ಕಲ್ಬುರ್ಗಿ, ಸೆ.25- ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ದೆಹಲಿಗೆ ಹೋಗಿ ಬಿಜೆಪಿ ನಾಯಕರ ಕಾಲಿಗೆ ಬಿದ್ದು ಬಂದಿರುವ ಎಚ್.ಡಿ.ಕುಮಾರಸ್ವಾಮಿಯವರು ಈ ವೇಳೆ ರಾಜಕೀಯ ಮಾತ್ರ ಚರ್ಚೆ ಮಾಡಿದ್ದಾರೆಯೇ ಅಥವಾ ರಾಜ್ಯದ ಹಿತಾಸಕ್ತಿಗೆ ಸಂಬಂಧಪಟ್ಟಂತೆ ಕಾವೇರಿ ವಿಷಯ ಕುರಿತು ಏನಾದರೂ ಚರ್ಚೆ ನಡೆಸಿದ್ದಾರೆಯೇ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಚಿಂಚುಳ್ಳಿಯಲ್ಲಿ ಜನತಾದರ್ಶನ ನಡೆಸಲು ಆಗಮಿಸಿದ ಅವರು, ದೆಹಲಿಗೆ ಹೋಗಿದ್ದ ಕುಮಾರಸ್ವಾಮಿಯವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿಯ ಎಲ್ಲಾ ಮುಖಂಡರ ಕಾಲಿಗೂ ಬಿದ್ದು ಬಂದಿದ್ದಾರೆ. ಇಂಡಿಯಾ ಉಳಿಸಿಕೊಳ್ಳುವುದಕ್ಕಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ.
ಈಗ ಖುದ್ದು ಕುಮಾರಸ್ವಾಮಿಯವರೇ ಪ್ರಧಾನಮಂತ್ರಿಯ ಜೊತೆಗೆ ಸೇರಿಕೊಂಡಿದ್ದಾರೆ. ದೆಹಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.
ಈ ವೇಳೆ ಜೆಡಿಎಸ್ ಬಗ್ಗೆ ಮತ್ತು ಅವರ ಸ್ವಂತ ರಾಜಕೀಯದ ಬಗ್ಗೆ ಮಾತ್ರ ಚರ್ಚೆಯಾಯಿತೆ ಅಥವಾ ಕಾವೇರಿ ವಿಷಯವಾಗಿ ಏನಾದರೂ ಮಾತನಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಈಗ ಅವರು ಬಿಜೆಪಿ ಸೇರಿರುವುದರಿಂದ ಡಬ್ಬಲ್ ಇಂಜಿನ್ ಅಷ್ಟೇ ಅಲ್ಲ, ತ್ರಿಬಲ್ ಇಂಜಿನ್ ಎಂಬಂತಾಗಿದೆ. ಕಾವೇರಿ ವಿಷಯದಲ್ಲಿ ಅವರು ಏನು ಚರ್ಚೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಮಹಿಳಾ ಮೀಸಲಾತಿಯಲ್ಲಿ ಒಬಿಸಿ ಕೋಟಾ ; ಉಮಾಭಾರತಿ ಭರವಸೆ
ನಾಡಿನ ಸಮಸ್ಯೆಗಳ ಚರ್ಚೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಎರಡು-ಮೂರು ದಿನ ದೆಹಲಿಯಲ್ಲೇ ಬೀಡುಬಿಟ್ಟು ಪ್ರಧಾನಿಯವರ ಭೇಟಿಗಾಗಿ ಕಾದು ಕುಳಿತಿದ್ದರು. ಆದರೆ ಸಮಯ ಸಿಗಲಿಲ್ಲ. ಇತ್ತ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರನ್ನು ಭೇಟಿ ಮಾಡಲು ನಾನು ಸಮಯ ಕೇಳಿದ್ದೆ. ಆದರೆ ಕೇಂದ್ರ ಸಚಿವರು ಭೇಟಿ ಸಾಧ್ಯವಿಲ್ಲ ಎಂದಿದ್ದಾರೆ.
