ಬೆಂಗಳೂರು,ಅ.13– ಸರ್ಕಾರಿ ಜಾಗ ಹಾಗೂ ಶಾಲಾ ಆವರಣ ಸೇರಿದಂತೆ ಮತ್ತಿತರ ಕಡೆ ಆರ್‌ಎಸ್‌ಎಸ್ ಬೆಂಬಲಿತ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ವಿವಾದದ ಬಿರುಗಾಳಿ ಎಬ್ಬಿಸಿದೆ.
ವಾಸ್ತವವಾಗಿ ಯಾವುದೇ ಒಂದು ಸಂಘಟನೆಯ ಚಟುವಟಿಕೆಗಳಿಗೆ ಕಡಿವಾಣ, ಇಲ್ಲವೇ ನಿರ್ಬಂಧ ಹಾಗೂ ನಿಷೇಧ ಹೇರಬೇಕೆಂದರೆ ಆ ಸಂಘಟನೆಯು ಕಾನೂನುಬಾಹಿರ ಚಟುವಟಿಕೆಗಳು ನಡೆಸಿರುವುದು, ದೇಶದ ಆಂತರಿಕ ಭದ್ರತೆಗೆ ಸಮಸ್ಯೆ ತರುವುದು, ಇಲ್ಲವೇ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಮಾತ್ರ ನಿರ್ಬಂಧಿಸಲು ಇಲ್ಲವೇ ಶಾಶ್ವತವಾಗಿ ಕಡಿವಾಣ ಹಾಕಲು ಕಾನೂನಿನಲ್ಲಿ ಅವಕಾಶವಿದೆ.
ಈ ಹಿಂದೆ ಸ್ಟೂಡೆಂಟ್‌್ಸ ಇಸ್ಲಾಮಿಕ್ ಮೊಮೆಂಟ್ಸ್ ಆಫ್ ಇಂಡಿಯಾ ( ಸಿಮಿ) ಹಾಗೂ ಪಾಪುಲರ್ ಫ್ರಂಟ್ ಆಫ್ ಇಂಡಿಯಾ( ಪಿಎಪ್ ಐ ) ಸಂಘಟನೆಗಳ ಚಟುವಟಿಕೆಯನ್ನು ನಿಯಂತ್ರಿಸಿ ಕೇಂದ್ರ ಸರ್ಕಾರ ನಿಷೇಧ ಮಾಡಿತ್ತು. ಈ ಎರಡು ಸಂಘಟನೆಗಳ ಉದ್ದೇಶವೇ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಎಂದು ಹೇಳಿಕೊಂಡಿದ್ದರು ಭಯೋತ್ಪಾದಕ ಸಂಘಟನೆಗಳ ಜೊತೆ ಕೈಜೋಡಿಸಿರುವುದು ಹಲವಾರು ಪ್ರಕರಣಗಳಲ್ಲಿ ರುಜುವತಾಗಿತ್ತು. ಹೀಗಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಿಮಿಯನ್ನು ನಿಷೇಧಿಸಿದರೆ ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ಪಿ ಪಿ ಎಫ್ ಐ ಯನ್ನು ನಿಷೇಧ ಮಾಡಿದ್ದರು.
ಕೇಂದ್ರೀಯ ತನಿಖಾ ಸಂಸ್ಥೆಗಳು ನಡೆಸಿದ ತನಿಖೆಯ ವೇಳೆ ಈ ಎರಡು ಸಂಘಟನೆಗಳು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳು ಹಾಗೂ ಭಯೋತ್ಪಾದಕ ಜೊತಗೆ ಜೊತೆ ಕೈಜೋಡಿಸಿದ್ದು ತನಿಖೆಯಲ್ಲಿ ಕಂಡುಬಂದಿದ್ದರಿಂದ ಕೇಂದ್ರ ಸರ್ಕಾರ ಇಂತಹ ದಿಟ್ಟ ಕ್ರಮವನ್ನು ತೆಗೆದುಕೊಂಡಿತ್ತು ಎಂಬುದನ್ನು ಸರಿಸಬಹುದು.
