ಕಲಬುರಗಿ, ಸೆ.15- ಧರ್ಮಸ್ಥಳ ಹಾಗೂ ಚಾಮುಂಡೇಶ್ವರಿ ಚಲೋ ತಲಾ ನಾಲ್ಕು ದಿನ, ಮದ್ದೂರು ಚಲೋವನ್ನು ಎರಡು ದಿನ ನಡೆಸಿದರೆ ಸಾಕೆ? ಬಿಜೆಪಿಯವರ ಜವಾಬ್ದಾರಿ ಮುಗಿಯಿತೇ? ರಾಜ್ಯದಲ್ಲಿ ವ್ಯಾಪಕ ಮಳೆಯಾಗಿ ಬೆಳೆ ನಷ್ಟವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಎನ್‌ಡಿಆರ್‌ಎಫ್‌ನಿಂದ ಹೆಚ್ಚಿನ ಅನುದಾನ ತರುವ ಪ್ರಯತ್ನ ಮಾಡಲಿ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿಷಯದಲ್ಲಿ ಬಿಜೆಪಿಯವರಲ್ಲೇ ಗೊಂದಲ ನಿಲುವುಗಳಿವೆ. ನಾಲ್ಕು ದಿನ ಧರ್ಮಸ್ಥಳ ಚಲೋ ನಡೆಸಿದ ಬಳಿಕ, ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ್ದರು. ಅನಂತರ ಸೌಜನ್ಯ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಇವರು ಭೇಟಿ ಮಾಡಿದ ಸೌಜನ್ಯ ಅವರ ಮಾವನೇ ಈಗ ಧರ್ಮಸ್ಥಳದಲ್ಲಿ ರಾಶಿ-ರಾಶಿ ಅಸ್ಥಿಪಂಜರಗಳಿವೆ ಎಂದಿದ್ದಾರೆ. ಇದಕ್ಕೆ ಬಿಜೆಪಿಯವರ ಪ್ರತಿಕ್ರಿಯೆ ಏನು? ಎಂದು ಪ್ರಶ್ನಿಸಿದರು.
ಕೋಮು ಸೂಕ್ಷ್ಮ ವಿಚಾರಗಳನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಲಿ. ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸಲಿ. ಪ್ರಧಾನಿ ಮತ್ತು ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಹಿತಾಸಕ್ತಿ ಪರವಾಗಿ ಒತ್ತಡ ಹೇರಲಿ ಎಂದು ಆಗ್ರಹಿಸಿದ್ದರು.
ಬಿಜೆಪಿಯವರ ಭಾಷಣಗಳು ಸಂಪೂರ್ಣ ಪ್ರಚೋದನಕಾರಿಯಾಗಿವೆ. ತಲೆ ಕಡಿಯಿರಿ, ತೊಡೆ ಮುರಿಯಿರಿ ಎಂದು ಸಾರ್ವಜನಿಕವಾಗಿ ಕರೆ ನೀಡುತ್ತಿದ್ದಾರೆ. ಸಿ.ಟಿ.ರವಿ, ಪ್ರತಾಪ್‌ಸಿಂಹ ಅವರಂತಹ ಬಿಜೆಪಿ ನಾಯಕರು ತಮ ಮಕ್ಕಳಿಗೆ ಧರ್ಮಕ್ಕಾಗಿ ನೀನು ತಲೆ ಕಡಿ, ನಾನು ನಿನ್ನೊಂದಿಗೆ ಇರುತ್ತೇನೆ ಎಂದು ಡೈನ್ನಿಂಗ್ ಟೇಬಲ್‌ನಲ್ಲಿ ಹೇಳುತ್ತಾರೆಯೇ? ಬೇರೆಯವರ ಮಕ್ಕಳು ಪ್ರಚೋದನೆಯಾಗುವಂತೆ ಈ ರೀತಿ ಮಾತನಾಡುವುದು ಏಕೆ? ರಾಜ್ಯವನ್ನು ಬಿಹಾರ, ಉತ್ತರಪ್ರದೇಶ ಮಾಡಲು ಹೊರಟಿದ್ದಾರೆಯೇ ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರು ತಮ ಮಕ್ಕಳಿಗೆ ಕೇಸರಿ ಶಾಲು ಹಾಕಿಸಿ ಗಣೇಶೋತ್ಸವದ ಡಿಜೆ ಮುಂದೆ ಕುಣಿಸುತ್ತಾರೆಯೇ? ಇವರ ಮಾತುಗಳಿಂದ ಪ್ರಚೋದನೆಯಾಗುವ ಬಡವರ ಮಕ್ಕಳು, ಬದುಕನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಇಲ್ಲಿ ಕೋಮು ರಾಜಕೀಯ ಮಾಡಲಾಗುತ್ತಿದೆ. ಗಲಾಟೆಯಾಗಿ ಶವ ಬೀಳುವುದನ್ನೇ ಕಾಯುತ್ತಿರುತ್ತಾರೆ. ತಕ್ಷಣ ಸ್ಥಳಕ್ಕೆ ಹೋಗಿ ತಮ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಾರೆ ಎಂದು ಕಿಡಿ ಕಾರಿದರು.