ಪ್ರಧಾನಿಯವರು ಮುಖ್ಯಮಂತ್ರಿಯನ್ನು ಭೇಟಿಯಾಗುತ್ತಿಲ್ಲ. ನಮ್ಮ ಇಲಾಖೆ ನಮ್ಮನ್ನು ಭೇಟಿಯಾಗುತ್ತಿಲ್ಲ. ನಾವು ಏನು ಮಾಡಲು ಸಾಧ್ಯ. ಕೇಂದ್ರ ಸಚಿವರನ್ನು ಭೇಟಿಯಾಗಲು ನಾನು ಸಮಯ ಕೇಳಿ ಪತ್ರ ಬರೆದಿದ್ದೆ. ಆದರೆ ಸಮಯ ನೀಡಿಲ್ಲ. ಅಲ್ಲಿ ನೋಡಿದರೆ ಕೇಂದ್ರ ಸಚಿವರಿಗೆ ಕೆಲಸಗಳಿಲ್ಲ. ಖಾಲಿ ಕುಳಿತಿದ್ದಾರೆ. ಎಲ್ಲವೂ ಏಕಪಾತ್ರಾಭಿನಯ ನಡೆಯುತ್ತಿದೆ ಎಂದರು.
ರಾಜ್ಯದಲ್ಲಿ ಬರಪರಿಸ್ಥಿತಿ ಘೋಷಣೆಯಾಗಿದೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ ನೀಡುತ್ತಿರುವ ಕೆಲಸದ ದಿನಗಳನ್ನು 150 ದಿನಗಳಿಗೆ ಹೆಚ್ಚಿಸುವಂತೆ ಮನವಿ ಮಾಡಿದ್ದೇನೆ. ಅದನ್ನು ಸ್ವೀಕರಿಸಿರುವುದಾಗಿ ರಶೀದಿ ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು.
ಅನ್ಯಾಯದ ವಿರುದ್ಧ ನಾವೆಲ್ಲರೂ ಹೋರಾಡಬೇಕಿದೆ : ಕುರುಬೂರು ಶಾಂತಕುಮಾರ್
ಮೇಕೆದಾಟು ಬಳಿ ಸಮತೋಲಿತ ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೆ ದೊರೆಯಬೇಕಾದ ನೀರಿನ ಪಾಲು ದೊರೆಯುತ್ತದೆ. ಇದಕ್ಕೆ ಅಡ್ಡಿಪಡಿಸಬಾರದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಕಾಂಗ್ರೆಸ್ ಈ ಯೋಜನೆಗಾಗಿ ಪಾದಯಾತ್ರೆ ನಡೆಸಿತ್ತು. ಆದರೆ ಬಿಜೆಪಿ ಅದನ್ನು ವಿರೋಧಿಸಿತ್ತು. ಬಿಜೆಪಿಯವರು ಮೇಕೆದಾಟಿಗೆ ವಿರುದ್ಧವಾಗಿದ್ದಾರೆ ಎಂದು ಟೀಕಿಸಿದರು.
ಕಾವೇರಿ ವಿಷಯದಲ್ಲಿ ಸರ್ಕಾರವೇ ಜನರ ಅಭಿಪ್ರಾಯಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಈ ಹಂತದಲ್ಲಿ ಪ್ರತಿಭಟನೆಗಳು, ಬಂದ್‍ಗಳು ಅನಗತ್ಯ ಎಂಬುದು ನಮ್ಮ ಅಭಿಪ್ರಾಯ. ಜನರ ಬೇಡಿಕೆಗೆ ಸ್ಪಂದಿಸದೇ ಇದ್ದಾಗ ಪ್ರತಿಭಟನೆ ನಡೆಸುವುದು ಸೂಕ್ತ. ಆದರೆ ಸರ್ಕಾರ ಕಾವೇರಿಯಲ್ಲಿನ ನಡಿನ ಹಿತಾಸಕ್ತಿಗೆ ಸಂಬಂಧಪಟ್ಟಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.