಸುರಕ್ಷಾ ಯೋಜನೆ ಅನುಷ್ಠಾನದ ವಿಳಂಬಕ್ಕೆ ಸರಿಯಾದ ಕಾರಣ ಹಾಗೂ ಸೂಕ್ತ ಉತ್ತರ ನೀಡಿ ಎಂದರೆ ಇಲ್ಲಸಲ್ಲದ ಸಬೂಬು ಹೇಳುತ್ತೀರ. ನಿಮಗೆ ನಾಚಿಕೆಯಾಗುವುದಿಲ್ಲವೇ?, ನಿಮ ಕಚೇರಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಪರಿಜ್ಞಾನವೂ ನಿಮಗಿಲ್ಲ, ಎಲ್ಲಿ, ಏನು ಮಾತನಾಡುತ್ತಿದ್ದೇವೆ ಎಂಬ ಅರಿವು ಇದೆಯೇ? ಎಂದು ಹಿಗ್ಗಾಮುಗ್ಗಾ ತರಾಟೆಗೆ ಸಚಿವರು ತೆಗೆದುಕೊಂಡರು. ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News