ಬೆಂಗಳೂರು,ಜು.18- ರಾಜ್ಯದ ಯಾವುದೇ ಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು ಕಂಡುಬಂದರೆ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮಾಪುರ ಎಚ್ಚರಿಸಿದ್ದಾರೆ.
ಸದಸ್ಯ ಅನಿಲ್‌ಕುಮಾರ್‌ರವರ ಪ್ರಶ್ನೆಗೆ ಉತ್ತರಿಸಿದ ಅವರು, ನಿರ್ಧಿಷ್ಟವಾಗಿ ಇಂತಹ ಕಡೆ ಯಾರಾದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ದಾಖಲೆ ಸಮೇತ ನೀಡಿದರೆ ಖಂಡಿತವಾಗಿ ಕಾನೂನು ಕ್ರಮ ಜರುಗಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲಿ ನಡೆಯುತ್ತದೆ, ಇಲ್ಲಿ ನಡೆಯುತ್ತದೆ ಎಂದು ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ನಮಗೆ ನಿರ್ಧಿಷ್ಟವಾಗಿ ನೀವು ದೂರು ನೀಡಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಅನಿಲ್‌ಕುಮಾರ್ ಮಾತನಾಡಿ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಕಡೆ ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಯುವಕರು ದಾರಿ ತಪ್ಪಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳು, ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸದಸ್ಯರ ಗಮನ ಸೆಳೆದರು.
ಕೋಲಾರದಲ್ಲಿ ಗೋಪಿ ಎಂಬ ಎಫ್‌ಡಿ ಅಧಿಕಾರಿ 14 ವರ್ಷದಿಂದ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಏಕೆ ವರ್ಗಾವಣೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.ಈ ವೇಳೆ ಸಚಿವ ತಿಮಾಪುರ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಆ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತೇವೆ. ಇಲಾಖೆಯಲ್ಲಿ ಪಾರದರ್ಶಕತೆ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.