ಬೆಂಗಳೂರು, ಸೆ.21- ಪಡಿತರ ಚೀಟಿ ವ್ಯವಸ್ಥೆಯಲ್ಲಿ ಅನರ್ಹರನ್ನು ಗುರುತಿಸಲಾಗುತ್ತಿದೆ. ಹೊಸದಾಗಿ ಅರ್ಜಿ ಸಲ್ಲಿಸುವ ಅರ್ಹರನ್ನು ಪರಿಶೀಲಿಸಲಾಗುತ್ತಿದೆ. ಈ ಕಾರ್ಯಕ್ಕೆ ಸುಮಾರು ಒಂದು ತಿಂಗಳ ಕಾಲಾವಕಾಶ ಹಿಡಿಯಲಿದ್ದು, ಬಳಿಕ ಹೊಸ ಪಡಿತರ ಚೀಟಿ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡಿತರ ಚೀಟಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತದೆ. ಬಳಿಕ ಅಂತಿಮವಾಗಿ ಅರ್ಹರನ್ನು ಉಳಿಸಿಕೊಳ್ಳಲಾಗು ವುದು. ಈ ನಡುವೆ ಹೊಸದಾಗಿ ಮತ್ತಷ್ಟು ಜನ ಬಿಪಿಎಲ್ ಕಾರ್ಡ್ ಕೇಳುತ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ಇದನ್ನು ಪೂರ್ಣಗೊಳಿಸಿ ನಂತರ ಅನ್ನಭಾಗ್ಯ ಯೋಜನೆಯಡಿ ಆಹಾರ ಕಿಟ್ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ನೀಡಲಾಗುವ ಪ್ರಸಾದದ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂಬುದು ಆಘಾತಕಾರಿ. ಇದು ನಡೆಯಬಾರದಿತ್ತು. ಜನರ ಭಾವನಾತ್ಮಕವಾದ ವಿಚಾರದಲ್ಲಿ ಈ ರೀತಿಯ ನಡವಳಿಕೆಗಳು ಸರಿಯಲ್ಲ ಎಂದು ಹೇಳಿದರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಲಡ್ಡು ತಯಾರಿಕೆಗೆ ಅಗತ್ಯದಷ್ಟು ತುಪ್ಪ ಪೂರೈಸಲು ನಮ್ಮಲ್ಲಿ ಸಾಕಷ್ಟು ದಾಸ್ತಾನಿದೆ. ಪರಸ್ಪರ ಒಪ್ಪಂದದೊಂದಿಗೆ ತುಪ್ಪ ಪೂರೈಕೆಯಾಗುತ್ತಿದ್ದು, ವಿವಾದದಿಂದ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ತಿಳಿಸಿದರು.ರಾಜ್ಯಸರ್ಕಾರ ಯಾವುದೇ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ವಿರೋಧಪಕ್ಷಗಳ ಟೀಕೆಗಳು ಆಧಾರರಹಿತ ಎಂದರು.