ಬೆಂಗಳೂರು,ಮಾ.17– ರಾಜ್ಯದ ಅನೇಕ ವಿಶ್ವ ವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು ಹೇಳಿದ್ದಾರೆ.
ವಿಧಾನ ಪರಿಷತ್‌ನ ಪ್ರಶ್ನೋತ್ತರ ಅವಽಯಲ್ಲಿ ಬಿಜೆಪಿ ಸದಸ್ಯ ಎಸ್‌ವಿ ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಸುಧಾಕರ್ ಬೋಧಕ, ಬೋಧಕೇತರ ಸಿಬ್ಬಂದಿ ಹಿಂದಿನಿಂದಲೂ ಖಾಲಿ ಇದೆ. 2,800 ಬೋಧಕ ಸಿಬ್ಬಂದಿ ಹೆದ್ದೆಗಳು ಖಾಲಿ ಇವೆ. ನಮ್ಮ ಸರ್ಕಾರ ಬಂದಾಗಿನಿಂದ ಅನೇಕ ಹುದ್ದೆಗಳನ್ನು ತುಂಬಿದ್ದೇವೆ ಎಂದರು.
ಜಾನಪದ ವಿಶ್ವವಿದ್ಯಾಲಯದಲ್ಲಿ ಹಗರಣ ಆಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಹೀಗಾಗಿ ಕೆಇಎ ಮೂಲಕ ಪರೀಕ್ಷೆ ನಡೆದಿದೆ. ಸಚಿವ ಸಂಪುಟದ ಉಪಸಮಿತಿಯನ್ನೂ ಕೂಡ ಮಾಡಲಾಗಿದೆ. ಕೆಲವೆಡೆ ಅವೈಜ್ಞಾನಿಕವಾಗಿ ಹುದ್ದೆ ಸೃಷ್ಟಿ ಮಾಡಲಾಗಿದೆ. ಪರಿಶೀಲನೆಗಾಗಿ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ವಿವಿಗಳ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಹೊಸ ವಿವಿ ತೆರೆಯುವಾಗ ಹೊಣೆಗಾರಿಕೆ ಬಗ್ಗೆ ಯೋಚನೆ ಮಾಡಿಲ್ಲ. ಪಿಂಚಣಿ ಯೋಜನೆ ಹೊಸ ವಿವಿಗಳಿಗೂ ಸಿಗಬೇಕಿತ್ತು, ಆದರೆ ಆಗಿಲ್ಲ. 70 ಕೋಟಿವರೆಗೂ ಹೊಣೆಗಾರಿಕೆ ಕೊಡಲಾಗಿದೆ. ಪದವೀಧರ ಮತ್ತು ಶಿಕ್ಷಣ ಕ್ಷೇತ್ರದವರ ಜೊತೆ ಚರ್ಚೆ ಮಾಡಿದ್ದೇವೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ. ಹಣಕಾಸು ಇಲಾಖೆ ಕೂಡ ತನ್ನದೇ ಆದ ಜವಾಬ್ದಾರಿ ಹೊಂದಿದೆ ಎಂದರು.
ಶೀಘ್ರದಲ್ಲೇ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ನಿವೃತ್ತಿಯಾದವರಿಗೆ ಪೆನ್ಷನ್ ಕೊಡಬೇಕಿದೆ. ಆದರೆ, ವಿಶ್ವವಿದ್ಯಾಲಯಗಳಲ್ಲಿ ಖಾತೆಯಲ್ಲಿರುವ ಹಣ ಖಾಲಿಯಾಗಿದೆ.ಕುಲಪತಿ, ಕುಲಸಚಿವರು ಸುದ್ದಿಗೋಷ್ಠಿ ಮಾಡಿ ಹೇಳುತ್ತಿದ್ದಾರೆ. ಪೆನ್ಷನ್ ಸಿಗದೆ ಹೋರಾಟ ಮಾಡುವ ಹಂತಕ್ಕೆ ಬಂದಿದ್ದಾರೆ. ಇದು ಸರ್ಕಾರದ ಗಮನದಲ್ಲಿ ಇದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಸಂಕನೂರು, ಬೋಧಕ, ಬೋಧಕೇತರ ಸಿಬ್ಬಂದಿ ಯಾವಾಗ ನೇಮಕ ಮಾಡಿಕೊಳ್ಳುತ್ತೀರಿ ರಾಜ್ಯದ ವಿವಿಗಳಲ್ಲಿ ಶೇ. 60 ರಷ್ಟು ಬೋಧಕ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಬೋಧಕೇತರ ಸಿಬ್ಬಂದಿ ಶೇ. 80 ರಷ್ಟು ಹುದ್ದೆಗಳು ಖಾಲಿ ಇವೆ. ಬೋಧಕ ಸಿಬ್ಬಂದಿ ಇಲ್ಲದಿದ್ದರೆ ಉತ್ತಮ ಶಿಕ್ಷಣ ಸಿಗುವುದಿಲ್ಲ. ಅತಿಥಿ ಉಪನ್ಯಾಸಕರಿಂದ ಹೆಚ್ಚು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಯಾವ ಕಾಲಮಿತಿಯಲ್ಲಿ ಬೋಧಕ ಸಿಬ್ಬಂದಿ ಭರ್ತಿ ಮಾಡುತ್ತೀರಿ. ವಿಶ್ವವಿದ್ಯಾಲಯಗಳಲ್ಲಿ ಶೇ.70ರಷ್ಟು ಹುದ್ದೆಗಳು ಖಾಲಿ ಇವೆ. ಯಾವಾಗ, ಎಷ್ಟು ಹುದ್ದೆ ಭರ್ತಿ ಅಂತ ಸ್ಪಷ್ಟವಾಗಿ ಹೇಳಿ. ವಿಶ್ವವಿದ್ಯಾಲಯಗಳು ಮುಚ್ಚುವ ಹಂತಕ್ಕೆ ಬಂದಿವೆ ಎಂದು ಪ್ರಶ್ನಿಸಿದರು.