ಈಗ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ ಬರೆದಿರುವುದು ವಿವಾದಕ್ಕೆ ನಾಂದಿ ಹಾಡಿದ್ದು, ಇದರ ವಿರುದ್ಧ ಕೇಸರಿ ಪಡೆ ಕೆಂಡಾಮಂಡಲವಾಗಿದೆ. ಧಮು ತಾಕತ್ತು ಇದ್ದರೆ ನಿಷೇಧ ಮಾಡಿ ನೋಡಿ ಎಂದು ಬಹಿರಂಗ ಸವಾಲು ಹಾಕಿದೆ. ಆರ್ ಎಸ್ ಎಸ್ ಹಿನ್ನೆಲೆಯನ್ನು ಅವಲೋಕಿಸಿದಾಗ ಶಾಖೆಗಳ ಮೂಲಕ ನಡೆಸುತ್ತಿರುವ ಚಟುವಟಿಕೆಗಳು ಕಾನೂನು ಬಹಿರವಾಗಿ ನಡೆದಿಲ್ಲ ಎಂಬುದಕ್ಕೆ ಹಲವಾರು ನಿದರ್ಶನಗಳನ್ನು ಕೊಡಬಹುದು.
ಯಾವುದೇ ಮೂಲಭೂತ ಸಂಘಟನೆಗಳ ಜೊತೆ ಈವರೆಗೂ ಕೈ ಜೋಡಿಸಿಲ್ಲ. ದೇಶದ ಕಾನೂನಿಗೆ ವಿರುದ್ದವಾಗಿ ನಡೆದುಕೊಂಡಿದೆ ಎಂಬುದಕ್ಕೆ ಪುರಾವೆಗಳು ಇಲ್ಲ. ರಾಷ್ಟ್ರೀಯತೆ, ಸನಾತನ ಧರ್ಮ ರಕ್ಷಣೆ, ಭಾರತೀಯರೆಲ್ಲರೂ ಒಂದೇ ಸಂಸ್ಕೃತಿ , ಆಚಾರವಿಚಾರದಂತಹ ವಿಷಯಗಳಿಗೆ ಆದ್ಯತೆ ನೀಡಿಯೇ ಇಂದು ವಿಶ್ವದಲ್ಲೇ ಅತ್ಯಂತ ದೊಡ್ಡ ಸಂಘಟನೆಯಾಗಿ ಬೆಳೆದಿದೆ ಹೊರೆತು, ದೇಶದ್ರೋಹಿ ಚಟುವಟಿಕೆಗಳಲ್ಲಿ ಎಂದಿಗೂ ತೊಡಗಿಸಿಕೊಂಡಿಲ್ಲ.
ಗುಜರಾತ್‌ನ ಕಚ್, ಮಹಾರಾಷ್ಟ್ರದ ಲಾತೂರ್‌ನಲ್ಲಿ ಸಂಭವಿಸಿದ ಭೂಕಂಪ, ದೇಶದ ನಾನಾ ಭಾಗಗಳಲ್ಲಿ ಉಂಟಾದ ನೆರೆಹಾವಳಿ ಸಂತ್ರಸ್ಥರಿಗೆ ನೆರವು, ಕೋವಿಡ್ ವೇಳೆ ರಕ್ಷಣೆ ಸೇರಿದಂತೆ ಹತ್ತಾರು ಚಟುವಟಿಕೆಗಳಲ್ಲಿ ಸಂಘವು ಮಾನವೀಯ ಕೆಲಸಗಳನ್ನು ಮಾಡಿದೆ ಎಂಬುದನ್ನು ಸೈದ್ದಾಂತಿಕವಾಗಿ ವಿರೋಧಿಸುವವರೂ ಕೂಡ ಒಪ್ಪಿಕೊಳ್ಳುತ್ತಾರೆ ಎಂದು ಸಮರ್ಥಿಸಿಕೊಂಡಿದೆ.
