ಬೆಂಗಳೂರು, ಅ.28- ಪರಮೇಶ್ವರ್ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳುವವರಿಗೆ ಬುದ್ದಿ ಇಲ್ಲ ಎಂದಿರುವ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ, ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮುಂದಿನ ಎರಡುವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಮಂಡ್ಯ ಕ್ಷೇತ್ರದ ಶಾಸಕ ರವಿ ಗಣಿಗ, ಚೆನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆಗಳ ನಡುವೆ ಮಹದೇವಪ್ಪ ಅವರ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಮಹದೇವಪ್ಪ, ನಿನ್ನೆ ಗೃಹ ಸಚಿವ ಪರಮೇಶ್ವರ್ ಮನೆಯಲ್ಲಿ ನಾವು ಒಂದಿಷ್ಟು ಮಂದಿ ಊಟಕ್ಕೆ ಕರೆದಿದ್ದೇವು. ಅದರಲ್ಲಿ ವಿಶೇಷವೇನಿಲ್ಲ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟ ಪಡಿಸಿದರು. ಡಿ.ಕೆ.ಶಿವಕುಮಾರ್ ಅವರನ್ನು ಭೋಜನಕೂಟಕ್ಕೆ ಆಹ್ವಾನ ನೀಡಿದಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು.
ಭೋಜನಕೂಟದಲ್ಲಿ ಯಾವುದೇ ರಾಜಕೀಯ ಚರ್ಚೆ ಇಲ್ಲ ಎಂದು ಪದೇ ಪದೇ ಪುನರುಚ್ಚರಿಸಿದ ಅವರು, ಪರಮೇಶ್ವರ್‍ರನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂದು ಹೇಳುವವರಿಗೆ ಬುದ್ದಿ ಇಲ್ಲ. ಐದು ವರ್ಷದವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ ಎಂದರು. ಈ ಮೂಲಕ ಡಿ.ಕೆ.ಶಿವಕುಮಾರ್ ಬಣದ ಶಾಸಕರಿಗೆ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಮಹದೇವಪ್ಪ ಟಾಂಗ್ ನೀಡಿದ್ದಾರೆ.
ಸರ್ಕಾರ ಬೀಳಿಸಲು ಷಡ್ಯಂತ್ರ, ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಖಡಕ್ ವಾರ್ನಿಂಗ್
ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅಲ್ಲವೇ ಎಂದು ಪ್ರಶ್ನೆಯೊಂದಕ್ಕೆ ಮರುಪ್ರಶ್ನೆ ಹಾಕಿದ್ದಾರೆ. ಬಿಜೆಪಿ-ಜೆಡಿಎಸ್‍ನಿಂದ ಸರ್ಕಾರ ಬೀಳಿಸುವ ಪ್ರಯತ್ನಗಳ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರೈಲು ಹೋಗುತ್ತಿರುತ್ತದೆ. ಬೋಗಿ ಅಲುಗಾಡುತ್ತದೆ. ರೈಲು ಬೀಳುವುದಿಲ್ಲ. ವಿಪಕ್ಷಗಳ ಆಸೆ ಈಡೇರುವುದಿಲ್ಲ ಎಂದರು.
ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ದೊಡ್ಡಮಟ್ಟದಲ್ಲಿ ನಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಭೋಜನಕೂಟದಲ್ಲಿ ನಾವು ಊಟವನ್ನಷ್ಟೆ ಮಾಡಿದ್ದೇವೆ ಎಂದರು.
ರಾಮನಗರದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಎದುರು ಸಿಇಒ ಕಾಲು ಮೇಲೆ ಕಾಲು ಹಾಕಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ಇದರ ಬಗ್ಗೆ ಶಿಷ್ಟಾಚಾರದ ನಿಯಮಗಳು ಏನಿವೆ ಎಂದು ಪರಿಶೀಲಿಸಬೇಕಿದೆ ಎಂದರು.