Monday, March 31, 2025
Homeರಾಜ್ಯದೇವೇಗೌಡರ ಭೇಟಿಗೆ ಸ್ಪಷ್ಟನೆ ನೀಡಿದ ಸಚಿವ ಸತೀಶ್‌ ಜಾರಕಿಹೊಳಿ

ದೇವೇಗೌಡರ ಭೇಟಿಗೆ ಸ್ಪಷ್ಟನೆ ನೀಡಿದ ಸಚಿವ ಸತೀಶ್‌ ಜಾರಕಿಹೊಳಿ

Minister Satish Jarkiholi clarifies on Deve Gowda's meeting

ಬೆಂಗಳೂರು,ಮಾ.28-ದೆಹಲಿ ಭೇಟಿಯ ಹಿಂದೆ ಯಾವುದೇ ರಾಜಕೀಯ ಪ್ರಸ್ತಾಪವಿಲ್ಲ. ಕೇವಲ ಅಭಿವೃದ್ಧಿ ವಿಚಾರಗಳಷ್ಟೇ ಚರ್ಚೆಯಾಗಿವೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ, ವಿ.ಸೋಮಣ್ಣ ಸೇರಿದಂತೆ ಕೇಂದ್ರ ಸಚಿವರ ಭೇಟಿ ಪೂರ್ವ ನಿಗದಿಯಾಗಿತ್ತು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಭೇಟಿ ಆಕಸಿಕ. ಸಂಸತ್‌ಗೆ ತೆರಳುವ ಮಾರ್ಗದಲ್ಲಿ ಅವರ ಕಚೇರಿಯಿದ್ದು, ಅಲ್ಲಿ ಅವರನ್ನು ಭೇಟಿ ಮಾಡಿದ್ದಾಗಿ ಹೇಳಿದರು.

ಹಾಸನದ ಹೆದ್ದಾರಿ ವಿಚಾರವಾಗಿ ರೇವಣ್ಣ ಅವರ ಜೊತೆಯೂ ಚರ್ಚೆ ನಡೆಸಬೇಕಿತ್ತು. ಆದರೆ ಆ ವೇಳೆಗೆ ಅವರು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರ ಜೊತೆ ಚರ್ಚಿಸಲು ತೆರಳಿದ್ದರು. ಹೀಗಾಗಿ ಅವರ ಭೇಟಿ ಸಾಧ್ಯವಾಗಲಿಲ್ಲ ಎಂದರು.

ತಮ ದೆಹಲಿ ಭೇಟಿಯ ವೇಳೆ ಹನಿಟ್ರಾಪ್‌ಗೆ ಸಂಬಂಧಪಟ್ಟಂತೆ ಯಾವುದೇ ಚರ್ಚೆಗಳಾಗಿಲ್ಲ. ದೆಹಲಿಗೆ ಹೋಗಿ ರಾಜಕೀಯದ ದೂರುಗಳನ್ನು ನೀಡುವ ಅಗತ್ಯ ತಮಗಿಲ್ಲ ಎಂದು ಹೇಳಿದರು.ಕಾಂಗ್ರೆಸ್‌‍ ಪಕ್ಷಕ್ಕೆ ಈಗಾಗಲೇ 138 ಮಂದಿ ಶಾಸಕರಿದ್ದಾರೆ. ಜೆಡಿಎಸ್‌‍ನ ಕುಮಾರಸ್ವಾಮಿಯವರ ಸಹಕಾರದ ಪ್ರಶ್ನೆ ಉದ್ಭವಿಸುವುದಿಲ್ಲ. ಕುಮಾರಸ್ವಾಮಿ, ಸೋಮಣ್ಣ ಅವರಂತೆ ಪ್ರಹ್ಲಾದ್‌ ಜೋಷಿ ಅವರನ್ನೂ ಭೇಟಿ ಮಾಡಿದ್ದಾನೆ. ಬೆಳಗಾವಿ ವಿಮಾನ ನಿಲ್ದಾಣದ ಕಾಮಗಾರಿ ಸ್ಥಗಿತಗೊಂಡಿದೆ. ಅವುಗಳನ್ನು ಚುರುಕುಗೊಳಿಸುವ ಸಲುವಾಗಿ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸಚಿವರನ್ನು ಭೇಟಿ ಮಾಡಿದಂತೆ ನಮ ಪಕ್ಷದ ಕೆ.ಸಿ.ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿದ್ದೇನೆ. ದೆಹಲಿಗೆ ಹೋದ ಮೇಲೆ ವರಿಷ್ಠರನ್ನು ಸಂಧಿಸಿ ಸಮಾಲೋಚನೆ ನಡೆಸುವುದು ಸಾಮಾನ್ಯ. ಅದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಪರಿಶಿಷ್ಟ ಸಮುದಾಯಗಳ ಶಾಸಕರು ಮತ್ತು ಮುಖಂಡರ ಸಭೆಗೆ ಅನುಮತಿ ಪಡೆದುಕೊಳ್ಳುವ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ವೇಣಗೋಪಾಲ್‌ ಮತ್ತು ರಣದೀಪ್‌ ಸಿಂಗ್‌ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಲಿದ್ದಾರೆ. ಆ ವೇಳೆ ಅವರ ಜೊತೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.

ಹನಿಟ್ರಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಕೆ.ಎನ್‌.ರಾಜಣ್ಣ ಈಗಾಗಲೇ ದೂರು ನೀಡಿದ್ದಾರೆ. ಅದೇ ರೀತಿ ಕೊಲೆಯತ್ನದ ಕುರಿತು ಅವರ ಪುತ್ರ ರಾಜೇಂದ್ರ ರಾಜಣ್ಣ ಕೂಡ ದೂರು ನೀಡಿದ್ದು, ತನಿಖೆ ನಡೆದು ಎಲ್ಲವೂ ಹೊರಬರಲಿದೆ. ಸಿಐಡಿ, ಸಿಬಿಐ ನ್ಯಾಯಾಂಗ ತನಿಖೆಗಳು ಬೇರೆ ಸ್ವರೂಪ ಹೊಂದಿವೆ. ಯಾವುದೇ ಆದರೂ ಸತ್ಯ ಹೊರಬರಬೇಕೆಂದರು.

ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. ಈಗಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ತಮ ಸರದಿ 2028ಕ್ಕೆ ಮೆಜೆಸ್ಟಿಕ್‌ನ ಟ್ರಾಫಿಕ್‌ ಜಾಮ್‌ನಲ್ಲಿ ನಮಗೆ ಅವಕಾಶ ಸಿಕ್ಕರೂ ಸಿಗಬಹುದು ಎಂದು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಉತ್ತರಿಸಿದರು. ಸಚಿವ ಎಂ.ಬಿ.ಪಾಟೀಲ್‌ ಇಂದು ತಮನ್ನು ಭೇಟಿ ಮಾಡಿದ್ದು ಔಪಚಾರಿಕವಾಗಿ ಅಷ್ಟೇ. ಅದರಲ್ಲಿ ವಿಶೇಷವೇನಿಲ್ಲ ಎಂದರು. ಗುತ್ತಿಗೆದಾರರ ಬಾಕಿ ಬಿಲ್‌ ನಮಲ್ಲಿ ಯಾವುದೂ ನೆನೆಗುದಿಗೆ ಬಿದ್ದಿಲ್ಲ. ಕಾಲಕಾಲಕ್ಕೆ ಎಲ್ಲವನ್ನೂ ಇತ್ಯರ್ಥಪಡಿಸಲಾಗುತ್ತಿದೆ ಎಂದು ಹೇಳಿದರು.

RELATED ARTICLES

Latest News