ಮೂರು ಬಾರಿ ನಿಷೇಧ :
ಆರ್‌ಎಸ್‌ಎಸ್ ಈ ಹಿಂದೆ ಬೇರೆ ಬೇರೆ ಕಾರಣಗಳಿಂದ ಮೂರು ಬಾರಿ ನಿಷೇಧಕ್ಕೆ ಒಳಪಟ್ಟಿತ್ತು. ಹೀಗೆ ಮೂರು ಬಾರಿ ನಿಷೇಧ ಮಾಡಿದ್ದು, ಕಾಂಗ್ರೆಸ್ ಪಕ್ಷ! ಅಂದಹಾಗೆ ಈ ಮೂರು ನಿಷೇಧಗಳನ್ನು ಹಿಂಪಡೆದಿದ್ದು ಕೂಡಾ ಕಾಂಗ್ರೆಸ್ ಎಂಬುದು ಐತಿಹಾಸಿಕ ಸತ್ಯ. ಮಹಾತ ಗಾಂಧಿಯವರನ್ನು ನಾಥೂರಾಂ ಗೋಡ್ಸೆ ಕೊಂದ ಕೆಲವು ದಿನಗಳ ನಂತರ, ಫೆಬ್ರವರಿ 4, 1948ರಂದು ಆರೆಸ್‌ಎಸ್ ಅನ್ನು ನಿಷೇಧಿಸಲಾಯಿತು. ದೇಶದಲ್ಲಿ ಅಶಾಂತಿ, ದ್ವೇಷ ಹರಡಿದ್ದು, ಹಿಂಸಾಚಾರಕ್ಕೆ ಕುಮಕ್ಕು ನೀಡುವ ಶಕ್ತಿಗಳನ್ನು ಬೇರುಸಹಿತ ಕಿತ್ತೆಸೆಯಲು ಆರೆಸ್‌ಎಸ್ ಮೇಲೆ ನಿಷೇಧವನ್ನು ಹೇರಲಾಗುತ್ತಿದೆ ಎಂದು ಸರ್ಕಾರ ಆ ಸಂದರ್ಭದಲ್ಲಿ ಹೇಳಿತ್ತು.
1948ರಲ್ಲಿ ಆರ್‌ಎಸ್‌ಎಸ್ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆಯಲು ಹಲವಾರು ಮನವಿಗಳು ಕೇಳಿ ಬಂದಿದ್ದವು. ಆಗಿನ ಸರಸಂಘಚಾಲಕ್ ಎಂಎಸ್ ಗೋಲ್ವಾಲ್ಕರ್ ಅವರು ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಭೇಟಿ ಮಾಡಿದರು ಮತ್ತು ಪಟೇಲ್ ಮತ್ತು ಪ್ರಧಾನಿ ಜವಾಹರಲಾಲ್ ನೆಹರು ಇಬ್ಬರಿಗೂ ಪತ್ರ ಬರೆದಿದ್ದರು. ಸರ್ಕಾರದೊಂದಿಗಿನ ಮಾತುಕತೆ ವಿಫಲವಾದ ನಂತರ, ಸ್ವಯಂಸೇವಕರು ಡಿಸೆಂಬರ್ 9, 1948ರಂದು ಸಂಘದ ಮೇಲಿನ ನಿಷೇಧವನ್ನು ತೆಗೆದುಹಾಕಲು ಒತ್ತಾಯಿಸಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು. ಈ ಎಲ್ಲಾ ಹೋರಾಟಗಳ ಒಂದು ವರ್ಷದ ನಂತರ, ಜುಲೈ 11, 1949ರಂದು ನಿಷೇಧವನ್ನು ತೆಗೆದುಹಾಕಲಾಯಿತು.
ತುರ್ತು ಪರಿಸ್ಥಿತಿಯಲ್ಲಿ ನಿಷೇಧ:
ಇಂದಿರಾಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದ ಈ ವೇಳೆ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲಾಗಿತ್ತು. ಈ ಸಂದರ್ಭದಲ್ಲಿ ಆರೆಎಸ್‌ಎಸ್ ಮೇಲೆ ಹಿಡಿತ ಸಾಧಿಸಲು ಇಂದಿರಾಗಾಂಧಿ ನೇತೃತ್ವದ ಸರ್ಕಾರ ದಿಟ್ಟ ಹೆಜ್ಜೆ ಇರಿಸಿತ್ತು ಇದೇ ಉದ್ದೇಶದಿಂದ ಹಾಗೂ ಆರೆಎಸ್‌ಎಸ್ ಕಾರ್ಯ ಚಟುವಟಿಕೆಗಳ ಮೊಟಕುಗೊಳಿಸುವ ಉದ್ದೇಶದಿಂದ 1975ರಲ್ಲಿ ಈ ಸಂಘಟನೆಯನ್ನು ನಿಷೇಧ ಮಾಡಲಾಗಿತ್ತು. ಜೂನ್ 25, 1975ರಲ್ಲಿ ಇಂದಿರಾಗಾಂಧಿ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿ ಹೇರಿದ ನಂತರ, ಜುಲೈ 4 ರಂದು ನಿಷೇಧಿಸಲಾಗಿತ್ತು.