ದೇಶ ಭಕ್ತರೂ ಎಂದು ಹೇಳಿಕೊಳ್ಳುವ ಬಿಜೆಪಿಯವರ ಆಡಳಿತದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯಾವಳಿ ಆಡಿದೆ. ಇದು ಅಂತಾರಾಷ್ಟ್ರೀಯ ವಿಷಯವಾಗಿರುವುದರಿಂದ ಆಟ ಆಡದೇ ಹೋದರೆ ಪಾಯಿಂಟ್‌್ಸ ಹೋಗುತ್ತದೆ ಎಂದು ಬಿಜೆಪಿಯವರು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಪಾಯಿಂಟ್‌್ಸ ಹೋದರೆ, ಏಷ್ಯಾಕಪ್ ಅಡದೆ ಹೋದರೆ, ಏನೂ ನಷ್ಟವಾಗುವುದಿಲ್ಲ. ಈ ಹಿಂದೆ ಶ್ರೀಲಂಕಾ ತಮಿಳರನ್ನು ಅಮಾನವೀಯರಾಗಿ ನಡೆಸಿಕೊಳ್ಳುತ್ತಿದೆ ಎಂಬ ಕಾರಣಕ್ಕೆ ಭಾರತ ಏಷ್ಯಾ ಕಪ್‌ನ್ನೇ ಬಹಿಷ್ಕರಿಸಿತ್ತು. ಅನೇಕ ದೇಶಗಳು ತಮ ಹಿತಾಸಕ್ತಿಗೆ ವಿರುದ್ಧ ಪ್ರಕ್ರಿಯೆಗಳು ನಡೆದಾಗ ಒಲಿಂಪಿಕ್‌್ಸನ್ನೇ ಬಹಿಷ್ಕಾರ ಮಾಡಿವೆ ಎಂದು ಹೇಳಿದರು.
ಬಿಸಿಸಿಐ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ. ಅದಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ಷಾ ಅವರ ಪುತ್ರ ಜೈಷಾ ಅಧ್ಯಕ್ಷರಾಗಿದ್ದಾರೆ. ಕ್ರಿಕೆಟ್‌ನ ಆಟದ ಆರ್ಥಿಕ ವ್ಯವಹಾರಕ್ಕೆ ಬಿಜೆಪಿ ತನ್ನ ಸಿದ್ಧಾಂತವನ್ನೇ ಮಾರಿಕೊಳ್ಳುತ್ತಿದೆಯೇ? ಬಿಸಿಸಿಐಗೆ ಪ್ರಧಾನಿಯವರು ಪಾಕಿಸ್ತಾನದ ಜೊತೆ ಆಟ ಬೇಡ ಎಂದು ಏಕೆ ಹೇಳಲಿಲ್ಲ. ಅಂತಹ ಧೈರ್ಯ ಬಿಜೆಪಿ ನಾಯಕರಿಗಿಲ್ಲವೇ? ಎಂದು ಪ್ರಶ್ನಿಸಿದರು.
ತಮ ಮಕ್ಕಳನ್ನು ಧರ್ಮ ರಕ್ಷಣೆಗಿಳಿಸಲು ಹಿಂದೇಟು ಹಾಕುವ ಬಿಜೆಪಿಯವರು ಬಡವರ ಮಕ್ಕಳನ್ನು ಬಾವಿಗೆ ತಳ್ಳುತ್ತಿದ್ದಾರೆ. ಅಭಿವೃದ್ಧಿ ವಿಚಾರವನ್ನು ಬಿಟ್ಟು, ಕೋಮು ಸೂಕ್ಷ್ಮ ವಿಷಯಗಳಿಗೆ ಒತ್ತು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ನೇಮಕಾತಿಗಳನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕೊಟ್ಟರೆ, ಅನಗತ್ಯವಾದ ವಿಳಂಬವಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ನೇಮಕಾತಿಗಳು ಶೀಘ್ರವಾಗಿ ಮುಗಿಯುತ್ತಿವೆ. ಕೆಪಿಎಸ್‌ಸಿ ಅನಗತ್ಯ ವಿಳಂಬ ಮಾಡುತ್ತಿದ್ದು, ಅದನ್ನು ಮುಚ್ಚುವುದೇ ಸೂಕ್ತ ಎಂದರು.
ಕೋಲಿ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಡುತ್ತಿದ್ದೇವೆ. ಕೇಂದ್ರ ಸರ್ಕಾರ, ರಾಜ್ಯಸರ್ಕಾರದ ಪ್ರಸ್ತಾವನೆ ಮೇಲೆ ಕೇಳಲಾಗಿರುವ ಅನುಮಾನಗಳಿಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಸಮುದಾಯದ ಮುಖಂಡರೂ ಹಾಗೂ ಅಧಿಕಾರಿಗಳ ಸಭೆ ನಡೆಸಿ, ತಳಿ ಶಾಸ್ತ್ರ ಅಧ್ಯಯನದ ಪ್ರಕಾರ ಸ್ಪಷ್ಟನೆ ನೀಡಲಾಗುತ್ತಿದೆ ಎಂದರು.
ರಸ್ತೆ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಜಿಲ್ಲಾಧಿಕಾರಿ ಖಾತೆಗೆ 30 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಮಳೆಗಾಲ ಮುಗಿದ ಬಳಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಲಹೆ ನೀಡಲಾಗಿದೆ ಎಂದರು.
ಮಳೆಹಾನಿ ಸಂಬಂಧಪಟ್ಟಂತೆ ಮೊದಲ ಸುತ್ತಿನ ಸಮೀಕ್ಷೆಯಾಗಿದ್ದು, ಅದರಲ್ಲಿ 1.05 ಲಕ್ಷ ಹೆಕ್ಟೇರಿನಲ್ಲಿ ಬೆಳೆ ಹಾನಿಯಾಗಿದೆ. ಎರಡನೇ ಸುತ್ತಿನ ಸಮೀಕ್ಷೆ ಶೀಘ್ರವೇ ನಡೆಯಲಿದೆ ಎಂದರು.