ಬೆಂಗಳೂರು ಫೆ.23- ಫೆರಾರಿ ಕಾರು, ಜಿಎಸ್‍ಟಿ ಪಾವತಿಸುವವರು, ಜಮೀನುದಾರರು ಸೇರಿದಂತೆ ಆರ್ಥಿಕ ಸುಸ್ಥಿತಿಯಲ್ಲಿರುವವರೇ ಕಾರ್ಮಿಕ ಇಲಾಖೆಯ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಹಿರಂಗಪಡಿಸಿದ್ದಾರೆ. ವಿಧಾನಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಮಿಕ ಇಲಾಖೆಯಡಿ ಹೆಚ್ಚಿನ ಸವಲತ್ತುಗಳು ಸಿಗುತ್ತಿರುವ ಕಾರಣ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಸ್ಥಿತಿವಂತರೇ ನಮ್ಮ ಇಲಾಖೆಯಡಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರದ ಮೂಲಕ ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು.
2007ರಲ್ಲಿ ಕಾರ್ಮಿಕರ ಮಂಡಳಿ ಸ್ಥಾಪನೆಯಾಗಿತ್ತು. ಪ್ರಾರಂಭದಲ್ಲಿ ಮೂರು ಲಕ್ಷ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದರು. 2007ರಲ್ಲಿ ಇದರ ಸಂಖ್ಯೆ 12 ಲಕ್ಷ ಇದ್ದು ಕಾರ್ಮಿಕರ ಸಂಖ್ಯೆ ಇದ್ದಕ್ಕಿದ್ದಂತೆ 39 ಲಕ್ಷಕ್ಕೆ ಏರಿಕೆಯಾಯಿತು. ಇದೀಗ ಇದು 51 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು. ಕೆಲವು ಕಾರ್ಮಿಕರ ನೋಂದಣಿಗೆ ಒತ್ತಡಗಳು ಇರುತ್ತವೆ. 51 ಲಕ್ಷದಲ್ಲಿ 46 ಲಕ್ಷ ಕಾರ್ಮಿಕರು ಅರ್ಹರಿದ್ದರೆ ಉಳಿದವರು ಅನರ್ಹರಾಗಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ 3 ಲಕ್ಷ ಕಾಮಿಕರಲ್ಲಿ 2.7 ಲಕ್ಷ ಕಾರ್ಮಿಕರು ಅನರ್ಹರಿದ್ದಾರೆ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನೋಂದಣಿಯಾಗಿರುವ ಕಾರ್ಮಿಕರು ಅರ್ಹರೋ ಅಥವಾ ಅನರ್ಹರೋ ಎಂಬುದನ್ನು ಅಂಬೇಡ್ಕರ್ ಸೇವಾ ಕೇಂದ್ರದ ಮೂಲಕ ತನಿಖೆ ಮಾಡಿಸುತ್ತೇವೆ ಎಂದರು. ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಹೊರಗುತ್ತಿಗೆ ಪಡೆದುಕೊಂಡು ತನಿಖೆ ಮಾಡಿಸುತ್ತೇವೆ. ಯಾವುದೇ ಒಬ್ಬ ಕಾರ್ಮಿಕ ನೋಂದಣಿ ಮಾಡಿಕೊಳ್ಳಬೇಕಾದರೆ ಗ್ರಾಮಪಂಚಾಯ್ತಿಯ ಪಿಡಿಒ ಇಂದ ಹಿಡಿದು ವಿವಿಧ ಹಂತಗಳಲ್ಲಿ ಪರಿಶೀಲನೆಯಾದ ಬಳಿಕವೇ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆದರೆ ಸರ್ಕಾರದ ಸವಲತ್ತುಪಡೆಯುವ ಏಕೈಕ ಉದ್ದೇಶದಿಂದಲೇ ಆರ್ಥಿಕವಾಗಿ ಸದೃಢ ಇರುವವರು ಇದರಲ್ಲಿ ಸೇರಿಕೊಂಡಿದ್ದಾರೆ. ತನಿಖೆ ನಡೆದ ನಂತರ ಇದರ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ಹೇಳಿದರು.+
ಭಾರತವು 10 ಟ್ರಿಲಿಯನ್‍ಡಾಲರ್ ಆರ್ಥಿಕತೆಯ ಹಾದಿಯಲ್ಲಿದೆ-ಡಬ್ಲೂಇಎಫ್
ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ಸಿಗಬೇಕೆಂಬುದು ನಮ್ಮ ಉದ್ದೇಶ. ತನಿಖೆಯಲ್ಲಿ ಅನರ್ಹರು ಇದ್ದರೆ ಮುಲಾಜಿಲ್ಲದೆ ತೆಗೆದು ಹಾಕುತ್ತೇವೆ. ಒಂದು ವೇಳೆ ಇದರಲ್ಲಿ ಅಧಿಕಾರಿಗಳು ಶಾಮೀಲಾಗಿರುವುದು ಕಂಡುಬಂದರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.