ಇಂದಿರಾ ಗಾಂಧಿಗೆ ಪತ್ರ ಬರೆದ ಬಾಳಾಸಾಹೇಬ್ ನಿಷೇಧ ಆದೇಶವು ನಿಷೇಧಕ್ಕೆ ನಿರ್ದಿಷ್ಟ ಕಾರಣನೀಡುವುದಿಲ್ಲ.
ದೇಶದ ಆಂತರಿಕ ಭದ್ರತೆ ಮತ್ತು ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಏನನ್ನೂ ಆರೆಸ್‌ಎಸ್ ಎಂದಿಗೂ ಮಾಡಿಲ್ಲ. ಇಡೀ ಹಿಂದೂ ಸಮಾಜವನ್ನು ಸಂಘಟಿಸುವುದು ಮತ್ತು ಅದನ್ನು ಏಕರೂಪ ಮತ್ತು ಸ್ವಾಭಿಮಾನಿಯನ್ನಾಗಿ ಮಾಡುವುದು ಸಂಘದ ಉದ್ದೇಶವಾಗಿದೆ. ಸಂಘವು ಎಂದಿಗೂ ಹಿಂಸಾಚಾರದಲ್ಲಿ ತೊಡಗಿಲ್ಲ ಎಂಬುದನ್ನು ಸ್ಪಷ್ಟಪಡಿಸುವುದು ಅವಶ್ಯಕ. ಹಿಂಸೆಯನ್ನು ಎಂದೂ ಕಲಿಸಿಲ್ಲ. ಸಂಘವು ಅಂತಹ ವಿಷಯಗಳನ್ನು ನಂಬುವುದಿಲ್ಲ ಎಂದು ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದರು. ಹಲವಾರು ಸುತ್ತಿನ ಮಾತುಕತೆಗಳ ನಂತರ, ತುರ್ತು ಪರಿಸ್ಥಿತಿ ಕೊನೆಗೊಂಡಾಗ ಮಾರ್ಚ್ 22, 1977 ರಂದು ಆರೆಸ್ಸೆಸ್ ಮೇಲೆ ಹೇರಿದ್ದ ನಿಷೇಧವನ್ನು ತೆಗೆದುಹಾಕಲಾಯಿತು.
ಬಾಬರಿ ಮಸೀದಿ ಧ್ವಂಸ
ಇದೆಲ್ಲ ಮುಗಿದ ಬಳಿಕ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಸಂಭವಿಸಿತ್ತು. ಈ ಪ್ರಕರಣ ದೇಶದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.ಈ ವೇಳೆ ಪಿವಿ ನರಸಿಂಹ ರಾವ್ ಅವರು ದೇಶದ ಪ್ರಧಾನಿಯಾಗಿದ್ದರು. ಶಂಕರರಾವ್ ಬಲವಂತರಾವ್ ಚವಾಣ್ ಅವರು ಅಂದಿನ ಗೃಹ ಸಚಿವರಾಗಿದ್ದರು. ಈ ವೇಳೆ ಆರೆಸ್‌ಎಸ್ ಅನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.ಅಯೋಧ್ಯೆಯಲ್ಲಿನ ಬಾಬರಿ ಮಸೀದಿಯನ್ನು ಡಿಸೆಂಬರ್ 6, 1992 ರಂದು ಕೆಡವಲಾಯಿತು.ನ್ಯಾಯಮೂರ್ತಿ ಬಹ್ರಿ ಆಯೋಗವು ಅನ್ಯಾಯ ಎಂದು ಹೇಳಿದ ನಂತರ ಜೂನ್ 4, 1993 ರಂದು ಮೂರನೇ ನಿಷೇಧವನ್ನು ತಿಂಗಳೊಳಗೆ ತೆಗೆದುಹಾಕಿತು.